ಶನಿವಾರ, ಅಕ್ಟೋಬರ್ 19, 2019
28 °C

ರಾಜ್ಯಮಟ್ಟದ ವಿದ್ಯಾರ್ಥಿ ಕಾರ್ಯಾಗಾರಕ್ಕೆ ಸಿದ್ಧತೆ

Published:
Updated:
Prajavani

ಬೆಳಗಾವಿ: ಬಂಡಾಯ ಸಾಹಿತ್ಯ ಸಂಘಟನೆಯಿಂದ ನವೆಂಬರ್‌ನಲ್ಲಿ ರಾಜ್ಯ ಮಟ್ಟದ ವಿದ್ಯಾರ್ಥಿ ಕಾರ್ಯಾಗಾರ ಆಯೋಜಿಸುವ ಸಂಬಂಧ ಭಾನುವಾರ ಪೂರ್ವಭಾವಿ ಸಮಾಲೋಚನಾ ಸಭೆ ನಡೆಯಿತು.‌

‘ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಿರತರಾಗಿರುವ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಪ್ರವೇಶ ಪಡೆಯ ಬಯಸುವ ಸಂಶೋಧನಾ ಮತ್ತು ಪದವಿ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ನ. 16 ಹಾಗೂ 17ರಂದು ಕಾರ್ಯಾಗಾರ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಸಾಹಿತಿ ಡಾ.ಯಲ್ಲಪ್ಪ ಹಿಮ್ಮಡಿ ತಿಳಿಸಿದರು.

‘ಪ್ರಗತಿಪರ ಆಲೋಚನೆಯ, ಕಲೆ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿಯುಳ್ಳ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರತಿ ಜಿಲ್ಲೆಯಿಂದ ಕನಿಷ್ಠ 10 ಮಂದಿಯನ್ನು ಆಹ್ವಾನಿಸಲು ಯೋಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಬಾಲಕೃಷ್ಣ ನಾಯಕ್, ಮಂಜುನಾಥ್ ಪಾಟೀಲ, ಕಾರ್ಮಿಕ ಮುಖಂಡ ಜಿ.ವಿ. ಕುಲಕರ್ಣಿ ಮಾತನಾಡಿದರು. ಸಂಘಟನೆಯ ಅಡಿವೆಪ್ಪ ಇಟಗಿ, ಆತೀಶ್ ಢಾಲೆ, ಮನೋಹರ್ ಕಾಂಬಳೆ, ಶಂಕರ ಕೊಡತೆ, ಸುಭಾಷ್ ಶಿರಗಾಂವ್ಕರ, ಸಂತೋಷ ನಾಯಿಕ, ರಾಜು ಸನದಿ, ಗೌತಮ ಮಾಳಗೆ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಾದ ಆಕಾಶ ಬೇವಿನಕಟ್ಟಿ, ಹನುಮಂತ ಯರಗಟ್ಟಿ, ಸಚಿನ ಮಮದಾಪುರಮಠ, ವೆಂಕಟೇಶ ಹೆಳವರ, ಸಪನಾ ಕಾಂಬಳೆ, ಪುಟ್ಟಕ್ಕ ಅಕ್ಕೆನ್ನವರ, ಆಶಾ ಕಾಂಬಳೆ, ಸೈದಪ್ಪ ಹಿರೇಮನಿ, ಅನಿಲ್ ನಡುವಿನಕೇರಿ, ಕಾಡಪ್ಪ ಮಾದರ ಇದ್ದರು.

ಕಾವೇರಿ ಬುಕ್ಯಾಳಕರ, ನಕುಶಾ, ನಿಖಿತಾ ಮೇತ್ರಿ, ಸುನೀಲ್ ನಾಟೀಕಾರ್, ರೋಹಿತ್ ರಾಠೋಡ ಕ್ರಾಂತಿಗೀತೆ ಹಾಡಿದರು. ಶಂಕರ ಬಾಗೇವಾಡಿ ಸ್ವಾಗತಿಸಿದರು. ಗಜಾನನ ಸಂಗೋಟೆ ವಂದಿಸಿದರು.

Post Comments (+)