ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ ‘ಬಿಸಿ’ಯಲ್ಲೂ ಭರ್ಜರಿ ವ್ಯಾಪಾರ

ಬೆಳಗಾವಿಯಲ್ಲಿ ಆಯುಧಪೂಜೆ, ವಿಜಯದಶಮಿಗೆ ಸಿದ್ಧತೆ
Last Updated 6 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಬೆಳಗಾವಿ: ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬಗಳ ಅಂಗವಾಗಿ ನಗರದ ಮಾರುಕಟ್ಟೆಗಳಲ್ಲಿ ಹೂವು, ಹಣ್ಣುಗಳ ಮಾರಾಟ ಭರ್ಜರಿಯಾಗಿ ನಡೆಯಿತು.

ನವರಾತ್ರಿ ಆಚರಣೆ ಬಳಿಕ ‘ವಿಜಯ ದಶಮಿ’ಯಂದು ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ಬನ್ನಿಯನ್ನು ವಿನಿಮಯ ಮಾಡವುದು ಇಲ್ಲಿನ ಆಚರಣೆ. ಈ ಹಿನ್ನೆಲೆಯಲ್ಲಿ ಹಬ್ಬದ ಮುನ್ನ ದಿನವಾದ ಭಾನುವಾರ ಮಾರುಕಟ್ಟೆಯಲ್ಲಿ ವ್ಯಾಪಾರ– ವಹಿವಾಟು ಜೋರಾಗಿ ನಡೆಯಿತು. ಅಗತ್ಯ ವಸ್ತುಗಳ ಬೆಲೆ ಕೊಂಚ ಏರಿಕೆಯಾಗಿತ್ತು. ಈ ನಡುವೆಯೂ ಜನರು ಪೂಜೆಗೆ ಬೇಕಾಗುವಂತಹ ಫಲ–ಪುಷ್ಪ ಮೊದಲಾದ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದರು.

ಖಡೇಬಜಾರ್‌, ಶನಿವಾರ ಕೂಟ್, ಗಣಪತಿ ಗಲ್ಲಿ, ರವಿವಾರ ಪೇಟೆ, ಮಾರುತಿಗಲ್ಲಿಯಲ್ಲಿ ಭಾರಿ ಜನದಟ್ಟಣೆ ಕಂಡುಬಂತು. ಚೆಂಡು ಹೂವು ಮೊಳಕ್ಕೆ ₹50ರಿಂದ ₹60 ಇತ್ತು. ಸೇಬಿನ ಬೆಲೆ ಕಳೆದ ವಾರಕ್ಕೆ ಹೋಲಿಸಿದರೆ ಕೊಂಚ ಕಡಿಮೆ ಇತ್ತು.

ಹಬ್ಬದ ಅಂಗವಾಗಿ ಕೆಲವು ಅಂಗಡಿಗಳಲ್ಲಿ ರಿಯಾಯಿತಿ ದರದಲ್ಲಿ ಬಟ್ಟೆಗಳನ್ನು ಮಾರಲಾಗುತ್ತಿದೆ. ಹಲವರು ಕುಟುಂಬ ಸಮೇತ ಬಂದು ಹೊಸ ಬಟ್ಟೆಗಳ ಖರೀದಿಯಲ್ಲಿ ತೊಡಗಿದ್ದುದು ಕಂಡುಬಂತು.

ಮಾರುಕಟ್ಟೆ ಮಾತ್ರವಲ್ಲದೇ, ನಗರದ ಅಲ್ಲಲ್ಲಿ ಕಬ್ಬು ಹಾಗೂ ಬಾಳೆ ಕಂದುಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಆಯುಧಪೂಜೆ ದಿನದಂದು ಅಂಗಡಿಗಳು, ಕಚೇರಿಗಳು, ಮಳಿಗೆಗಳಲ್ಲಿ, ಕೈಗಾರಿಕಾ ಘಟಕಗಳಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ. ಹೀಗಾಗಿ, ಕೆಲಸದ ಸ್ಥಳಗಳನ್ನು ಸ್ವಚ್ಛಗೊಳಿಸಿ ಪೂಜೆಗಾಗಿ ಅಣಿಗೊಳಿಸುವುದು ಸಾಮಾನ್ಯವಾಗಿತ್ತು.

‘ಭಾನುವಾರ ಕಬ್ಬು, ಬಾಳೆ ಗಿಡಕ್ಕೆ ಹೆಚ್ಚಿನ ಬೇಡಿಕೆ ಬರಲಿಲ್ಲ. ಹಬ್ಬ ಸೋಮವಾರ ಮತ್ತು ಮಂಗಳವಾರ ಇರುವುದರಿಂದ ಮಾರಾಟವಾಗುವ ನಿರೀಕ್ಷೆಯಲ್ಲಿದ್ದೇವೆ’ ಎಂದು ವ್ಯಾಪಾರಿ ಸಲೀಂ ಜಮಾದಾರ ಪ್ರತಿಕ್ರಿಯಿಸಿದರು.

ವಿಜಯದಶಮಿಯಂದು ತೆರೆ:ನವರಾತ್ರಿ ಅಂಗವಾಗಿ ಇಲ್ಲಿ ದೇಶಭಕ್ತಿ ಮೇಳೈಸುವ ‘ದುರ್ಗಾಮಾತಾ ದೌಡ್‌’ ಕಾರ್ಯಕ್ರಮವನ್ನು ಬೆಳಿಗ್ಗೆ, ಮನರಂಜನೆಗಾಗಿ ದಾಂಡಿಯಾ ನೃತ್ಯವನ್ನು ಆಯಾ ಬಡಾವಣೆಗಳಲ್ಲಿ ರಾತ್ರಿ ಸಮಯದಲ್ಲಿ ಆಯೋಜಿಸಲಾಗುತ್ತಿದೆ. ಭಾನುವಾರ ಹಲವು ಬಡಾವಣೆಗಳಲ್ಲಿ ಈ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು. ನಿವಾಸಿಗಳು ಪಾಲ್ಗೊಂಡು ಸಂಭ್ರಮಿಸಿದರು.

ಹಲವು ಬಡಾವಣೆಗಳಲ್ಲಿ ಶಕ್ತಿದೇವತೆ ದುರ್ಗಾಮಾತೆ ಮೂರ್ತಿ ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತಿದೆ. ಭಕ್ತಿ ಸಾರುವ ಹಾಗೂ ಸಾಂಸ್ಕೃತಿಕ ವೈಭವದ ವಾತಾವರಣ ನಿರ್ಮಿಸುವ ಈ ಕಾರ್ಯಕ್ರಮಗಳಲ್ಲಿ ಸ್ಥಳೀಯರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಭಾರತಾಂಬೆ, ಛತ್ರಪತಿ ಶಿವಾಜಿ ಪರ ಘೋಷಣೆಗಳು ಮೊಳಗಿದವು. ಈ ಆಚರಣೆಗೆ ವಿಜಯದಶಮಿಯ ದಿನದಂದು ತೆರೆ ಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT