ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ@75: ಶಕ್ತಿ ಸನ್ನಿಧಿಯಲ್ಲಿ ಕಳೆಗಟ್ಟಿದ ಸಂಭ್ರಮ

ಯಲ್ಲಮ್ಮನಗುಡ್ಡದಲ್ಲಿ ಪ್ಲಾಸ್ಟಿಕ್‌ ಮುಕ್ತ ಅಭಿಯಾನ, ದೇವಿಗೆ ವಿಶೇಷ ಪೂಜೆ, ಮಕ್ಕಳೊಂದಿಗೆ ಸಂವಾದ
Last Updated 26 ನವೆಂಬರ್ 2022, 4:34 IST
ಅಕ್ಷರ ಗಾತ್ರ

ಯಲ್ಲಮ್ಮನಗುಡ್ಡ: ಏಳುಕೊಳ್ಳದ ನಾಡು, ಸವದತ್ತಿ ತಾಲ್ಲೂಕಿನ ಯಲ್ಲಮ್ಮನಗುಡ್ಡದಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ 75ನೇ ವರ್ಷಾಚರಣೆ ಅಂಗವಾಗಿ ಶುಕ್ರವಾರ ನಡೆದ ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ ಸಿಕ್ಕಿತು.

ದಿ ಪ್ರಿಂಟರ್ಸ್‌ ಮೈಸೂರು (ಪ್ರೈವೇಟ್‌) ಲಿಮಿಟೆಡ್‌ ಹಾಗೂ ರೇಣುಕಾದೇವಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಆಶ್ರಯದಲ್ಲಿ ಆಯೋಜಿಸಿದ ಸ್ವಚ್ಛತಾ ಅಭಿಯಾನ, ಶ್ರಮದಾನ ಹಾಗೂ ಪತ್ರಿಕೆ ಓದುವ ಬಗೆ ಕುರಿತು ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ಯಶಸ್ವಿಯಾಯಿತು.

ಬೆಳಿಗ್ಗೆ ಶಕ್ತಿಮಾತೆಯ ಸನ್ನಿಧಿಯಲ್ಲಿ ವಿಶೇಷ ಸಂಕಲ್ಪ ಪೂಜೆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಅರ್ಚಕರಾದ ಪಂಡಿತ ರಾಜಶೇಖರ, ಗಣಪತಿಗೌಡ ಚನ್ನಪ್ಪಗೌಡರ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಿತು.

ಶ್ರೀ ರೇಣುಕಾ ಯಲ್ಲಮ್ಮ ದೇವಿ ಪ್ರೌಢಶಾಲೆ ವಿದ್ಯಾರ್ಥಿಗಳು ನಡೆಸಿದ ‘ಪ್ಲಾಸ್ಟಿಕ್‌ ಮುಕ್ತ ಯಲ್ಲಮ್ಮಗುಡ್ಡ’ ಕುರಿತ ಜಾಗೃತಿ ಜಾಥಾಗೆ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಚಾಲನೆ ನೀಡಿದರು. ‘ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಿ–ಪರಿಸರ ಉಳಿಸಿ’ ಎಂದು ಘೋಷಣೆ ಹಾಕುತ್ತ ಮಕ್ಕಳು ಜಾಥಾ ನಡೆಸಿದರು. ವಿವಿಧ ಮಳಿಗೆಗಳಿಗೆ ಹೋಗಿ ಮನವೊಲಿಸಿದರು.

ನಂತರ ನಡೆದ ವೇದಿಕೆ ಕಾರ್ಯಕ್ರಮವನ್ನು ಸವದತ್ತಿ ತಹಶೀಲ್ದಾರ್ ಜಿ.ಬಿ.ಜಕ್ಕನಗೌಡರ ಉದ್ಘಾಟಿಸಿದರು. ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಸದಸ್ಯರಾದ ಲಕ್ಷ್ಮಿ ಹೂಲಿ, ಕೊಳ್ಳಪ್ಪಗೌಡ ಗಂದಿಗವಾಡ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಯಶವಂತಕುಮಾರ, ರಾಮದುರ್ಗ ಡಿವೈಎಸ್‍ಪಿ ರಾಮನಗೌಡ ಹಟ್ಟಿ,ಸಿಪಿಐ ಜೆ.ಕರುಣೇಶಗೌಡ,ಅಬಕಾರಿ ಸಿಪಿಐ ಶ್ರೀಶೈಲ ಅಕ್ಕಿ, ಸಾಹಿತಿ ವೈ.ಎಂ.ಯಾಕೊಳ್ಳಿ, ರಂಗಕರ್ಮಿ ಝಾಕೀರ್ ನದಾಫ,ಯಲ್ಲಮ್ಮ ದೇವಸ್ಥಾನ ಅಧೀಕ್ಷಕ ಅರವಿಂದ ಮಾಳಗೆ, ಉಗರಗೋಳ ಗ್ರಾ.ಪಂ ಅಧ್ಯಕ್ಷೆ ಜುಬೇದಾಬೇಗಂ ಬಾರಿಗಿಡದ, ಪಿಡಿಒ ಮಹೇಶ ತೆಲಗಾರ, ಮುಖ್ಯಶಿಕ್ಷಕಿ ಆರ್.ಪಿ. ಪವಾರ, ಸಂಗೀತಗಾರ ರಾಜು ಪಾಟೀಲ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಪ್ರಜಾವಾಣಿ ಅರೆಕಾಲಿಕ ವರದಿಗಾರ ಬಸವರಾಜ ಶಿರಸಂಗಿ, ಮಲ್ಲನಗೌಡ ಪಾಟೀಲ, ಪ್ರಕಾಶ ಪ್ರಭುನವರ, ಸದಾನಂದ ಈಟಿ ಇದ್ದರು.

‘ಪ್ರಜಾವಾಣಿ’ ಜಿಲ್ಲಾ ವರದಿಗಾರ ಸಂತೋಷ ಈ. ಚಿನಗುಡಿಶ್ರೀ ರೇಣುಕಾ ಯಲ್ಲಮ್ಮ ದೇವಿ ಪ್ರೌಢಶಾಲೆ ಮಕ್ಕಳೊಂದಿಗೆ ಸಂವಾದ ನಡೆಸಿದರು.ಪ್ರಸರಣ ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ರವಿ ಹೆಗಡೆ, ಶಿವಾನಂದ ತಾರಿಹಾಳ ಕಾರ್ಯಕ್ರಮ ನಿರೂಪಿಸಿದರು.

*
ಗಣ್ಯರ ಅಭಿಮತ
ವಸ್ತುನಿಷ್ಠ ಮತ್ತು ನಿಷ್ಪಕ್ಷಪಾತ ವರದಿಗಾರಿಕೆಗೆ ‘ಪ್ರಜಾವಾಣಿ’ ಖ್ಯಾತಿ ಗಳಿಸಿದೆ. ಮಕ್ಕಳಲ್ಲಿ ಮೌಲ್ಯಗಳನ್ನು ತುಂಬಲು ಇಂಥ ಪತ್ರಿಕೆ ಓದಿಸಬೇಕು. ಜ್ಞಾನ ಸಂಪಾದನೆ ಜತೆಗೆ ಸಮಕಾಲೀನ ಸಂಗತಿಗಳೂ ನಿಮಗೆ ಸಿಗುತ್ತವೆ.
–ರಾಮನಗೌಡ ಹಟ್ಟಿ, ಡಿವೈಎಸ್‍ಪಿ, ರಾಮದುರ್ಗ

*

ಎಲ್ಲ ವಿದ್ಯಾರ್ಥಿಗಳಿಗೂ ಉನ್ನತ ಹುದ್ದೆಗೆ ಏರಬೇಕೆನ್ನುವ ಕನಸುಗಳಿರುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುವ ಪ್ರತಿಯೊಬ್ಬರೂ ಈ ಪತ್ರಿಕೆ ಓದಲು ಒತ್ತು ನೀಡಬೇಕು.
-ಯಶವಂತಕುಮಾರ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ, ಸವದತ್ತಿ

*

ಪತ್ರಿಕೆಗಳೆಂದರೆ ಮನೆಮನೆಯ ವಿಶ್ವವಿದ್ಯಾಲಯಗಳು. ಪ್ರಜಾವಾಣಿ ದಿನಪತ್ರಿಕೆಗೆ 75 ವಸಂತ ತುಂಬಿರುವುದು ಇಡೀ ಕರುನಾಡು ಹೆಮ್ಮೆಪಡುವಂಥದ್ದು.
-ವೈ.ಎಂ.ಯಾಕೊಳ್ಳಿ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT