ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಮಂಡಲ ಚಳಿಗಾಲದ ಅಧಿವೇಶನ ಮುಕ್ತಾಯ: ಬೆಳಗಾವಿಗೆ ಸಿಕ್ಕಿದ್ದೇನು?

ಕೆಲವು ಭರವಸೆ, ಹುಸಿಯಾದ ಹಲವು ನಿರೀಕ್ಷೆ
Last Updated 25 ಡಿಸೆಂಬರ್ 2021, 3:54 IST
ಅಕ್ಷರ ಗಾತ್ರ

ಬೆಳಗಾವಿ: ಎರಡು ವರ್ಷಗಳ ನಂತರ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನಮಂಡಲ ಚಳಿಗಾಲದ ಅಧಿವೇಶನ ಶುಕ್ರವಾರ ಮುಕ್ತಾಯಗೊಂಡಿದ್ದು, ಅವರಿಂದ ಜಿಲ್ಲೆಗೆ ಸಿಕ್ಕಿದ್ದೇನು ಎನ್ನುವ ಚರ್ಚೆ ಆರಂಭವಾಗಿದೆ.

ಹತ್ತು ದಿನಗಳ ಅಧಿವೇಶನದಿಂದಾಗಿ ಸುವರ್ಣ ವಿಧಾನಸೌಧಕ್ಕೆ ಕಳೆ ಬಂದಿತು. ವಿದ್ಯುತ್‌ ದೀಪಗಳಿಂದ ರಾತ್ರಿ ವೇಳೆ ಕಂಗೊಳಿಸಿ, ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ–4ರಲ್ಲಿ ಸಾಗುವವರನ್ನು ಆಕರ್ಷಿಸಿತು. ರಾಜಕೀಯ ಮತ್ತು ಆಡಳಿತದ ಚಟುವಟಿಕೆಗಳ ಕೇಂದ್ರವೂ ಆದಾಗಿತ್ತು. ಆದರೆ, ಅಲ್ಲಿ ಬೆಳಗಾವಿ ಸೇರಿದಂತೆ ಕಿತ್ತೂರು ಕರ್ನಾಟಕದ ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಆಗದಿರುವುದು ಮತ್ತು ಸ್ಪಷ್ಟ ಪರಿಹಾರ ಸಿಗದಿರುವುದು ಈ ಭಾಗದ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಆತಿಥ್ಯ ಕ್ಷೇತ್ರ ಚೇತರಿಕೆ:ಅಧಿವೇಶನದಿಂದಾಗಿ ಮುಖ್ಯಮಂತ್ರಿ, ಮಂತ್ರಿ–ಮಹೋದಯರು ಇಲ್ಲಿ ತಂಗಿದ್ದರು. ಈ ಕಾರಣದಿಂದಾಗಿ ಅಲ್ಲಲ್ಲಿ ಹದಗೆಟ್ಟಿದ್ದ ರಸ್ತೆಗಳನ್ನು ಕೊನೆ ಕ್ಷಣದಲ್ಲಿ ದುರಸ್ತಿ ಮಾಡಿದ್ದರಿಂದ ಇಲ್ಲಿನ ಜನರಿಗೆ ಅನುಕೂಲವಾಗಿದೆ. ಅಧಿವೇಶನಕ್ಕೆ ಬಂದಿದ್ದವರು ವಾಸ್ತವ್ಯ ಹೂಡಿದ್ದರಿಂದ ಹೋಟೆಲ್‌ ಉದ್ಯಮ ಹಾಗೂ ಆತಿಥ್ಯ ಕ್ಷೇತ್ರದಲ್ಲಿ ವಹಿವಾಟು ವೃದ್ಧಿಯಾಯಿತು. ಇದರಿಂದ ಹೋಟೆಲ್ ಮಾಲೀಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಜೊತೆಗೆ, ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಿಂದ ಬಂದಿದ್ದವರು ಇಲ್ಲಿನ ಕುಂದಾ ಹಾಗೂ ಕರದಂಟು ಖರೀದಿಸಿಕೊಂಡು ಹೋಗಿದ್ದರಿಂದ ಸ್ವೀಟ್‌ ಮಾರ್ಟ್‌ ಮಾಲೀಕರಿಗೆ ಪ್ರಯೋಜನವಾಗಿದೆ.

ಅಧಿವೇಶನ ಸಂದರ್ಭದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಧಾರವಾಡ–ಕಿತ್ತೂರು–ಬೆಳಗಾವಿ ನೂತನ ರೈಲು ಮಾರ್ಗ ನಿರ್ಮಾಣಕ್ಕಾಗಿ ₹927.40 ಕೋಟಿ ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿರುವುದು, ಬಹುನಿರೀಕ್ಷಿತವಾದ ಈ ಯೋಜನೆಯ ಅನುಷ್ಠಾನದ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಂತಾಗಿದೆ.

ಪ್ರತಿಮೆ ಪ್ರತಿ‌ಷ್ಠಾಪನೆ:ಸುವರ್ಣ ವಿಧಾನಸೌಧದ ಆವರಣದಲ್ಲಿ ಜಿಲ್ಲೆಯ ಅಸ್ಮಿತೆಯಾಗಿರುವ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಈ ನಡುವೆ, ಅಲ್ಲಿ ಜಗಜ್ಯೋತಿ ಬಸವೇಶ್ವರ, ಬೆಳವಡಿ ಮಲ್ಲಮ್ಮಹಾಗೂ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ ಪ್ರತಿಮೆಗಳನ್ನು ಪ್ರತಿಷ್ಠಾಪಿಸಬೇಕೆಂಬ ಆಗ್ರಹ ಆಯಾ ಸಮಾಜ–ಅನುಯಾಯಿಗಳಿಂದ ಕೇಳಿಬಂದಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯೂ ಆಗುತ್ತಿದೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾನಾ ಸಂಘಟನೆಗಳವರು ಪ್ರತಿಭಟನೆ ನಡೆಸಿದರು. ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಕ್ಕೂ ಯತ್ನಿಸಿದರು. ಅವರಿಗೆ ಸಿಕ್ಕಿದ್ದು ಭರವಸೆ ಮಾತ್ರ. 2018ರಲ್ಲಿ ಅಧಿವೇಶನ ನಡೆದಾಗ ಪ್ರತಿಭಟಿಸಿದ್ದ ಹಲವು ಸಂಘಟನೆಗಳವರು ಈ ಬಾರಿಯೂ ಬಂದಿದ್ದರು; ಅವೇ ಬೇಡಿಕೆಗಳನ್ನು ಮಂಡಿಸಿದರು!.

ಈಡೇರದ ನಿರೀಕ್ಷೆಗಳು
* ಈ ಭಾಗದ ಪ್ರಮುಖ ಬೇಡಿಕೆಯಾದ ಮಹದಾಯಿ ಯೋಜನೆ ಅನುಷ್ಠಾನದ ವಿಷಯದಲ್ಲಿ ಸ್ಪಷ್ಟ ತೀರ್ಮಾನ ಹೊರಬೀಳಲಿಲ್ಲ. ನಮ್ಮ ಪಾಲಿನ ನೀರು ಬಳಸಿಕೊಳ್ಳಲು ಸಂಬಂಧಿಸಿದ ಕಾಮಗಾರಿಗೆ ಅನುದಾನ ನಿಗದಿಪಡಿಸಿದ್ದರೂ ಕಾಮಗಾರಿ ಆರಂಭಿಸುವ ಕುರಿತು ಘೋಣೆಯಾಗಿಲ್ಲ.

* ಚಿಕ್ಕೋಡಿ ಜಿಲ್ಲೆ ರಚಿಸಬೇಕು ಎಂಬ ಆ ಭಾಗದ ಜನರ ಬೇಡಿಕೆಗೆ ಸ್ಪಂದನೆ ದೊರೆಯಲಿಲ್ಲ. ಚಿಕ್ಕೋಡಿಯಲ್ಲಿ ಜನರು ಧರಣಿ ಸತ್ಯಾಗ್ರಹ ನಡೆಸಿ, ಸರ್ಕಾರದ ಗಮನಸೆಳೆದರೂ ಪ್ರಯೋಜನವಾಗಲಿಲ್ಲ.

* ಈ ಭಾಗಕ್ಕೆ ಅನುಕೂಲ ಕಲ್ಪಿಸಬಲ್ಲ ಪ್ರಮುಖ ಕಚೇರಿಗಳನ್ನು ಬೆಂಗಳೂರಿನಿಂದ ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸುವ ಬಗ್ಗೆ ಚಕಾರ ಎತ್ತಲಿಲ್ಲ.

* ನಾಡು–ನುಡಿ–ಗಡಿ ವಿಷಯದಲ್ಲಿ ಪದೇ ಪದೇ ಕಾಲು ಕೆರೆದು ಜಗಳಕ್ಕೆ ಬರುವ ಮತ್ತು ಪುಂಡಾಟಿಕೆ ನಡೆಸುವ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ನಿಷೇಧಿಸಬೇಕು ಎಂಬ ಬೇಡಿಕೆಗೆ ಮನ್ನಣೆ ಸಿಗಲಿಲ್ಲ. ಆ ಸಂಘಟನೆ ವಿರುದ್ಧ ಖಂಡನಾ ನಿರ್ಣಯವನ್ನಷ್ಟೆ ಒಕ್ಕೊರಲಿನಿಂದ ಮಾಡಲಾಯಿತು.

ನಡೆಸಿದ್ದು ಹೆಗ್ಗಳಿಕೆ
ಇಲ್ಲಿ ಅಧಿವೇಶನ ನಡೆಯುವುದು ಅನುಮಾನ ಎಂಬ ಮಾತುಗಳು ಕೇಳಿಬಂದಿದ್ದವು. ಕೋವಿಡ್ ಮತ್ತು ಓಮೈಕ್ರಾನ್ ಆತಂಕದ ಕಾರ್ಮೋಡ ಕವಿದಿತ್ತು. ಆದರೆ, ಸರ್ಕಾರದ ದಿಟ್ಟ ಹೆಜ್ಜೆಯಿಂದಾಗಿ ಅಧಿವೇಶನ ನಡೆದಿದೆ. ಆಡಳಿತ ಯಂತ್ರವು ಕೆಲವೇ ದಿನಗಳಲ್ಲಿ ಅಚ್ಚುಕಟ್ಟಾಗಿ ವ್ಯವಸ್ಥೆಗಳನ್ನು ಮಾಡಿ ಸೈ ಎನಿಸಿಕೊಂಡಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯ ಕೆಲಸಗಳ ಒತ್ತಡದ ನಡುವೆಯೇ ಅಧಿವೇಶನಕ್ಕೂ ಅಗತ್ಯ ಸಿದ್ಧತೆಗಳನ್ನು ಅಧಿಕಾರಿಗಳು ಮಾಡಿಕೊಂಡಿದ್ದುದು ಹೆಗ್ಗಳಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT