ಸೋಮವಾರ, ಮಾರ್ಚ್ 1, 2021
26 °C
ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿದ ಮುಖಂಡರು

ಕನ್ನಡ ಧ್ಜಜ ವಿರೋಧಿ ಹೋರಾಟ| ಪ್ರತಿಭಟನೆಗೆ ಅವಕಾಶ ಸಿಗದೆ ಮುಖಭಂಗಕ್ಕೀಡಾದ ಎಂಇಎಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆ ಮುಂಭಾಗ ಸ್ಥಾಪಿಸಿರುವ ಕನ್ನಡ ಧ್ವಜ ತೆರವುಗೊಳಿಸುವಂತೆ ಆಗ್ರಹಿಸಿ ಗುರುವಾರ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲು ಯೋಜಿಸಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮತ್ತು ಶಿವಸೇನೆಯವರಿಗೆ ಪೊಲೀಸರು ಕಡಿವಾಣ ಹಾಕಿದರು. ಇದರಿಂದ ಆ ಸಂಘಟನೆಗಳ ಕಾರ್ಯಕರ್ತರು ಮುಖಭಂಗ ಅನುಭವಿಸುವಂತಾಯಿತು.

‘ಈ ರೀತಿಯ ಮೆರವಣಿಗೆ ನಡೆಸುವುದಕ್ಕೆ ಅವಕಾಶವಿಲ್ಲ. ಅನುಮತಿ ಕೊಡಲಾಗುವುದಿಲ್ಲ. ಒಂದು ವೇಳೆ ಸೂಚನೆ ಉಲ್ಲಂಘಿಸಿದರೆ ಕಠಿಣ ಕ್ರಮ  ಜರುಗಿಸಬೇಕಾಗುತ್ತದೆ’ ಎಂದು ಪೊಲೀಸ್ ಅಧಿಕಾರಿಗಳು ಖಡಕ್ ಸೂಚನೆ ನೀಡಿದ್ದರು. ‘ನಿಮ್ಮ ಬೇಡಿಕೆಗಳನ್ನು ಆಲಿಸಲು ಜಿಲ್ಲಾಧಿಕಾರಿ ಸಿದ್ಧವಿದ್ದಾರೆ’ ಎಂದು ತಿಳಿಸಿದ್ದರು. ಹೀಗಾಗಿ, ಎಂಇಎಸ್ ಮುಖಂಡರು ಪ್ರತಿಭಟನೆಯಿಂದ ಹಿಂದೆ ಸರಿದರು.

ಪೊಲೀಸ್ ಅಧಿಕಾರಿಗಳ ಸಲಹೆಯಂತೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರೊಂದಿಗೆ ಚರ್ಚಿಸಿದರು.

ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು. ಮಹಾನಗರಪಾಲಿಕೆ ಮುಂಭಾಗದಲ್ಲಿ ಕನ್ನಡ ಧ್ವಜ ಹಾರಿಸಿರುವ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ಪ್ರವೇಶಕ್ಕೆ ನಿರ್ಬಂಧ

ಈ ನಡುವೆ, ಮಹಾರಾಷ್ಟ್ರದ ಕೊಲ್ಹಾಪುರದ ಶಿವಸೇನೆ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ದಾವಣೆ ಅವರಿಗೆ, ಗುರುವಾರ ಮಧ್ಯಾಹ್ನದಿಂದ ಅನ್ವಯವಾಗುವಂತೆ ನಗರ ಹಾಗೂ ತಾಲ್ಲೂಕು ಪ್ರವೇಶಿಸುವುದಕ್ಕೆ ನಿರ್ಬಂಧ ವಿಧಿಸಿ ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್‌ ಆದೇಶ ಹೊರಡಿಸಿದ್ದಾರೆ.

‘ಅವರು ಇಲ್ಲಿಗೆ ಬಂದು ಪ್ರಚೋದನಕಾರಿ ಭಾಷಣ ಮಾಡುವ ಸಾಧ್ಯತೆ ಇದೆ. ಇದರಿಂದ ಅಹಿತಕರ ಘಟನಗಳು ಮತ್ತು ಭಾಷಿಕ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಅದಕ್ಕೆ ಅವಕಾಶ ಕೊಡಬಾರದು ಮತ್ತು ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಬೇಕು ಎಂಬ ಉದ್ದೇಶದಿಂದ ನಿರ್ಬಂಧ ವಿಧಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಇಲ್ಲಿನ ಎಂಎಸ್ಎಸ್ ಹಾಗೂ ಶಿವಸೇನೆಯವರ ಕುಮ್ಮಕ್ಕಿನ ಮೇರೆಗೆ ಕೊಲ್ಹಾಪುರದ ಶಿವಸೇನೆ ಕಾರ್ಯಕರ್ತರು ಗಡಿ ಪ್ರವೇಶಿಸಲು ಯತ್ನಿಸಿದರು. ಅದಕ್ಕೆ ರಾಜ್ಯದ ಪೊಲೀಸರು ಅವಕಾಶ ಕೊಡಲಿಲ್ಲ.

ಅಹವಾಲು ಹೇಳಿದ್ದೇವೆ

‘ಪೊಲೀಸರ ಸೂಚನೆ ಹಾಗೂ ಅವರು ಜಿಲ್ಲಾಧಿಕಾರಿ ಜೊತೆ ಚರ್ಚಿಸುವಂತೆ ಮನವರಿಕೆ ಮಾಡಿಕೊಟ್ಟಿದ್ದರಿಂದ ನಾವು ಪ್ರತಿಭಟನಾ ಮೆರವಣಿಗೆ ನಡೆಸಲಿಲ್ಲ. ಜಿಲ್ಲಾಧಿಕಾರಿ ಜೊತೆ ಮುಕ್ತ ಮನಸ್ಸಿನಿಂದ ಚರ್ಚಿಸಿದ್ದೇವೆ. ನಮ್ಮ ಅಹವಾಲುಗಳೆಲ್ಲವನ್ನೂ ಆಲಿಸಿದ್ದಾರೆ. ಜ.28 ಅಥವಾ 29ರಂದು ಮತ್ತೊಮ್ಮೆ ಸಭೆ ನಡೆಸಿ ಚರ್ಚಿಸುವುದಾಗಿ ತಿಳಿಸಿದ್ದಾರೆ’ ಎಂದು ಎಂಇಎಸ್ ಅಧ್ಯಕ್ಷ ದೀಪಕ ದಳವಿ ಪತ್ರಕರ್ತರಿಗೆ ತಿಳಿಸಿದರು.

‘ಬೆಳಗಾವಿ ಮಹಾನಗರಪಾಲಿಕೆಯಲ್ಲಿ ಭಗವಾಧ್ವಜ ಹಾರಿಸಲು ಅನುಮತಿ ಕೊಡುವಂತೆ ಕೋರಿದ್ದೇವೆ. ಇದು ನಮ್ಮ ಹೊಸ ಬೇಡಿಕೆಯಲ್ಲ. ಬಹಳ ಹಳೆಯದು. ಅದಕ್ಕೆ ಅವಕಾಶ ಕೊಡಬೇಕು ಎಂದು ಕೇಳಿದ್ದೇವೆ’ ಎಂದರು.

ಮುಖಂಡರಾದ ಮಾಲೋಜಿರಾವ್ ಅಷ್ಟೇಕರ, ವಿಕಾಸ ಕಲಘಟಗಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು