ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣಿ ಚನ್ನಮ್ಮ ಮೃಗಾಲಯದ ಸಮಗ್ರ ಅಭಿವೃದ್ಧಿಗೆ ಯೋಜನೆ

ಮೂರು ಸಿಂಹಗಳು 2 ತಿಂಗಳಲ್ಲಿ ಸಾರ್ವಜನಿಕ ವೀಕ್ಷಣೆಗೆ ಮುಕ್ತ
Last Updated 2 ಮಾರ್ಚ್ 2021, 14:17 IST
ಅಕ್ಷರ ಗಾತ್ರ

ಬೆಳಗಾವಿ: ‘ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ–4ಕ್ಕೆ ಹೊಂದಿಕೊಂಡಿರುವ ತಾಲ್ಲೂಕಿನ ಭೂತರಾಮನಹಟ್ಟಿ ಸಮೀಪದಲ್ಲಿರುವ ರಾಣಿ ಚನ್ನಮ್ಮ ಮೃಗಾಲಯಕ್ಕೆ ಮೂರು ಸಿಂಹಗಳನ್ನು ತರಿಸಲಾಗಿದೆ. ಅವುಗಳನ್ನು ಇನ್ನೆರಡು ತಿಂಗಳಲ್ಲಿ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು. ಚಿರತೆ, ಹುಲಿ ಹಾಗೂ ಕರಡಿಗಳನ್ನು ಕೂಡ ಶೀಘ್ರದಲ್ಲೇ ತರಿಸಲಾಗುವುದು’ ಎಂದು ಶಾಸಕ ಸತೀಶ ಜಾರಕಿಹೊಳಿ ತಿಳಿಸಿದರು.

ಮೃಗಾಲಯದಲ್ಲಿ ಮಂಗಳವಾರ ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೈಸೂರು ಮೃಗಾಲಯದ ಮಾದರಿಯಲ್ಲಿ ಇದನ್ನೂ ಅಭಿವೃದ್ಧಿಪಡಿಸಲು ₹ 50 ಕೋಟಿ ಯೋಜನೆ ರೂಪಿಸಲಾಗಿದೆ. ಹಂತ ಹಂತವಾಗಿ ಈ ಕಾರ್ಯ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

‘ಇಲ್ಲಿಗೆ ಸಿಂಹಗಳನ್ನು ತರಿಸಿರುವುದರಿಂದ, ಜನರು ಅವುಗಳನ್ನು ನೋಡುವುದಕ್ಕಾಗಿ ಮೈಸೂರು ಝೂಗೆ ಹೋಗುವುದು ತಪ್ಪಲಿದೆ. ಮೊದಲ ಹಂತದಲ್ಲಿ ಎರಡು ವರ್ಷದಲ್ಲಿ ₹ 14 ಕೋಟಿ ವೆಚ್ಚದಲ್ಲಿ ಮೃಗಾಲಯ ಅಭಿವೃದ್ಧಿಗೊಳಿಸಲಾಗಿದೆ. ನಾನು ಅರಣ್ಯ ಸಚಿವನಾಗಿದ್ದ ಸಂದರ್ಭದಲ್ಲೇ ಹಲವು ಯೋಜನೆಗೆ ಚಾಲನೆ ನೀಡಲಾಗಿತ್ತು. ಮೈಸೂರು ಝೂ ಮೊದಲಾದ ಕಡೆ ಸಂಗ್ರಹವಾದ ಆದಾಯದಲ್ಲಿನ ಕೊಂಚ ಪಾಲನ್ನು ಇಲ್ಲಿಗೆ ಬಳಸಿಕೊಳ್ಳಲಾಗಿದೆ. ಹುಲಿ ಸಫಾರಿಗೂ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.

₹ 4.50 ಕೋಟಿಯ ಯೋಜನೆ:

‘ಮೃಗಾಲಯದಲ್ಲಿ ನೀರಿನ ಕೊರತೆ ನೀಗಿಸುವುದಕ್ಕಾಗಿ, ಸಮೀಪದ ಮಾರ್ಕಂಡೇಯ ನದಿಯಿಂದ ನೀರು ಪಡೆಯಲಾಗುವುದು. ಮೃಗಾಲಯದ ಒಳಗೆ, ಉದ್ಯೋಗ ಖಾತ್ರಿ ಯೋಜನೆಯಲ್ಲಿ 2 ಕರೆಗಳನ್ನು ನಿರ್ಮಿಸಲಾಗುತ್ತಿದೆ. ಅವುಗಳನ್ನು ತುಂಬಿಸಿಕೊಳ್ಳಲಾಗುವುದು. ಇದರಿಂದ, ಬೇಸಿಗೆ ಸಂದರ್ಭದಲ್ಲಿ ನೀರಿನ ಕೊರತೆ ನೀಗಲಿದೆ. ಇದಕ್ಕಾಗಿ ₹ 4.50 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಅಲ್ಲದೆ, ಮೃಗಾಲಯದ ಸುತ್ತಮುತ್ತಲೂ ಅರಣ್ಯ ಇಲಾಖೆಯ ಜಾಗವೇ ಇರುವುದರಿಂದ ವಿಸ್ತರಣೆಗೂ ಅವಕಾಶವಿದೆ. ಇದನ್ನು ಬಳಸಿಕೊಳ್ಳಲಾಗುವುದು’ ಎಂದರು.

‘ಸಫಾರಿಗೆ ಬೇಕಾಗುವ ವಾಹನಗಳ ಪೂರೈಕೆಗೆ ಜಿಲ್ಲಾಧಿಕಾರಿ ಕಚೇರಿಗೆ ಬೇಡಿಕೆ ಸಲ್ಲಿಸಲಾಗುವುದು. ಇಲ್ಲಿ ಪ್ರಾಣಿಗಳ ಚಿಕಿತ್ಸೆಗೆ ಆಸ್ಪತ್ರೆಯನ್ನೂ ಮಾಡಲಾಗುವುದು. ಅಗತ್ಯ ಸಿಬ್ಬಂದಿ ಒದಗಿಸುವಂತೆ ಇಲಾಖೆಯನ್ನು ಕೋರಲಾಗಿದೆ. ಅಭಿವೃದ್ಧಿ ಕಾರ್ಯಕ್ಕೆ ನಗರಪಾಲಿಕೆಯಿಂದಲೂ ಅನುದಾನ ಕೇಳಿದ್ದೇವೆ. ಸಫಾರಿ ವಾಹನಗಳಿಗಾಗಿ ಪ್ರಾಯೋಜಕತ್ವ ಪಡೆಯುವ ಪ್ರಯತ್ನವನ್ನೂ ನಡೆಸಿದ್ದೇವೆ’ ಎಂದು ತಿಳಿಸಿದರು.

ಬೆಳಗಾವಿ ವೃತ್ತದ ಸಿಸಿಎಫ್‌ ಬಸವರಾಜ ಪಾಟೀಲ ಮಾತನಾಡಿ, ‘ಆಸಕ್ತರು ಪ್ರಾಣಿಗಳನ್ನು ದತ್ತು ಪಡೆಯಲು ಅವಕಾಶವಿದೆ. ಹುಲಿ, ಸಿಂಹಗಳನ್ನು ದತ್ತು ಪಡೆಯಲು ವರ್ಷಕ್ಕೆ ₹ 1 ಲಕ್ಷ, ಉಳಿದ ಪ್ರಾಣಿ–ಪಕ್ಷಿಗಳಿಗೆ ವರ್ಷಕ್ಕೆ ಸರಾಸರಿ ₹ 7,500 ಕೊಡಬೇಕಾಗುತ್ತದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಅರುಣ ಕಾಟಾಂಬಳೆ, ಸದಸ್ಯ ಸಿದ್ದು ಸುಣಗಾರ, ಡಿಎಫ್‌ಒ ಅಮರನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT