ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿಯತ್ರಿಯರ ಸಮ್ಮೇಳನ ಸಂಪನ್ನ

ಪಂಜಾಬ್‌ನ ಅಮೃತಸರದಲ್ಲಿ 23ನೇ ಸಮ್ಮೇಳನ ನಡೆಸಲು ನಿರ್ಣಯ
Last Updated 31 ಜನವರಿ 2023, 5:55 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಶಿವಬಸವ ನಗರದ ಡಾ.ಎಸ್‌.ಜಿ. ಬಾಳೇಕುಂದ್ರಿ ತಾಂತ್ರಿಕ ಸಂಸ್ಥೆ ಸಭಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ 22ನೇ ಅಖಿಲ ಭಾರತ ಕವಯತ್ರಿಯರ ಸಮ್ಮೇಳನ ಸೋಮವಾರ ಸಂಪನ್ನಗೊಂಡಿತು.

ಪಂಜಾಬ್‌ನ ಅಮೃತಸರದಲ್ಲಿ 23ನೇ ಸಮ್ಮೇಳನ ನಡೆಸುವ ನಿರ್ಣಯ ಕೈಗೊಳ್ಳಲಾಯಿತು.

ಪದಾಧಿಕಾರಿಗಳ ಆಯ್ಕೆ: ಆಲ್‌ ಇಂಡಿಯಾ ಪೋಯಿಟ್‌ ಕಾನ್ಫರೆನ್ಸ್‌(ಎಐಪಿಸಿ) ರಾಷ್ಟ್ರೀಯ ಅಧ್ಯಕ್ಷೆಯಾಗಿ ಅಸ್ಸಾಂನ ಮೋನೋಮತಿ ಕುರಮಿ, ಉಪಾಧ್ಯಕ್ಷರಾಗಿ ವಿಜಯಲಕ್ಷ್ಮಿ ಕೋಸಗಿ, ಮಂಗಲಾ ಮೆಟಗುಡ್ಡ, ಜ್ಯೋತಿ ಬದಾಮಿ, ಡಾ.ಕೆ.ಪಿ.ಸುಧೀರಾ, ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಡಾ.ಸರೋಜಾ ಜಿ.ಎಸ್‌. ಅವರನ್ನು ಆಯ್ಕೆ ಮಾಡಲಾಯಿತು.

ಸಾಧಕಿಯರಿಗೆ ಪ್ರಶಸ್ತಿ: ಬೀದರ್‌ನ ಕಾವ್ಯ ಹನುಮಂತಪ್ಪ ‘ಮಿಸ್‌ ಟೀನ್‌’, ಅಸ್ಸಾಂನ ಸೀಮಾ ಬರುವಾ ‘ಮಿಸ್‌ ಟ್ರಿಪ್‌ ಹ್ಯಾಟ್ರಿಕ್‌’, ಮೇಘಾಲಯದ ಜಾಕ್ಲಿನ್‌ ಮರಾಕ್‌ ‘ಮಿಸ್‌ ಬ್ಯೂಟಿ ವಿಥ್‌ ಬ್ರೇನ್‌’, ಬೆಳಗಾವಿಯ ಶೈಲಜಾ ಕುಲಕರ್ಣಿ ‘ಮಿಸ್‌ ಪಾಪ್ಯುಲರ್‌’, ಆಶಾ ಕಡಪಟ್ಟಿ ‘ಮಿಸ್‌ ಬೆಳಗಾವಿ–2023’, ಜ್ಯೋತಿ ಕಟ್ಟಿ ‘ಮಿಸ್‌ ಎಐಪಿಸಿ’, ಆರತಿ ಅಂಗಡಿ ‘ಮಿಸ್‌ ಕರ್ನಾಟಕ’, ಜ್ಯೋತಿ ಬದಾಮಿ ‘ಮಿಸ್‌ ಇಂಡಿಯಾ’ ಪ್ರಶಸ್ತಿಗೆ ಭಾಜನರಾದರು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಎಐಪಿಸಿ ಗೌರವ ಸಂಸ್ಥಾಪಕ ಡಾ.ಲಾರಿ ಆಜಾದ್‌, ‘ಮುಂದಿನ 10 ವರ್ಷಗಳಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳ ಅಧ್ಯಕ್ಷರು ಮತ್ತು ಪ್ರಧಾನಿಗಳು ಮಹಿಳೆಯರೇ ಆಗಿರುತ್ತಾರೆ. ನಮ್ಮಲ್ಲಿ ಈಗ ಪಿತೃಪ್ರಧಾನ ಸಮಾಜ ಮತ್ತು ವ್ಯವಸ್ಥೆ ಇದೆ. ಮುಂದಿನ ದಿನಗಳಲ್ಲಿ ಮಹಿಳಾ ಪ್ರಧಾನ ಸಮಾಜ ನಿರ್ಮಾಣವಾಗಲಿದೆ’ ಎಂದರು.

‘ಭಾಷಾ ಸೌಹಾರ್ದದ ಮೂಲಕ ಎಲ್ಲರಲ್ಲೂ ಏಕತೆಯ ಭಾವ ಮೂಡಿಸುವುದೇ ಈ ಸಮ್ಮೇಳನದ ಉದ್ದೇಶವಾಗಿದೆ. ಹಲವು ರಾಜ್ಯಗಳ ಕವಯತ್ರಿಯರು ಭಾಗವಹಿಸಿರುವುದು ಖುಷಿ ತಂದಿದೆ’ ಎಂದರು.

ಮೋನೋಮತಿ ಕುರಮಿ, ‘ತಮಗೆ ವಹಿಸಿದ ಜವಾಬ್ದಾರಿಯನ್ನು ಮಹಿಳೆಯರು ಸಮರ್ಥವಾಗಿ ನಿಭಾಯಿಸಬೇಕು. ಯುವಜನಾಂಗವನ್ನು ಸಂಘಟನೆಯತ್ತ ಕರೆತರುವ ಕೆಲಸವಾಗಬೇಕು’ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ ಅವರು ಎಐಪಿಸಿಗೆ ₹50 ಸಾವಿರ ದೇಣಿಗೆ ನೀಡಿದರು.

ಶೈಲಜಾ ಭಿಂಗೆ, ನೀಲಗಂಗಾ ಚರಂತಿಮಠ, ಪ್ರತಿಭಾ ಕಳ್ಳಿಮಠ, ನಂದಾ ಗಾರ್ಗಿ, ಸರ್ವಮಂಗಳಾ ಅರಳಿಮಟ್ಟಿ ಇದ್ದರು. ಕರ್ನಾಟಕ, ಮಹಾರಾಷ್ಟ್ರ, ಗೋವಾ, ಓರಿಸ್ಸಾ, ಉತ್ತರ ಪ್ರದೇಶ, ಪಂಜಾಬ್‌, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು–ಕಾಶ್ಮೀರ ಮತ್ತಿತರ ರಾಜ್ಯಗಳ ಕವಿಯತ್ರಿಯರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT