ಬುಧವಾರ, ಡಿಸೆಂಬರ್ 8, 2021
19 °C
ಅಧಿಕಾರಿಗಳ ಸಭೆ ನಡೆಸಿದ ಸಭಾಪತಿ

DNP///ಅಧಿವೇಶನ: ಪೂರ್ವ ಸಿದ್ಧತೆ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ನಡೆದಿರುವ ಪೂರ್ವ ಸಿದ್ಧತೆಯನ್ನು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಸೋಮವಾರ ಪರಿಶೀಲಿಸಿದರು.

ಬಳಿಕ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಕಲಾಪವನ್ನು ಸಾರ್ವಜನಿಕರೂ ವೀಕ್ಷಿಸಲು ಅನುಕೂಲವಾಗುವಂತೆ ಮೊದಲ ಬಾರಿಗೆ ನೇರಪ್ರಸಾರ‌ಕ್ಕೆ ವ್ಯವಸ್ಥೆ ಮಾಡಲಾಗುವುದು. ಅದಕ್ಕೆ ಅಗತ್ಯವಾದ ಎಲ್ಲ ಸೌಕರ್ಯಗಳನ್ನು ಒದಗಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಪ್ರತಿಯೊಂದು ಇಲಾಖೆಯ ಕಚೇರಿಯಲ್ಲಿ ಇ-ಆಫೀಸ್ ಬಳಕೆ ಮಾಡುತ್ತಿರುವುದರಿಂದ ಇಂಟರ್ನೆಟ್ ಸೇರಿದಂತೆ ಎಲ್ಲ ಸಮರ್ಪಕ ಸೌಲಭ್ಯಗಳನ್ನು ಒಂದು ವಾರದೊಳಗೆ ಒದಗಿಸಬೇಕು. ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ವಿಡಿಯೊ ಕಾನ್ಫರೆನ್ಸ್ ಮಾಡಲು ವ್ಯವಸ್ಥೆ ಕಲ್ಪಿಸಬೇಕು. ಅಧಿವೇಶನ ಎಲ್ಲ ರೀತಿಯಿಂದಲೂ ಸುಗಮವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಅಗತ್ಯವಾದ ಕೆಲಸಗಳನ್ನು ತ್ವರಿತವಾಗಿ ಆರಂಭಿಸಬೇಕು’ ಎಂದರು.

ಇದಕ್ಕೂ ಮುನ್ನ ಪರಿಷತ್ತಿನ ಸಭಾಂಗಣವನ್ನು ಪರಿಶೀಲಿಸಿದ ಅವರು, ಬೆಳಗಾವಿಯಲ್ಲಿ ಮೊದಲ ಅಧಿವೇಶನ ಆರಂಭವಾದ ಹಿನ್ನೆಲೆಯನ್ನು ವಿವರಿಸಿದರು.

‘ಅಧಿವೇಶನದ ಸಿದ್ಧತೆ ಕುರಿತು ಪೂರ್ವಭಾವಿ ಸಭೆಗಳನ್ನು ನಡೆಸಿ ಸೂಕ್ತ ನಿರ್ದೇಶನಗಳನ್ನು ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

ವಿಧಾನಪರಿಷತ್ತಿನ ಕಾರ್ಯದರ್ಶಿ ಮಹಾಲಕ್ಷ್ಮಿ, ಎಸ್ಪಿ ಲಕ್ಷ್ಮಣ ನಿಂಬರಗಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಸಂಜೀವಕುಮಾರ್ ಹುಲಕಾಯಿ, ಎನ್.ಐ.ಸಿ. ಅಧಿಕಾರಿ ಸಂಜೀವಕುಮಾರ್ ಕ್ಷೀರಸಾಗರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಪಾಲ್ಗೊಂಡಿದ್ದರು.

‘ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ಚರ್ಚಿಸಿ’

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಒತ್ತು ನೀಡುವ ಮೂಲಕ ಅವುಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಇಲ್ಲಿನ ಕನ್ನಡ ಪರ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದರು.

ಮುಖಂಡರಾದ ಅಶೋಕ ಚಂದರಗಿ, ಮಹಾದೇವ ತಳವಾರ, ದೀಪಕ ಗುಡಗನಟ್ಟಿ, ಶಿವಪ್ಪ ಶಮರಂತ, ಮೈನೋದ್ದೀನ್ ಮಕಾನದಾರ, ಶಂಕರ ಬಾಗೇವಾಡಿ, ವೀರೇಂದ್ರ ಗೋಬರಿ, ಸುರೇಶ ಗವನ್ನವರ, ಸುರೇಶ ಕಿರಾಯಿ, ನಾಗರಾಜ ಲಕ್ಕಪ್ಪಗೋಳ, ಪ್ರಕಾಶ ಪಾನ್ಯಾಗೋಳ, ಪರಶುರಾಮ ಕುರಣೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.