ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಶ್‌ಲೆಸ್‌ ಅಪರಾಧಗಳ ತಡೆಗೆ ಸನ್ನದ್ಧರಾಗಿ: ಮಹಾನಿರೀಕ್ಷಕ ಎಸ್.ರವಿ ಕರೆ

ವಿಶೇಷ ಮೀಸಲು ಪೊಲೀಸ್ ಕಾನ್‌ಸ್ಟೆಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ
Last Updated 19 ಆಗಸ್ಟ್ 2022, 9:52 IST
ಅಕ್ಷರ ಗಾತ್ರ

ಬೆಳಗಾವಿ: ‘ಎಲ್ಲ ಸರ್ಕಾರಿ ನೌಕರಿಗಳಿಗಿಂತ ಪೊಲೀಸ್‌ ಆಗುವುದು ದೊಡ್ಡ ಸವಾಲು. ಸಮಾಜದ ರಕ್ಷಣೆಗಾಗಿಯೇ ಪಣ ತೊಟ್ಟು ನಿಲ್ಲುವುದಕ್ಕೆ ಗಟ್ಟಿ ಹೃದಯ ಬೇಕಾಗುತ್ತದೆ. ಹಲವು ಸಂದರ್ಭಗಳಲ್ಲಿ ಮನೆ, ಕುಟುಂಬ, ಆರೋಗ್ಯ, ಪ್ರಾಣವನ್ನೂ ಲೆಕ್ಕಿಸದೇ ಕೆಲಸ ಮಾಡಬೇಕಾಗುತ್ತದೆ. ಅಂಥ ಸ್ಥೈರ್ಯವನ್ನು ಪ್ರತಿಯೊಬ್ಬ ಪೊಲೀಸ್ ಬೆಳೆಸಿಕೊಳ್ಳಬೇಕು’ ಎಂದು ರಾಜ್ಯ ಮೀಸಲು ಪೊಲೀಸ್‌ ಪಡೆಯ ಮಹಾನಿರೀಕ್ಷಕ ಎಸ್.ರವಿ ಕರೆ ನೀಡಿದರು.

ಸಮೀಪದ ಕಂಗ್ರಾಳಿಯಲ್ಲಿರುವ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ತರಬೇತಿ ಶಾಲೆಯ 8ನೇ ತಂಡದ ಹಾಗೂ ಮುನಿರಾಬಾದ್‍ ಶಾಲೆಯ 25ನೇ ತಂಡದ ವಿಶೇಷ ಮೀಸಲು ಪೊಲೀಸ್ ಕಾನ್‌ಸ್ಟೆಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಗಲು– ರಾತ್ರಿ ಎನ್ನದೇ, ಬಿಸಿಲು– ಮಳೆ– ಗಾಳಿಯನ್ನು ಲೆಕ್ಕಿಸದೇ ಕೆಲಸ ಮಾಡುವುದು ನಮ್ಮ ಅನಿವಾರ್ಯತೆ. ತ್ಯಾಗ ಮನೋಭಾವ ಇಲ್ಲದಿದ್ದರೆ ಪೊಲೀಸ್ ವೃತ್ತಿಯಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ಪೊಲೀಸರು ತಮ್ಮ ಆರೋಗ್ಯವನ್ನೂ ಸದೃಢವಾಗಿ ಇಟ್ಟುಕೊಳ್ಳುವ ಜತೆಗೆ ಸಮಾಜದ ಆರೋಗ್ಯ ಕಾಪಾಡುವುದಕ್ಕೂ ಸಿದ್ಧರಾಗಬೇಕು’ ಎಂದರು.

‘ಪೊಲೀಸ್‌ ಎನ್ನುವುದು ಕೇವಲ ನೌಕರಿ ಅಲ್ಲ; ಅದೊಂದು ಮನೋಭಾವ. ಕರ್ತವ್ಯ ಪ್ರಜ್ಞೆಯಿಂದ, ಪ್ರಾಮಾಣಿಕತೆಯಿಂದ ಕೆಲಸ ಮಾಡಿ. ರಾಷ್ಟ್ರಧ್ವಜದ ಮುಂದೆ ನೀವು ಮಾಡುವ ಪ್ರತಿಜ್ಞೆಯ ಪ್ರತಿ ಸಾಲನ್ನು ಜೀವನದುದ್ದಕ್ಕೂ ನೆನೆಪಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

‘ಮುಂಬರುವ ದಿನಗಳಲ್ಲಿ ‘ಕ್ಯಾಶ್‌ಲೆಸ್ ಎಕಾನಮಿ’ ಪರಿಕಲ್ಪನೆಯೇ ದೊಡ್ಡದಾಗಲಿದೆ. ಡಿಜಿಟಲ್ ಇಂಡಿಯಾ ಬೆಳೆದಂತೆಲ್ಲ ಹೊಸ ಹೊಸ ಅಪರಾಧ ಮಾರ್ಗಗಳು ಹುಟ್ಟಬಹುದು. ಹೀಗಾಗಿ, ಹೊಸ ತಲೆಮಾರಿನ ಪೊಲೀಸರು ಇಂಥ ತಾಂತ್ರಿಕ ಕೌಶಲಗಳನ್ನೂ ರೂಢಿಸಿಕೊಂಡು, ವೃತ್ತಿ ನೈಪುಣ್ಯತೆ ಮೆರೆಯಬೇಕು’ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆಎಸ್‍ಆರ್‌ಪಿ ಉಪ ಪೊಲೀಸ್ ಮಹಾನಿರೀಕ್ಷಕ ಎಂ.ವಿ. ರಾಮಕೃಷ್ಣ ಪ್ರಸಾದ್‌ ಮಾತನಾಡಿದರು. ನಗರ ಪೊಲೀಸ್‍ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಮುನಿರಾಬಾದ್ ಕೆಎಸ್‍ಆರ್‌ಪಿ ಶಾಲೆಯ ಪ್ರಾಂಶುಪಾಲ ಡಾ.ರಾಮಕೃಷ್ಣ ಮುದ್ದೇಪಾಲ್, ಬೆಳಗಾವಿ ಕಂಗ್ರಾಳಿಯ ಕೆಎಸ್‍ಆರ್‌ಪಿ ತರಬೇತಿ ಶಾಲೆಯ ಪ್ರಾಂಶುಪಾಲ ರಮೇಶ್ ಬೋರಗಾವೆ ವೇದಿಕೆ ಮೇಲಿದ್ದರು.

ಇದಕ್ಕೂ ಮುನ್ನ ಪೊಲೀಸ್‌ ಪ್ರಶಿಕ್ಷಣಾರ್ಥಿಗಳ ಆಕರ್ಷಕ ಪಥಸಂಚಲನ ನಡೆಯಿತು. ಪ್ರಶಿಕ್ಷಣಾರ್ಥಿಗಳು ರಾಷ್ಟ್ರಧ್ವಜ ಹಾಗೂ ಪೊಲೀಸ್ ಧ್ವಜಗಳ ಸಾಕ್ಷಿಯಾಗಿ ಪ್ರಮಾಣ ಸ್ವೀಕಾರ ಮಾಡಿದರು. ವಿವಿಧ ಊರುಗಳಿಂದ ಬಂದಿದ್ದ ಪೊಲೀಸ್‌ ಪ್ರಶಿಕ್ಷನಾರ್ಥಿಗಳ ಪಾಲಕರು, ಸಂಬಂಧಿಕರು ಉತ್ಸಾಹದಿಂದ ಪಥ ಸಂಚಲನ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT