ಗುರುವಾರ , ಫೆಬ್ರವರಿ 25, 2021
17 °C
ಅಧಿಕಾರಿಗಳ ಸಭೆ ನಡೆಸಿದ ಆರ್‌ಸಿ

ಬೆಳಗಾವಿಗೆ 15ರಂದು ರಾಷ್ಟ್ರಪತಿ ಭೇಟಿ: ರಸ್ತೆಮಾರ್ಗ ಬದಲಿಗೆ ಹೆಲಿಕಾಪ್ಟರ್‌ ಬಳಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಳಗಾವಿ: ‘ಇಲ್ಲಿನ ಕರ್ನಾಟಕ ಕಾನೂನು ಸೊಸೈಟಿ (ಕೆಎಲ್‌ಎಸ್) ಅಮೃತ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ರಾಮನಾಥ ಕೋವಿಂದ್ ಸೆ. 15ರಂದು ಬರಲಿದ್ದು, ಯಾವುದೇ ರೀತಿಯ ಅನಾನುಕೂಲ ಸಿದ್ಧತೆ ಮಾಡಿಕೊಳ್ಳಬೇಕು. ಶಿಷ್ಟಾಚಾರ ಪಾಲಿಸಬೇಕು’ ಎಂದು ಪ್ರಾದೇಶಿಕ ಆಯುಕ್ತ ಪಿ.ಎ. ಮೇಘಣ್ಣವರ ಅಧಿಕಾರಿಗಳಿಗೆ ಸೂಚಿಸಿದರು.

ತಮ್ಮ ಕಚೇರಿಯಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ, ರಾಜ್ಯಪಾಲರು, ಅಟಾರ್ನಿ ಜನರಲ್ ಮತ್ತು ಮುಖ್ಯಮಂತ್ರಿ ಸೇರಿದಂತೆ 12 ಮಂದಿ ವಿವಿಐಪಿ, ವಿಐಪಿಗಳು ಬರುತ್ತಾರೆ. ಈ ವೇಳೆ, ಗೊಂದಲಕ್ಕೆ ಆಸ್ಪದ ನೀಡದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಸಂಘಟಕರು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು’ ಎಂದು ತಿಳಿಸಿದರು.

ಪರ್ಯಾಯ ಮಾರ್ಗ ಪ್ರಸ್ತಾವ

‘ಸಾಂಬ್ರಾ ವಿಮಾನನಿಲ್ದಾಣದಿಂದ ಪ್ರವಾಸಿ ಮಂದಿರ ಮೂಲಕ ಕಾರ್ಯಕ್ರಮ ಸ್ಥಳ ತಲುಪಲು 24 ಕಿ.ಮೀ. ರಸ್ತೆ ಮಾರ್ಗದಲ್ಲಿ ಕ್ರಮಿಸಬೇಕಾಗುತ್ತದೆ. ಹೀಗಾಗಿ, ಹೆಲಿಕಾಪ್ಟರ್ ಬಳಕೆ ಬಗ್ಗೆ ಪರಿಶೀಲಿಸಿ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ಈ ಬಗ್ಗೆ ವಿವರಿಸಿದ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ, ‘ಈಗಾಗಲೇ ಪೊಲೀಸ್ ಆಯುಕ್ತರ ಜತೆಗೆ ಸ್ಥಳ ಪರಿಶೀಲನೆ ನಡೆಸಲಾಗಿದೆ. ರಸ್ತೆ ಮಾರ್ಗಕ್ಕೆ ಪರ್ಯಾಯವಾಗಿ ಮಚ್ಚೆ ಬಳಿ ಹೆಲಿಪ್ಯಾಡ್‌ಗಳನ್ನು ನಿರ್ಮಿಸಬಹುದು. ಇದು ಕಾರ್ಯಕ್ರಮದ ಸ್ಥಳಕ್ಕೂ ಸಮೀಪದಲ್ಲಿದ್ದು, ವಿಟಿಯು ಅತಿಥಿ ಗೃಹವೂ ಇರುವುದರಿಂದ ಗಣ್ಯರ ಸಂಚಾರಕ್ಕೆ ಅನುಕೂಲವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ರಾಷ್ಟ್ರಪತಿ ಸಂಚಾರ ಮಾರ್ಗದ ಬಗ್ಗೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ರಾಜ್ಯ ಶಿಷ್ಟಾಚಾರ ವಿಭಾಗದಿಂದ ಅಂತಿಮಗೊಳಿಸಲಾಗುವುದು. ಎರಡೂ ಮಾರ್ಗಗಳ ಕುರಿತು ಪ್ರಸ್ತಾವ ಕಳುಹಿಸಬಹುದು’ ಎಂದು ಪ್ರಾದೇಶಿಕ ಆಯುಕ್ತರು ತಿಳಿಸಿದರು.

ರಸ್ತೆ ದುರಸ್ತಿಗೆ ಸೂಚನೆ

‘ವಿಮಾನ ನಿಲ್ದಾಣದಿಂದ ಗಣ್ಯರು ಸಂಚರಿಸಲಿರುವ ಮಾರ್ಗವನ್ನು ತಕ್ಷಣ ದುರಸ್ತಿಗೊಳಿಸಬೇಕು. ಹಂಪ್ಸ್‌ಗಳನ್ನೂ ತೆರವುಗೊಳಿಸಬೇಕು. ಪಾಲಿಕೆ, ಲೋಕೋಪಯೋಗಿ ಇಲಾಖೆ, ಕೆ–ಶಿಪ್, ರಾಷ್ಟ್ರೀಯ ಹೆದ್ದಾರಿ... ಹೀಗೆ ವಿವಿಧ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಸ್ತೆಯನ್ನು ತಕ್ಷಣವೇ ದುರಸ್ತಿಗೊಳಿಸಬೇಕು’ ಎಂದು ಸೂಚಿಸಿದರು.

‘ವೇದಿಕೆಯ ವ್ಯವಸ್ಥೆಯನ್ನು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು, ವಿದ್ಯುತ್‌ ಹಾಗೂ ಪರ್ಯಾಯ ವ್ಯವಸ್ಥೆ ಸಮರ್ಪಕವಾಗಿರುವ ಬಗ್ಗೆ ಹೆಸ್ಕಾಂ ಅಧಿಕಾರಿಗಳು ಪರಿಶೀಲಿಸಬೇಕು. ಬಿಎಸ್‌ಎನ್‌ಎಲ್ ವತಿಯಿಂದ ಹಾಟ್‌ಲೈನ್ ವ್ಯವಸ್ಥೆ, ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸಬೇಕು. ವಿಮಾನ ನಿಲ್ದಾಣ, ಕಾರ್ಯಕ್ರಮ ಸ್ಥಳದಲ್ಲಿ ತುರ್ತು ವೈದ್ಯಕೀಯ ವ್ಯವಸ್ಥೆ, ವೈದ್ಯರ ತಂಡ ನಿಯೋಜಿಸಬೇಕು. ತುರ್ತು ಚಿಕಿತ್ಸೆಗೆ ಆಸ್ಪತ್ರೆ ಗುರುತಿಸಿ ಅಲ್ಲಿಯೂ ವೈದ್ಯರು ಹಾಗೂ ಅವಶ್ಯ ಸೌಲಭ್ಯ ಕಲ್ಪಿಸಬೇಕು’ ಎಂದು ನಿರ್ದೇಶನ ನೀಡಿದರು.

ತಂಡಗಳ ನಿಯೋಜನೆ

‘ಅನೇಕ ಗಣ್ಯರು ಬರುವುದರಿಂದ, ಆಹಾರ ಸುರಕ್ಷತೆ, ಭದ್ರತೆ ಮತ್ತು ಶಿಷ್ಟಾಚಾರ ಪಾಲನೆಗೆ ಪ್ರತ್ಯೇಕವಾಗಿ ಅಧಿಕಾರಿಗಳ ತಂಡಗಳನ್ನು ನಿಯೋಜಿಸಬೇಕು. ಆಹ್ವಾನಿತರಿಗೆ ನೀಡುವ ಪ್ರತಿ ಆಮಂತ್ರಣ ಪತ್ರಿಕೆಗಳ ಮೇಲೂ ಕ್ರಮ ಸಂಖ್ಯೆಗಳನ್ನು ನಮೂದಿಸಬೇಕು. ಆಮಂತ್ರಿತರ ಪಟ್ಟಿಯನ್ನು ಪೊಲೀಸ್ ಇಲಾಖೆಗೆ ಸಲ್ಲಿಸಬೇಕು’ ಎಂದು ತಿಳಿಸಿದರು.

‘ಪೂರ್ವಭಾವಿ ಸಭೆ ನಡೆಸಿ, ಕಾರ್ಯಕ್ರಮ ಸ್ಥಳ ಪರಿಶೀಲಿಸಲಾಗಿದೆ. ಈ ಕುರಿತು ರಾಜ್ಯ ಶಿಷ್ಟಾಚಾರ ವಿಭಾಗಕ್ಕೆ ವರದಿ ಕಳುಹಿಸಲಾಗುವುದು. ಅಲ್ಲಿಂದ ರಾಷ್ಟ್ರಪತಿ ಕಚೇರಿಗೆ ವರದಿ ಸಲ್ಲಿಸಲಾಗುತ್ತದೆ. ಕಾರ್ಯಕ್ರಮ ಪಟ್ಟಿಯನ್ನು ಆ ಕಚೇರಿಯವರೇ ಅಂತಿಮಗೊಳಿಸುತ್ತಾರೆ’ ಎಂದರು.

‘ಭದ್ರತೆ ಹಾಗೂ ರಸ್ತೆ ಮಾರ್ಗಗಳ ಬಗ್ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸ್ ಆಯುಕ್ತ ಡಿ.ಸಿ. ರಾಜಪ್ಪ ತಿಳಿಸಿದರು.

ಸಾಂಬ್ರಾ ವಿಮಾನನಿಲ್ದಾಣ ನಿರ್ದೇಶಕ ರಾಜೇಶಕುಮಾರ್ ಮೌರ್ಯ, ಗುಪ್ತಚರ ಇಲಾಖೆ ಎಸ್ಪಿ ಚನ್ನಬಸವಣ್ಣ, ಉಪ ವಿಭಾಗಾಧಿಕಾರಿ ಕವಿತಾ ಯೋಗಪ್ಪನವರ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು