ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಡಿ.5ರಂದು

ಅಥಣಿ, ಕಾಗವಾಡ ಕ್ಷೇತ್ರದ ಮತದಾನಕ್ಕೆ ಕ್ಷಣಗಣನೆ
Last Updated 5 ಡಿಸೆಂಬರ್ 2019, 9:12 IST
ಅಕ್ಷರ ಗಾತ್ರ

ಬೆಳಗಾವಿ: ಅಥಣಿ ಮತ್ತು ಕಾಗವಾಡ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಮತದಾನ ಗುರುವಾರ (ಡಿ.5) ನಡೆಯಲಿದೆ. ಕಣದಲ್ಲಿರುವ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಒಟ್ಟು 17 ಮಂದಿಯ ಭವಿಷ್ಯ ನಿರ್ಧಾರವಾಗಲು ಕ್ಷಣಗಣನೆ ಆರಂಭವಾಗಲಿದೆ.

ಅಥಣಿಯಲ್ಲಿ ಬಿಜೆಪಿಯ ಮಹೇಶ ಕುಮಠಳ್ಳಿ, ಕಾಂಗ್ರೆಸ್‌ನ ಗಜಾನನ ಮಂಗಸೂಳಿ ಸೇರಿದಂತೆ 8 ಅಭ್ಯರ್ಥಿಗಳು, ಕಾಗವಾಡದಲ್ಲಿ ಬಿಜೆಪಿಯ ಶ್ರೀಮಂತ ಪಾಟೀಲ, ಕಾಂಗ್ರೆಸ್‌ನ ಭರಮಗೌಡ (ರಾಜು) ಕಾಗೆ ಹಾಗೂ ಜೆಡಿಎಸ್‌ನ ಶ್ರೀಶೈಲ ತುಗಶೆಟ್ಟಿ ಸೇರಿದಂತೆ 9 ಮಂದಿ ಕಣದಲ್ಲಿದ್ದಾರೆ. ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ.

ಅಥಣಿಯಲ್ಲಿ ಮಹೇಶ ಕುಮಠಳ್ಳಿ ಹಾಗೂ ಕಾಗವಾಡದಲ್ಲಿ ಶ್ರೀಮಂತ ಪಾಟೀಲ ರಾಜೀನಾಮೆ ನೀಡಿದ್ದರಿಂದ ಉಪ ಚುನಾವಣೆ ನಡೆಯುತ್ತಿದೆ. 2018ರ ಮೇ ತಿಂಗಳಲ್ಲಿ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಅವರು ಈ ಬಾರಿ ಬಿಜೆಪಿಯಿಂದ ಕಣದಲ್ಲಿದ್ದಾರೆ. ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿರುವ ಚುನಾವಣೆಯೂ ಇದಾಗಿದೆ.

ಅಥಣಿಯಲ್ಲಿ 1,12,176 ಪುರುಷರು ಹಾಗೂ 1,05,796 ಮಹಿಳೆಯರು, ಇಬ್ಬರು ಇತರರು ಸೇರಿ 2,17,974 ಮತದಾರರಿದ್ದಾರೆ. ಇವರಲ್ಲಿ 1,396 ಅಂಗವಿಕಲರಿದ್ದಾರೆ. 18ರಿಂದ 19 ವರ್ಷ ವಯಸ್ಸಿನ 3,368 ಮಂದಿ ಇದ್ದಾರೆ. 260 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅಥಣಿಯ ಅಬ್ದುಲ್‌ ಕಲಾಂ ಪ್ರೌಢಶಾಲೆಯಲ್ಲಿ ಮಹಿಳಾ ಮತದಾರರಿಗೆಂದೇ ವಿಶೇಷವಾಗಿ ‘ಸಖಿ’ ಮತಗಟ್ಟೆ ಸ್ಥಾಪಿಸಲಾಗಿದೆ. ಇಲ್ಲಿಯೇ ಒಂದು ಕೊಠಡಿಯಲ್ಲಿ ಅಂಗವಿಕಲರಿಗಾಗಿ ಮತಗಟ್ಟೆ ಸ್ಥಾಪಿಸಲಾಗಿದೆ. 1,456 ಸಿಬ್ಬಂದಿ ನಿಯೋಜಿಸಲಾಗಿದೆ.

ಕಾಗವಾಡದಲ್ಲಿ 95,786 ಪುರುಷರು ಹಾಗೂ 89,657 ಮಹಿಳೆಯರು ಸೇರಿದಂತೆ 1,85,443 ಮತದಾರರಿದ್ದಾರೆ. ಇವರಲ್ಲಿ 992 ಅಂಗವಿಕಲ ಮತದಾರರಿದ್ದಾರೆ. 18ರಿಂದ 19 ವರ್ಷ ವಯಸ್ಸಿನ 3,788 ಮಂದಿ ಇದ್ದಾರೆ. 231 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಉಗಾರ ಖುರ್ದ್‌ನಲ್ಲಿರುವ ಗ್ರಾಮ ಲೆಕ್ಕಾಧಿಕಾರಿ ಕಚೇರಿಯಲ್ಲಿ ‘ಸಖಿ’ ಮತಗಟ್ಟೆ ಮತ್ತು ಐನಾಪುರದ ನಮ್ಮೂರ ಬಾಲಕರ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಅಂಗವಿಕಲರ ಮತಗಟ್ಟೆ ಸ್ಥಾಪಿಸಲಾಗಿದೆ. ಮತದಾರರಿಗೆ ಅಗತ್ಯವಾದ ಎಲ್ಲ ಸೌಕರ್ಯಗಳನ್ನು ಒದಗಿಸಲಾಗಿದೆ. ಕ್ಷೇತ್ರಕ್ಕೆ 1,293 ಸಿಬ್ಬಂದಿ ನಿಯೋಜಿಸಲಾಗಿದೆ. ಪೊಲೀಸ್ ಬಂದೋಬಸ್ತ್‌ ಕೂಡ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಈ ಬಾರಿ ‘ಎಂ–3 ವಿದ್ಯುನ್ಮಾನ ಮತಯಂತ್ರ’ಗಳನ್ನು ಬಳಸಲಾಗುತ್ತಿದೆ. ಬುಧವಾರ ಸಿಬ್ಬಂದಿ ನಿಯೋಜನೆ ಕಾರ್ಯ ಆಯಾ ಕ್ಷೇತ್ರಗಳ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಿತು. ಸಿಬ್ಬಂದಿಯು ಮತಯಂತ್ರಗಳು ಮತ್ತಿತರ ಪರಿಕರಗಳೊಂದಿಗೆ ಮತಗಟ್ಟೆಗಳನ್ನು ತಲುಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT