ಮಾಲಿನ್ಯ ತಡೆಗಟ್ಟದಿದ್ದರೆ ದುಡ್ಡಕೊಟ್ಟು ಗಾಳಿ ಸೇವಿಸಬೇಕಾದೀತು: ಸುಭಾಷ ಆಡಿ

ಬೆಳಗಾವಿ: ‘ಪರಿಸರ ಮಾಲಿನ್ಯದಿಂದ ಏನಾಗಬಹುದು ಎನ್ನುವುದಕ್ಕೆ ನವದೆಹಲಿಯ ಗ್ಯಾಸ್ ಚೇಂಬರ್ ಪ್ರಕರಣವೇ ಸಾಕ್ಷಿ. ವಾಯು ಮಾಲಿನ್ಯ ವಿಪರೀತ ಹೆಚ್ಚಳವಾಗಿದ್ದರಿಂದ ಅಲ್ಲಿನ ಜನರು ಇತ್ತೀಚೆಗೆ ಹಣ ಕೊಟ್ಟು ಶುದ್ಧ ಗಾಳಿ ಸೇವಿಸಿದ್ದರು. ಇಂತಹದ್ದೇ ಸ್ಥಿತಿ ಮುಂದಿನ ದಿನಗಳಲ್ಲಿ ದೇಶದೆಲ್ಲೆಡೆ ಎದುರಾಗುವ ಅಪಾಯವಿದೆ’ ಎಂದು ನ್ಯಾಯಮೂರ್ತಿ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸುಭಾಷ ಆಡಿ ಹೇಳಿದರು.
ಇಲ್ಲಿನ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜು ‘ಪರಿಸರ ಮಾಲಿನ್ಯ ಹಾಗೂ ಹವಾಮಾನ ಬದಲಾವಣೆ ಮೇಲೆ ಪ್ರಭಾವ’ ಕುರಿತು ಶುಕ್ರವಾರ ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
‘ಇತ್ತೀಚೆಗೆ ದೆಹಲಿಯಲ್ಲಿ ಕಾರ್ಬನ್ ಡೈ ಆಕ್ಸೈಡ್, ಕಾರ್ಬನ್ ಮೊನಾಕ್ಸೈಡ್ ರಾಸಾಯನಿಕದಿಂದಾಗಿ ವಾತಾವರಣದಲ್ಲಿ ದಟ್ಟ ಮಂಜು ಆವರಿಸಿತ್ತು. ಆಮ್ಲಜನಕದ ಪ್ರಮಾಣ ತೀವ್ರವಾಗಿ ಕುಸಿದಿತ್ತು. ಜನರು ಉಸಿರಾಡಲು ತೀವ್ರ ತೊಂದರೆ ಅನುಭವಿಸಿದರು. ಕೊನೆಗೆ ಹಣ ನೀಡಿ, ಶುದ್ಧ ಗಾಳಿ ಸೇವಿಸಿದ್ದರು’ ಎಂದು ಅವರು ಸ್ಮರಿಸಿದರು.
‘ಚಿಕ್ಕವರಿದ್ದಾಗ ನದಿ, ಕೆರೆ ನೀರು ಕುಡಿದುಕೊಂಡಿದ್ದೇವು. ದುಡ್ಡು ಕೊಟ್ಟು ನೀರಿನ ಬಾಟಲಿ ಖರೀದಿಸಬೇಕಾಗುತ್ತದೆ ಎಂದು ನಾನ್ಯಾವತ್ತೂ ಅಂದುಕೊಂಡಿರಲಿಲ್ಲ. ಆದರೆ, ಅದು ಇಂದು ವಾಸ್ತವವಾಗಿದೆ. ಅದೇ ರೀತಿ ಮುಂದೊಂದು ದಿನ, ಶುದ್ಧ ಗಾಳಿಯನ್ನು ಹಣ ಕೊಟ್ಟು ಸೇವಿಸಬೇಕಾದ ಪರಿಸ್ಥಿತಿ ಬರಬಹುದು’ ಎಂದು ಎಚ್ಚರಿಕೆ ನೀಡಿದರು.
‘ವಾಯು ಮಾಲಿನ್ಯ, ಜಲ ಮಾಲಿನ್ಯ ಸೇರಿದಂತೆ ಪರಿಸರವನ್ನು ರಕ್ಷಿಸಲು ಮುಂದಾಗದಿದ್ದರೆ ಮುಂದಿನ ಪೀಳಿಗೆ ಬದುಕಲು ಕಷ್ಟವಾದೀತು. ಪರಿಸರ ರಕ್ಷಣೆಗೆ ಇಂದಿನಿಂದಲೂ ಕ್ರಮಕೈಗೊಳ್ಳಬೇಕು. ಸರ್ಕಾರ ಮಾಡಲಿ, ಇನ್ನೊಬ್ಬರು ಮಾಡಲಿ ಎನ್ನುವುದಕ್ಕಿಂತ ‘ನಾನು ಮಾಡುತ್ತೇನೆ’ ಎಂದು ಆರಂಭಿಸಬೇಕಾಗಿದೆ’ ಎಂದು ಹೇಳಿದರು.
‘ಪರಿಸರ ರಕ್ಷಣೆಗೆ ಹಲವು ಕಾನೂನುಗಳನ್ನು ರಚಿಸಿದ್ದರೂ, ಜನರು ಪಾಲಿಸುತ್ತಿಲ್ಲ. ಕಾನೂನುಗಳನ್ನು ಉಲ್ಲಂಘಿಸುವುದರಲ್ಲಿಯೇ ಅವರಿಗೆ ತೃಪ್ತಿ ಇದೆ. ವಿದೇಶಗಳಲ್ಲಿ ಜನರು ತಮ್ಮ ಮನೆಗಿಂತ ಹೆಚ್ಚು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿ ಇಡುತ್ತಾರೆ. ಆದರೆ, ನಮ್ಮಲ್ಲಿ ಮನೆಯ ಕಸವನ್ನು ರಸ್ತೆಗೆ ಹಾಕುತ್ತಾರೆ. ರಸ್ತೆಯ ಮೇಲೆಯೇ ಉಗುಳುವುದು, ಮಲ ಮೂತ್ರ ವಿಸರ್ಜನೆ ಮಾಡುತ್ತಾರೆ’ ಎಂದು ಬೇಸರಿಸಿದರು.
‘ಗಾಳಿ, ಬೆಳಕು, ವಾಯು, ನೀರು ಸೇರಿದಂತೆ ಎಲ್ಲವನ್ನೂ ಪರಿಸರದಿಂದ ಪಡೆಯುತ್ತೇವೆ. ಇದಕ್ಕೆ ಬದಲಾಗಿ ಏನನ್ನೂ ಮರಳಿ ನೀಡುವುದಿಲ್ಲ. ಇದಲ್ಲದೇ, ಮರಗಳನ್ನು ಕಡಿದು ಪರಿಸರ ನಾಶ ಮಾಡುತ್ತೇವೆ. ವರ್ಷದಿಂದ ವರ್ಷಕ್ಕೆ ಅರಣ್ಯದ ಪ್ರಮಾಣ ಕ್ಷೀಣಿಸುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಸಿಗಲಾರದು’ ಎಂದು ಕಳವಳ ವ್ಯಕ್ತಪಡಿಸಿದರು.
‘ತ್ಯಾಜ್ಯವನ್ನು ಹಸಿ ಹಾಗೂ ಒಣವೆಂದು ಪ್ರತ್ಯೇಕವಾಗಿಸಿ ವಿಲೇವಾರಿ ಮಾಡಬೇಕು. ಹಸಿ ತ್ಯಾಜ್ಯವನ್ನು ಗೊಬ್ಬರ ತಯಾರು ಮಾಡಲು ಬಳಸಬೇಕು. ಒಣ ಹಾಗೂ ವೈದ್ಯಕೀಯ ತ್ಯಾಜ್ಯಗಳ ವಿಲೇವಾರಿಯನ್ನು ಸಮರ್ಪಕವಾಗಿ ಮಾಡಬೇಕು. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕಾಗಿದೆ’ ಎಂದು ಹೇಳಿದರು.
ಕಾಲೇಜಿನ ಪ್ರಿನ್ಸಿಪಾಲ್ ಆರ್.ಎಂ. ಪಾಟೀಲ, ಎಂ.ಆರ್. ಬನಹಟ್ಟಿ, ಎಚ್.ಎಸ್. ಮೇಲಿನಮನಿ ಹಾಗೂ ಕಾರ್ಯಾಗಾರದ ಸಂಚಾಲಕ ಜಿ.ಎನ್. ಶೀಲಿ ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.