ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ ಚತುರ್ಥಿ, ಮೊಹರಂಗೆ ಸಿದ್ಧತೆ

ಅಗತ್ಯ ಬಂದೋಬಸ್ತ್‌ ಒದಗಿಸಲು ಕ್ರಮ: ಐಜಿ‍ಪಿ
Last Updated 29 ಆಗಸ್ಟ್ 2019, 11:25 IST
ಅಕ್ಷರ ಗಾತ್ರ

ಬೆಳಗಾವಿ: ‘ಉತ್ತರ ವಲಯದ ಎಲ್ಲ ಜಿಲ್ಲೆಗಳಲ್ಲೂ ಸೆ. 2ರಿಂದ ಆರಂಭವಾಗಲಿರುವ ಸಾರ್ವಜನಿಕ ಗಣೇಶೋತ್ಸವ, ಸೆ. 9 ಮತ್ತು 10ರಂದು ನಡೆಯಲಿರುವ ಮೊಹರಂ ಮೆರವಣಿಗೆಗೆ ಪೊಲೀಸ್ ಬಂದೋಬಸ್ತ್‌ ಮಾಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಐಜಿ‍ಪಿ ಎಚ್‌.ಜಿ. ರಾಘವೇಂದ್ರ ಸುಹಾಸ್ ತಿಳಿಸಿದರು.

‘ಬೆಳಗಾವಿ ಜಿಲ್ಲೆಯಲ್ಲಿ 3,790 ವಿಜಯಪುರದಲ್ಲಿ 2,075 ಬಾಗಲಕೋಟೆಯಲ್ಲಿ 2,500, ಧಾರವಾಡದಲ್ಲಿ 1,245, ಗದಗದಲ್ಲಿ 1,355 ಸೇರಿ ಒಟ್ಟು 10,965 ಗಣೇಶ ಮೂರ್ತಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲು ಅನುಮತಿ ಪಡೆದಿದ್ದಾರೆ. ಹಬ್ಬಕ್ಕೆ ಇನ್ನೂ ಕೆಲವು ದಿನಗಳು ಬಾಕಿ ಇರುವುದರಿಂದ, ಮೂರ್ತಿಗಳ ಸಂಖ್ಯೆ ಹೆಚ್ಚಬಹುದು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘12ಸಾವಿರ ಪೊಲೀಸರನ್ನು ನಿಯೋಜಿಸಲಾಗುವುದು. ಕ್ಷಿಪ್ರ ಕಾರ್ಯ ಪಡೆಯ 3 ತುಕಡಿಗಳನ್ನು ನಿಯೋಜಿಸಲಾಗುವುದು. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗುವುದು. ಗಣೇಶ ಮಹಾಮಂಡಳಗಳಿಗೆ ಅನುಕೂಲ ಮಾಡಿಕೊಡಲು ಕ್ರಮ ವಹಿಸಲಾಗಿದೆ. ಹಬ್ಬವನ್ನು ಶಾಂತಿಯಿಂದ ಆಚರಿಸುವಂತೆ ಮಂಡಳಗಳಿಗೆ, ಮುಖಂಡರಿಗೆ ತಿಳಿವಳಿಕೆ ನೀಡಲಾಗಿದೆ. ಸಭೆ ನಡೆಸಲಾಗಿದೆ. ಏನೇ ಕುಂದುಕೊರತೆಗಳಿದ್ದಲ್ಲಿ ಸಂಬಂಧಿಸಿದ ಎಸ್ಪಿಗಳಿಗೆ ಅಥವಾ ನನಗೆ ಕರೆ ಮಾಡಬಹುದು. ಉತ್ಸವ ಆಚರಣೆಗೆ ಎಲ್ಲ ರೀತಿಯ ಅನುಕೂಲ ಮಾಡಿಕೊಡಲು ಕ್ರಮ ವಹಿಸಲಾಗುವುದು’ ಎಂದರು.

‘ಹಬ್ಬ, ಮೆರವಣಿಗೆ ಸಂದರ್ಭ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಗುವುದು. ಸಾರ್ವಜನಿಕರು ಸಹಕಾರ ನೀಡಬೇಕು. ನಿಗದಿಪಡಿಸಿದ ಮಾರ್ಗಗಳಲ್ಲಷ್ಟೇ ಮೂರ್ತಿ ಮೆರವಣಿಗೆ ಮಾಡಬೇಕು’ ಎಂದು ಹೇಳಿದರು.

‘ವಲಯದ ಬಹುತೇಕ ಕಡೆಗಳಲ್ಲಿ ನೆರೆಯಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ಅವರ ಭಾವನೆಗಳಿಗೆ ಧಕ್ಕೆಯಾಗದಂತೆ ಹಬ್ಬ ಆಚರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮಂಡಳಿಗಳ ಪದಾಧಿಕಾರಿಗಳ ಸಭೆ ಆಯೋಜಿಸಿ ಸೂಚನೆ ನೀಡಲಾಗಿದೆ. ಗುಣಮಟ್ಟದ ವಿದ್ಯುತ್‌ ಪೂರೈಸಬೇಕು. ಪೆಂಡಾಲ್‌ಗಳ ಬಳಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಮೆರವಣಿಗೆಗಾಗಿ ರಸ್ತೆಗಳ ಗುಂಡಿಗಳನ್ನು ಮುಚ್ಚಬೇಕು ಎಂದು ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳು, ಇಲಾಖೆಗಳಿಗೆ ತಿಳಿಸಲಾಗಿದೆ’ ಎಂದು ವಿವರಿಸಿದರು.

‘ವಲಯದಲ್ಲಿ ಶಾಂತಿಗೆ ಭಂಗ ತರಬಹುದಾದ 3ಸಾವಿರ ಮಂದಿಯಿಂದ ಮುಂಜಾಗ್ರತಾ ಕ್ರಮವಾಗಿ ಮುಚ್ಚಳಿಕೆ ಪತ್ರ ಪಡೆಯಲಾಗಿದೆ, ಸೂಕ್ತ ಎಚ್ಚರಿಕೆ ನೀಡಲಾಗಿದೆ’ ಎಂದು ಪ್ರತಿಕ್ರಿಯಿಸಿದರು.

ಎಸ್ಪಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ರಾಮ ಅರಸಿದ್ದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT