ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸ್ತುತತೆ ಮಾಯವಾಗದ ಕಾದಂಬರಿ ವಸ್ತು

‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಗೆ 50 ವರ್ಷ
Last Updated 3 ಮಾರ್ಚ್ 2018, 19:46 IST
ಅಕ್ಷರ ಗಾತ್ರ

ಮೈಸೂರು: 50 ವರ್ಷಗಳ ನಂತರವೂ ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯು ಪ್ರಸ್ತುತವಾಗುತ್ತದೆ. ಅದರ ಪ್ರಸ್ತುತತೆ ಮಾಯವಾಗುತ್ತದೆ ಎಂದು ಅನ್ನಿಸುವುದಿಲ್ಲ ಎಂದು ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರ ಕಾದಂಬರಿಗೆ 50 ವರ್ಷದ ಸಂಭ್ರಮದ ಕಾರ್ಯಕ್ರಮ ಭಾನುವಾರ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ಆ ಕಾದಂಬರಿಯ ಒಳನೋಟದ ಬಗ್ಗೆ ಯಾವುದೇ ಬದಲಾವಣೆಯಿಲ್ಲ. 50 ವರ್ಷಗಳಲ್ಲಿ ನನ್ನ ಬರವಣಿಗೆಯ ರೀತಿ, ಭಾಷೆ, ತಂತ್ರ ಬದಲಾವಣೆಯಾಗಿದೆ. ಈಗಲೂ ಅದರ ವಸ್ತುವಿನಲ್ಲಿ ಯಾವುದೇ ಬದಲಾವಣೆ ಮಾಡಬೇಕೆಂದು ಅನ್ನಿಸುತ್ತಿಲ್ಲ. ಆದರೆ, ನೈತಿಕ ಪ್ರಶ್ನೆ ಯಾವುದೆಂದರೆ; ಮಾಂಸಾಹಾರ ಮತ್ತು ಸಸ್ಯಾಹಾರ ಕುರಿತು ನಮ್ಮ ದೇಶದಲ್ಲಿ ವೇದದ ಕಾಲದಿಂದಲೂ ಚರ್ಚೆ ನಡೆಯುತ್ತಿದೆ. ನಂತರ ಜೈನ, ಬೌದ್ಧ ಎರಡೂ ಬಂದವು. ಬೌದ್ಧರು ಮಾಂಸಾಹಾರದ ವಿರುದ್ಧ ಇರಲಿಲ್ಲ. ಅಹಿಂಸಾತತ್ವವನ್ನು ಬಹಳ ಕಟ್ಟುನಿಟ್ಟಾಗಿ ತರ್ಕದ ಅಂತ್ಯಕ್ಕೆ ಕೊಂಡೊಯ್ದವರು ಜೈನರು. ಇದರಿಂದ ವೈದಿಕರ ಮೇಲೂ ಪ್ರಭಾವವಾಯಿತು. ಅವರು ಕೂಡಾ ಮಾಂಸಾಹಾರ ತ್ಯಜಿಸಿದರು ಎಂದರು.

ಹಸುವಿಗೂ ನಮಗೂ ತಾಯಿ–ಮಕ್ಕಳ ಸಂಬಂಧವಿದೆ. ಹಸುವಿನ ಹಾಲಿಗೆ ಮೊರೆ ಹೋಗುವುದು ಸಾಮಾನ್ಯ. ಹಸುವಿನ ಕೆಚ್ಚಲಿಗೆ ಬಾಯಿ ಹಾಕಿ ಮಗು ಕುಡಿಯುವ ದೃಶ್ಯ ಕಾದಂಬರಿಯಲ್ಲಿ ಬರುತ್ತದೆ. ಇದಕ್ಕೆ ನಾನೇ ಉದಾಹರಣೆ. ನಮ್ಮ ಮನೆಯಲ್ಲಿ ಹುಟ್ಟಿದ ಕರು, ಹಸುವಾಗಿ ಬೆಳೆದು ಹಾಲು ಕೊಡುತ್ತದೆ. ಆದರೆ, ಮಾಂಸಕ್ಕಾಗಿ ಅದನ್ನು ಕಡಿದು ತಿನ್ನಬಹುದಾ ಎನ್ನುವ ಪ್ರಶ್ನೆ ಕಾದಂಬರಿಯಲ್ಲಿ ಬರುತ್ತದೆ. ಮಾಂಸಾಹಾರಿಗಳೂ ಹಸು, ಎತ್ತಿನ ಮಾಂಸ ತಿನ್ನುವುದಿಲ್ಲ. ಕೃಷಿ ಚಟುವಟಿಕೆಗಳೆಲ್ಲ ದನಗಳಿಂದ ನಡೆಯುತ್ತವೆ. ಆದರೆ, ರಾಸಾಯನಿಕ ಗೊಬ್ಬರ ಬಳಸಲು ಶುರು ಮಾಡಿದ ಮೇಲೆ ದನಗಳ ಗೊಬ್ಬರ ಬೇಕಾಗಲಿಲ್ಲ, ಟ್ರ್ಯಾಕ್ಟರ್‌ ಬಂದ ಮೇಲೆ ಎತ್ತುಗಳು ಬೇಕಾಗಲಿಲ್ಲ, ಬೈಕ್, ಕಾರು ಬಂದ ಮೇಲೆ ಎತ್ತಿನಗಾಡಿ ಬೇಕಾಗಲಿಲ್ಲ. ಆದರೆ, ಹಾಲು ಬೇಕಿತ್ತಷ್ಟೆ. ಹಾಲು ಕೊಡುವುದನ್ನು ನಿಲ್ಲಿಸಿದ ಮೇಲೆ ಹುಲ್ಲು ಎಲ್ಲಿಂದ ತರುವುದು? ಇದಕ್ಕಾಗಿ ಮಾಂಸಕ್ಕಾಗಿ ಕಡಿಯುವುದು ಶುರುವಾಯಿತು. ಇದು ಪಶ್ಚಿಮ ದೇಶಗಳು ಎಲ್ಲವನ್ನೂ ಆರ್ಥಿಕವಾಗಿ ನೋಡುವ ಪರಿಕಲ್ಪನೆಯಿಂದ ಬಂದುದು ಎಂದು ತಿಳಿಸಿದರು.

ಪಶ್ಚಿಮ ದೇಶದವರಿಗೆ ದನದ ಮಾಂಸ ತಿನ್ನುವ ಅಭ್ಯಾಸವಿತ್ತು. ಆದರೆ, ಅರಬ್‌ ದೇಶಗಳಲ್ಲಿ ಹಸುಗಳಿರಲಿಲ್ಲ. ಹೀಗಾಗಿ ಅಲ್ಲಿನ ಮುಸಲ್ಮಾನರಿಗೆ ದನದ ಮಾಂಸ ತಿನ್ನುವ ಅಭ್ಯಾಸ ಹೇಗೆ ಬರಬೇಕು? ಈ ದೇಶಕ್ಕೆ ಬಂದ ಮೇಲೆ ಹಿಂದೂಗಳಿಗಿಂತ ನಾವು ಬೇರೆ ಎನ್ನುವುದು ಬೆಳೆಯಿತು. ಹಿಂದೂಗಳಿಗೆ ವಿರುದ್ಧವಾಗಿ ಮಾಡಬೇಕು ಎನ್ನುವ ಮನೋಭಾವ ಬೆಳೆಯಿತು. ಇದು ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೂ ಹೆಚ್ಚಾಯಿತು. ಹಿಂದೂ ಮಹಿಳೆಯರು ಕುಂಕುಮ ಇಟ್ಟುಕೊಳ್ಳುತ್ತಾರೆ. ನಮ್ಮ ಮಹಿಳೆಯರು ಇಟ್ಟುಕೊಳ್ಳಬಾರದು ಎಂದು ತಿಳಿದರು. ಫ್ಯಾನ್ಸಿಯಾಗಿಯೂ ಕುಂಕುಮ ಇಟ್ಟುಕೊಳ್ಳುವುದಿಲ್ಲ. ಹೀಗೆ ಗೋಮಾಂಸವನ್ನು ಹಿಂದೂಗಳು ತಿನ್ನುವುದಿಲ್ಲ; ನಾವು ತಿನ್ನಬೇಕು ಎನ್ನುವುದು ಬೆಳೆಯಿತು. ಇದನ್ನು ಎಡಪಂಥೀಯರು ಪ್ರೋತ್ಸಾಹಿಸಿದರು. ಗೋಹತ್ಯೆ ನಿಷೇಧಿಸಬೇಕೆಂದು ಹಿಂದೂ ಮುಖಂಡರು ಹೇಳಿದಾಗ ಯಾಕೆ ಮಾಡಬೇಕೆಂದು ಎಡಪಂಥೀಯರು ಪ್ರಶ್ನಿಸಿದರು. ಮಹಾತ್ಮ ಗಾಂಧಿ ಪ್ರತಿಮೆ ಬಳಿ ಎಡಪಂಥೀಯರು ಗೋಮಾಂಸ ತಿಂದ ಉದಾಹರಣೆಗಳಿವೆ. 50 ವರ್ಷಗಳ ಹಿಂದೆ ಆ ಕಾದಂಬರಿ ಬರೆದಾಗ ಎಡಪಂಥೀಯರು ಇಷ್ಟು ಪ್ರಬಲವಾಗಿರಲಿಲ್ಲ. ಈಗ ಆ ಕಾದಂಬರಿ ಬರೆದಿದ್ದರೆ ಎಡಪಂಥೀಯರನ್ನೂ ಸೇರಿಸಿಕೊಂಡು ಬರೆಯುತ್ತಿದ್ದೆ ಎಂದು ವಿವರಿಸಿದರು.

ಸಾಹಿತಿಗಳು ಇಲ್ಲವೆ ಬುದ್ಧಿಜೀವಿಗಳು ಆಹಾರ ಸಂಸ್ಕೃತಿ ಎನ್ನುವ ಪದದ ದುರ್ಬಳಕೆ ಮಾಡಿದರು. ಆಹಾರ ಎನ್ನುವುದು ಸಂಸ್ಕೃತಿ. ಅದನ್ನು ತಡೆಯಲು ನೀವ್ಯಾರು ಎಂದು ಪ್ರಶ್ನಿಸಿದರು. ಸಂಸ್ಕೃತಿ ಎನ್ನುವುದಾದರೆ ಬಸವಣ್ಣ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂದರು. ಕೊಲಬೇಡ ಎಂದು ಹೇಳಿದ್ದು ಏಕೆಂದರೆ, ಕೊಲ್ಲುವುದು ಸಂಸ್ಕೃತಿಯೇ? ಆಹಾರದ ಹ್ಯಾಬಿಟ್ ಇದೆ ಅಂತ ಹೇಳಿ. ಸಂಸ್ಕೃತಿ ಅನ್ನಬೇಡಿ. ನಮ್ಮದು ಪ್ರಧಾನವಾದ ಆಹಾರ ಮಾಂಸವಲ್ಲ. ಹೀಗೆಂದ ಕೂಡಲೇ ವಾದಕ್ಕಾಗಿ ಹೇಳುವುದು ಮುಂದುವರಿಯುತ್ತದೆ. ಇದನ್ನೆಲ್ಲ ಧಾರ್ಮಿಕ ದೃಷ್ಟಿಯಿಂದ ನೋಡದೆ ನೈತಿಕ ದೃಷ್ಟಿಯಿಂದ ನೋಡಬೇಕಿದೆ ಎಂದು ಸಲಹೆ ನೀಡಿದರು.

ಇಂದು ಸಂಭ್ರಮ

ಕಾದಂಬರಿಕಾರ ಎಸ್‌.ಎಲ್‌. ಭೈರಪ್ಪ ಅವರ ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿ ರಚನೆಯಾಗಿ 50 ವರ್ಷಗಳಾಯಿತು. ಇದರ ಸಂಭ್ರಮವನ್ನು ಮಾರ್ಚ್‌ 4ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಬನಶಂಕರಿಯ 2ನೇ ಹಂತದಲ್ಲಿರುವ ಸುಚಿತ್ರಾ ಫಿಲ್ಮ್‌ ಸೊಸೈಟಿಯಲ್ಲಿ ಆಚರಿಸಲಾಗುತ್ತಿದೆ. ಈ ಕಾದಂಬರಿ ಆಧಾರಿತ ಸಿನಿಮಾ ಪ್ರದರ್ಶನ, ಉಪನ್ಯಾಸ ಹಾಗೂ ಭೈರಪ್ಪ ಅವರೊಂದಿಗೆ ಸಂವಾದ ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT