ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಜಿಲ್ಲೆಯಲ್ಲಿ 7.17 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ

ಮುಂಗಾರು ಹಂಗಾಮಿಗೆ ರೈತರು, ಕೃಷಿ ಇಲಾಖೆಯಿಂದ ಸಿದ್ಧತೆ
Last Updated 12 ಮೇ 2022, 11:15 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 7.17 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

ಕೆಲವು ದಿನಗಳಿಂದ ಆಗಾಗ ಬೀಳುತ್ತಿರುವ ಮುಂಗಾರು ಪೂರ್ವ ಮಳೆಯು ಭೂಮಿ ಹದಗೊಳಿಸುವುದಕ್ಕೆ, ಗೊಬ್ಬರ ಸೇರಿಸುವುದಕ್ಕೆ ಸಹಕಾರಿಯಾಗಿದೆ. ರೈತರು ಈ ಬಾರಿ ಉತ್ತಮ ಮಳೆಯ ಆಶಯದೊಂದಿಗೆ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮೊದಲಾದ ಪರಿಕರಗಳ ಪೂರೈಕೆಗೆ ಕೃಷಿ ಇಲಾಖೆಯಿಂದಲೂ ತಯಾರಿ ನಡೆದಿದೆ.

ಹೋದ ವರ್ಷ 7.16 ಲಕ್ಷ ಹೆಕ್ಟೇರ್‌ ಗುರಿ ಹೊಂದಲಾಗಿತ್ತು. ಅದರಲ್ಲಿ ಬಹುತೇಕ ಬಿತ್ತನೆಯಾಗಿತ್ತು. ಅದರ ಹಿಂದಿನ ವರ್ಷ 6.68 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿ ಬಹುತೇಕ ಸಾಧನೆಯಾಗಿತ್ತು. ವರ್ಷದಿಂದ ವರ್ಷಕ್ಕೆ ಬಿತ್ತನೆ ಗುರಿಯನ್ನು ಹೆಚ್ಚಿಸಲಾಗುತ್ತಿದೆ. ಈ ಬಾರಿ 56ಸಾವಿರ ಕ್ವಿಂಟಲ್‌ ಬಿತ್ತನೆ ಬೀಜಗಳು ಮತ್ತು 2.65 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರ ಬೇಕಾಗುತ್ತದೆ ಎಂದು ಕೃಷಿ ಇಲಾಖೆಯಿಂದ ಅಂದಾಜಿಸಲಾಗಿದೆ.

ಎಣ್ಣೆಕಾಳುಗಳಿಗೆ

‘ಮುಂಗಾರು ಪೂರ್ವ ಮಳೆಯು ರೈತರು ಕೃಷಿ ಜಮೀನು ಹದಗೊಳಿಸುವುದಕ್ಕೆ ಪೂರಕವಾಗಿದೆ. ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೆ ಬೀಜಗಳ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿತ್ತನೆ ಗುರಿಯ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಇದಕ್ಕೆ ತಕ್ಕಂತೆ ಬಿತ್ತನೆ ಬೀಜ ದಾಸ್ತಾನಿಗೆ ಕ್ರಮ ವಹಿಸಲಾಗಿದೆ. ಎಣ್ಣೆಕಾಳುಗಳಿಗೆ ಬೇಡಿಕೆ ಕಂಡುಬಂದಿರುವುದರಿಂದ ಅವುಗಳಿಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಬೈಲಹೊಂಗಲ, ಹುಕ್ಕೇರಿ, ಬೆಳಗಾವಿ, ಚಿಕ್ಕೋಡಿ ತಾಲ್ಲೂಕುಗಳಲ್ಲಿ ಸೋಯಾಅವರೆ(ಸೋಯಾಬೀನ್)ಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಮಾಸಾಂತ್ಯಕ್ಕೆ ತಂಪು ವಾತಾವರಣ ನಿರ್ಮಾಣವಾದರೆ ರೈತರು ಬಿತ್ತನೆ ಕಾರ್ಯ ಆರಂಭಿಸುವ ಸಾಧ್ಯತೆ ಇದೆ. 98ಸಾವಿರ ಹೆಕ್ಟೇರ್‌ನಲ್ಲಿ ಸೋಯಾಬೀನ್ ಬಿತ್ತನೆ ಗುರಿ ಇದ್ದು, 42ಸಾವಿರ ಕ್ವಿಂಟಲ್ ಸೋಯಾಬೀನ್‌ ಬಿತ್ತನೆಬೀಜಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಅಗತ್ಯಕ್ಕೆ ತಕ್ಕಂತೆ

‘2.65 ಮೆಟ್ರಿಕ್‌ ಟನ್‌ ರಸಗೊಬ್ಬರ ಬೇಕಾಗುವ ನಿರೀಕ್ಷೆ ಇದೆ. ಸೆಪ್ಟೆಂಬರ್‌ವರೆಗೆ ಅಗತ್ಯಕ್ಕೆ ಅನುಗುಣವಾಗಿ ರಸಗೊಬ್ಬರ ಪೂರೈಕೆಗೆ ಕ್ರಮ ವಹಿಸಲಾಗುವುದು’ ಎನ್ನುತ್ತಾರೆ ಪಾಟೀಲ.

ಹಂಗಾಮಿನಲ್ಲಿ ಕಬ್ಬು, ಭತ್ತ, ಸೋಯಾಅವರೆ, ಸಜ್ಜೆ, ಶೇಂಗಾ, ಮೆಕ್ಕೆಜೋಳ, ಹೆಸರು, ಉದ್ದು, ಹೈಬ್ರೀಡ್ ಜೋಳ, ಸಜ್ಜೆ, ತೊಗರಿ, ಸೂರ್ಯಕಾಂತಿ ಬಿತ್ತಲಾಗುತ್ತದೆ. ಇಲಾಖೆಯಿಂದ ಎಲ್ಲ ವರ್ಗದ ರೈತರಿಗೆ ಗರಿಷ್ಠ 2 ಹೆಕ್ಟೇರ್‌ (5 ಎಕರೆ) ಪ್ರದೇಶಕ್ಕೆ ಸೀಮಿತವಾಗುವಂತೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗುವುದು. ಜಿಲ್ಲೆಯ ಒಟ್ಟು 35 ರೈತ ಸಂಪರ್ಕ ಕೇಂದ್ರಗಳು ಮತ್ತು 95 ಪಿಕೆಪಿಎಸ್ (ಹೆಚ್ಚುವರಿ ವಿತರಣಾ ಕೇಂದ್ರ)ಗಳ ಮೂಲಕ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗುವುದು ಎಂದು ಕೃಷಿ ಇಲಾಖೆ ತಿಳಿಸಿದೆ.

2,06,905 ಹೆಕ್ಟೇರ್‌, 62,865 ಹೆಕ್ಟೇರ್‌ ಕಾಳುಗಳು, 1,30,385 ಹೆಕ್ಟೇರ್‌ ಎಣ್ಣೆಕಾಳುಗಳು, 3,17,770 ಕಬ್ಬು, ಹತ್ತಿ, ತಂಬಾಕು ಮೊದಲಾದವುಗಳ (ವಾಣಿಜ್ಯ ಬೆಳೆ) ಬಿತ್ತನೆಗೆ ಗುರಿ ಹೊಂದಲಾಗಿದೆ. ಖಾನಾಪುರ, ಬೆಳಗಾವಿ ಹಾಗೂ ಚನ್ನಮ್ಮನ ಕಿತ್ತೂರು ತಾಲ್ಲೂಕಿನಲ್ಲಿ ಹಂಗಾಮಿನಲ್ಲಿ ಭತ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ.

ಹೋದ ವರ್ಷ ಮುಂಗಾರಿನಲ್ಲಿ ಅಲ್ಲಲ್ಲಿ ನೆರೆ ಹಾಗೂ ಅತಿವೃಷ್ಟಿ ಉಂಟಾಗಿ ಬೆಳೆ ಹಾನಿಯಾದ್ದರಿಂದ ರೈತರು ನಷ್ಟ ಅನುಭವಿಸಿದ್ದರು. ಅಲ್ಲದೇ, ಅಕಾಲಿಕ ಮಳೆಯು ಭತ್ತ, ದ್ರಾಕ್ಷಿ ಮೊದಲಾದ ಬೆಳೆಗಳಿಗೆ ಹಾನಿ ಮಾಡಿದೆ.

ತೊಂದರೆ ಆಗದಂತೆ ಕ್ರಮ

ಬಿತ್ತನೆ ಬೀಜ ಹಾಗೂ ರಸಗೊಬ್ಬರ ಲಭ್ಯತೆ ವಿಷಯದಲ್ಲಿ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಈ ಸಂಬಂಧ ರಸಗೊಬ್ಬರ ಮಾರಾಟಗಾರರ ಸಭೆ ನಡೆಸಿ ನಿರ್ದೇಶನ ನೀಡಲಾಗಿದೆ.

–ಶಿವನಗೌಡ ಪಾಟೀಲ, ಜಂಟಿ ನಿರ್ದೇಶಕ, ಕೃಷಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT