ಶುಕ್ರವಾರ, ಸೆಪ್ಟೆಂಬರ್ 20, 2019
21 °C
3ಸಾವಿರ ಪೊಲೀಸರ ನಿಯೋಜನೆ; ಸಿಸಿಟಿವಿ ಕ್ಯಾಮೆರಾ ಕಣ್ಗಾವಲು

ಗಣೇಶ ವಿಸರ್ಜನೆ ಮೆರವಣಿಗೆ ಸೆ. 12ರಂದು

Published:
Updated:
Prajavani

ಬೆಳಗಾವಿ: ನಗರದ ವಿವಿಧೆಡೆ ‍ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಸೆ. 12ರಂದು ಸಂಜೆ 4ರಿಂದ ಆರಂಭಗೊಳ್ಳಲಿದೆ.

ಕಪಿಲೇಶ್ವರ ಹೊಂಡ, ಕಿಲ್ಲಾ ಕೆರೆ, ಮಜಗಾವಿ, ವಡಗಾವಿ ಸೇರಿದಂತೆ 8 ಸ್ಥಳಗಳಲ್ಲಿ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುತ್ತಿದೆ. ಇದಕ್ಕಾಗಿ ಸಿದ್ಧತೆಯಾಗಿದೆ. ದೊಡ್ಡ ಮೂರ್ತಿಗಳ ವಿಸರ್ಜನೆಗಾಗಿ 16 ಕ್ರೇನ್‌ಗಳನ್ನು ಬಳಸಲಾಗುತ್ತಿದೆ. ಮೆರವಣಿಗೆ ಮಾರ್ಗದಲ್ಲಿ ಹೆಚ್ಚಿನ ಬೆಳಕು ನೀಡುವ ವಿದ್ಯುತ್‌ದೀಪಗಳನ್ನು ಅಳವಡಿಸಲಾಗಿದೆ.

ನರಗುಂದಕರ ಭಾವೆ ಚೌಕದಿಂದ ಆರಂಭವಾಗಿ ಮಾರುತಿ ಗಲ್ಲಿ, ಹುತಾತ್ಮ ಚೌಕ, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಯಂಡೇಕೂಟ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ಚೌಕ (ಬೋಗಾರ್‌ವೇಸ್‌), ರಾಮಲಿಂಗಖಿಂಡ್‌ ಗಲ್ಲಿ ರಸ್ತೆ, ಟಿಳಕಚೌಕ, ಹೇಮು ಕಾಲೊನಿ ಚೌಕ (ಶಿವಭವನ), ಶನಿಮಂದಿರ, ಕಪಿಲೇಶ್ವರ ಮೇಲ್ಸೇತುವೆ ಮೂಲಕ ಕಪಿಲೇಶ್ವರ ಮಂದಿರದ ಬಳಿ ಮೆರವಣಿಗೆ ಮುಕ್ತಾಯಗೊಳ್ಳಲಿದೆ. ಹೀಗಾಗಿ, ಈ ಮಾರ್ಗದಲ್ಲಿ ಬುಧವಾರ ಪೊಲೀಸರು ಪಥಸಂಚಲನ ನಡೆಸಿದರು.

‘ಮೂವರು ಡಿಸಿಪಿಗಳು, 9 ಕೆಎಸ್‌ಆರ್‌ಪಿ, 6 ಸಿಎಆರ್‌ ತುಕಡಿಗಳು ಸೇರಿ ಒಟ್ಟು 3ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಸಿಆರ್‌ಪಿಎಫ್‌ ತುಕಡಿಯೂ ಬಂದಿದೆ. ಬಂದೋಬಸ್ತ್‌ಗಾಗಿ 258 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದಲ್ಲದೇ, ಸಂಚಾರ ನಿಯಮಗಳ ಪಾಲನೆ ಮೇಲೆ ನಿಗಾ ವಹಿಸಲು ಅಳವಡಿಸಿರುವ 105 ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಉದ್ದೇಶಕ್ಕೆ ಹಾಕಿರುವ 42 ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿದೆ’ ಎಂದು ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮಹಿಳೆಯರು ಹಾಗೂ ಮಕ್ಕಳು ಕುಳಿತು ಮರವಣಿಗೆ ವೀಕ್ಷಿಸಲು ಅನುಕೂಲವಾಗುವಂತೆ, ಬೋಗಾರ್‌ವೇಸ್ ವೃತ್ತದಿಂದ ವನಿತಾ ವಿದ್ಯಾಲಯವರೆಗೂ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲಾಧಿಕಾರಿಯಿಂದ ಸಭೆ:

ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಬುಧವಾರ ಅಧಿಕಾರಿಗಳು ಹಾಗೂ ಗಣೇಶ ಮಂಡಳಗಳ ಪದಾಧಿಕಾರಿಗಳ ಸಭೆ ನಡೆಸಿದರು.

‘ಜಿಲ್ಲೆಯಲ್ಲಿ ಪ್ರವಾಹ ಬಂದಿರುವುದರಿಂದ ಗಣೇಶ ಮಂಡಳಗಳು ಉತ್ಸವವನ್ನು ಸರಳವಾಗಿ ಆಚರಿಸುವ ನಿರ್ಧಾರ ಕೈಗೊಂಡಿದ್ದು ಅಭಿನಂದನಾರ್ಹ. ಮೆರವಣಿಗೆಗೆ ಜಿಲ್ಲಾಡಳಿತದಿಂದ ಸಹಕಾರ ಕೊಡಲಾಗುವುದು. ಅಂತೆಯೇ ಕಾನೂನು ಸುವ್ಯವಸ್ಥೆ ಕಾಪಾಡಲು ಮಂಡಳಗಳ ಜೊತೆಗೆ ಸಾರ್ವಜನಿಕರು ಕೂಡ ಸಹಕರಿಸಬೇಕು’ ಎಂದು ತಿಳಿಸಿದರು.

‘ಸಂಜೆ 4ರಿಂದ ನಡೆಯುವ ಮೆರವಣಿಗೆ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಪಟಾಕಿಗಳನ್ನು ಸುಡುವ ಬದಲಿಗೆ ಆ ಹಣವನ್ನು ಸಂತ್ರಸ್ತರಿಗೆ ಕೊಡಬೇಕು’ ಎಂದು ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್‌ ಸಲಹೆ ನೀಡಿದರು.

‘ತುರ್ತು ವೈದ್ಯಕೀಯ ಸೌಲಭ್ಯ ಹಾಗೂ ನಗರದಾದ್ಯಂತ ನಿರಂತರ ವಿದ್ಯುತ್ ವ್ಯವಸ್ಥೆ ಹಾಗೂ ಕಲ್ಪಿಸಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಬಿ. ಬೂದೆಪ್ಪ, ಎಎಸ್ಪಿ ಡಾ.ರಾಮಲಕ್ಷ್ಮಣ ಅರಸಿದ್ದಿ, ಉಪ ವಿಭಾಗಾಧಿಕಾರಿ ಡಾ.ಕವಿತಾ ಯೋಗಪ್ಪನ್ನವರ, ತಹಶೀಲ್ದಾರ್‌ ಮಂಜುಳಾ ನಾಯಕ ಇದ್ದರು.

Post Comments (+)