ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಾಖಲೆ’ಯ ಶೇ 78ರಷ್ಟು ಮಳೆ ಕೊರತೆ!

ಹೋದ ವರ್ಷ ವಾಡಿಕೆಗಿಂತ ಶೇ 18ರಷ್ಟು ಹೆಚ್ಚಿನ ‍ಮಳೆಯಾಗಿತ್ತು
Last Updated 21 ಮೇ 2019, 19:35 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಶೇ 78ರಷ್ಟು ಕಡಿಮೆ ಪ್ರಮಾಣದ ಮಳೆಯಾಗಿರುವುದು ಆತಂಕ ಮತ್ತು ಕಳವಳಕ್ಕೆ ಕಾರಣವಾಗಿದೆ.

ಮಾರ್ಚ್‌, ಏಪ್ರಿಲ್‌ ಹಾಗೂ ಮೇ ತಿಂಗಳ ಅವಧಿಯನ್ನು ಪೂರ್ವ ಮುಂಗಾರು ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಬೀಳುವ ಮಳೆಯು ಕೃಷಿ ಚಟುವಟಿಕೆಗಳಿಗೆ ‘ಜೀವ’ ನೀಡುತ್ತದೆ. ಅನ್ನದಾತರು ಭೂಮಿ ಹಸನು ಮಾಡಿಕೊಳ್ಳಲು ಅನುಕೂಲಕರವಾಗಿರುತ್ತದೆ. ಅದರಲ್ಲೂ ಜಿಲ್ಲೆಯಲ್ಲಿ ಮೇ 2ನೇ ವಾರದಿಂದ ಆಗುವ ಮಳೆ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿರುತ್ತದೆ. ಆದರೆ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕೊರತೆಯ‍ ಪ್ರಮಾಣವೇ ಜಾಸ್ತಿಯಾಗಿರುವುದು ಅಂಕಿ–ಅಂಶಗಳಿಂದ ಕಂಡುಬರುತ್ತಿದೆ.

ಹೋದ ವರ್ಷದ ಚಿತ್ರಣ:

ಜಿಲ್ಲೆಯಲ್ಲಿ ವಾಡಿಕೆಯಂತೆ, ಮಾರ್ಚ್‌ನಿಂದ ಮೇ 21ರವರೆಗೆ 76.7 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ಆಗಿರುವುದು ಶೇ 17.1ರಷ್ಟು ಮಾತ್ರ. ಆದರೆ, ಇದೇ ಅವಧಿಯಲ್ಲಿ ಹೋದ ವರ್ಷ (2018ರಲ್ಲಿ) ವಾಡಿಕೆಯಂತೆ ಬೀಳಬೇಕಿದ್ದ ಮಳೆ 74. ಮಿ.ಮೀ. ಇತ್ತು. ಅದರಲ್ಲಿ 87 ಮಿ.ಮೀ. ಅಂದರೆ ಶೇ 18ರಷ್ಟು ಮಳೆ ಜಾಸ್ತಿ ಬಿದ್ದಿತ್ತು. ಆಗ, 21ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯೂ ನಡೆದಿತ್ತು! ಆದರೆ, ಈ ಬಾರಿ ಮಳೆಯು ಸಮಾಧಾನಕರವಾದ ಪ್ರಮಾಣದಲ್ಲಿ ಆಗಿರುವುದರಿಂದ ಬಿತ್ತನೆಯೂ ನಡೆದಿಲ್ಲ!

2017 ಹಾಗೂ 2016ರಲ್ಲೂ ಪೂರ್ವ ಮುಂಗಾರು ಮಳೆಯು ಆಶಾದಾಯಕವಾಗಿ ಸುರಿದಿತ್ತು. ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಮಳೆ ಕೈಹಿಡಿಯಲಿಲ್ಲ. ಇದು, ಪ್ರತಿಕೂಲ ವಾತಾವರಣಕ್ಕೆ ಕಾರಣವಾಗಿದೆ. ಮಳೆಯಾಗದೇ ಇರುವುದರಿಂದ, ಜಾನುವಾರುಗಳಿಗೆ ಹಸಿರು ಮೇವಿನ ಕೊರತೆ ಉಂಟಾಗಿದೆ. ಅಂತರ್ಜಲ ಮಟ್ಟ ಕುಸಿತವೂ ಉಂಟಾಗುತ್ತಿದೆ. ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.

ಇಲ್ಲಿ ಸಾಮಾನ್ಯವಾಗಿ ಮೇ 2ನೇ ವಾರದಲ್ಲಿ ಮುಂಗಾರು ಪೂರ್ವ ಮಳೆ (ಅಡ್ಡ ಮಳೆ) ಉತ್ತಮವಾಗಿ ಆಗುವುದು ವಾಡಿಕೆ. ಆದರೆ, ಮೇ 4ನೇ ವಾರವಾದರೂ ಮಳೆಯ ಸುಳಿವಿಲ್ಲ. ಕೆಲವೆಡೆ ಕೆಲವು ನಿಮಿಷ ತುಂತುರು ಅಥವಾ ಸಾಧಾರಣ ಮಳೆಯಾಗಿದ್ದು ಬಿಟ್ಟರೆ ಬಹುತೇಕ ತಾಲ್ಲೂಕುಗಳು ಮಳೆ ಕೊರತೆ ಎದುರಿಸುತ್ತಿವೆ. ಇದರಿಂದ ತಾ‍ಪಮಾನ ಪ್ರಮಾಣ ಏರುತ್ತಲೇ ಇದೆ. ಬಿಸಿಲಿನ ಝಳದಿಂದಾಗಿ ಜನರು ಹೈರಾಣಾಗಿ ಹೋಗಿದ್ದಾರೆ. ನದಿ, ಕೆರೆ, ಕಟ್ಟೆಗಳು ಬರಿದಾಗಿವೆ. ಪರಿಣಾಮವಾಗಿ, ಜಾನುವಾರುಗಳು ಮೇವು, ನೀರು ಹಾಗೂ ನೆರಳಿಗಾಗಿ ಪರದಾಡುತ್ತಿರುವುದು ಸಾಮಾನ್ಯವಾಗಿದೆ.

‘ರೋಹಿಣಿ’ ಬಂದರೆ ಅನುಕೂಲ:

‘ವಾಡಿಕೆಗಿಂತ (ಪೂರ್ವ ಮುಂಗಾರು) ತೀವ್ರ ಕೊರತೆ ಉಂಟಾಗಿದೆ. ಏಪ್ರಿಲ್‌ ನಂತರ ಮಳೆಯಾಗಿಲ್ಲ. ಮಳೆ ಬಿದ್ದಿದ್ದರೆ ರೈತರು ಕೃಷಿ ಭೂಮಿ ಹಸನುಗೊಳಿಸಲು ನೆರವಾಗುತ್ತಿತ್ತು. ಭೂಮಿ ತಂಪಾಗುತ್ತಿತ್ತು. ಇದು ಬಿತ್ತನೆಗೆ ಅನುಕೂಲವಾಗುತ್ತಿತ್ತು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಎಚ್. ಮೊಕಾಶಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮುಂದಿನ ದಿನಗಳಲ್ಲಿ ‘ರೋಹಿಣಿ’ ಮಳೆಯಾದರೂ ಬಂದರೆ ಒಳ್ಳೆಯದಾಗುತ್ತದೆ. ಹೆಸರು, ಸೋಯಾಬೀನ್, ಉದ್ದು ಬೆಳೆಯಲು ಸಹಕಾರಿಯಾಗುತ್ತದೆ. ಮುಂಗಾರು ಹಂಗಾಮಿನಲ್ಲಿ ರೈತರಿಗೆ ಕೃಷಿ ಪರಿಕರಗಳನ್ನು ಒದಗಿಸಲು ಇಲಾಖೆಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಸಗೊಬ್ಬರ, ಬಿತ್ತನೆಬೀಜ ದಾಸ್ತಾನಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT