ಖಾಸಗಿ ಒಪಿಡಿ 24 ಗಂಟೆ ಬಂದ್

ಭಾನುವಾರ, ಜೂಲೈ 21, 2019
25 °C
ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ

ಖಾಸಗಿ ಒಪಿಡಿ 24 ಗಂಟೆ ಬಂದ್

Published:
Updated:

ಬೆಳಗಾವಿ: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಐಎಂಎ (ಭಾರತೀಯ ವೈದ್ಯಕೀಯ ಸಂಘ) ವತಿಯಿಂದ ದೇಶದಾದ್ಯಂತ ಜೂನ್ 17ರಂದು ಕರೆ ನೀಡಿರುವ ಮುಷ್ಕರಕ್ಕೆ ಇಲ್ಲಿನ ವೈದ್ಯರು ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗದ (ಒಪಿಡಿ) ಸೇವೆಯನ್ನು 24 ಗಂಟೆಗಳ ಕಾಲ ಸ್ಥಗಿತಗೊಳಿಸಲಿದ್ದಾರೆ.

ಜೂನ್‌ 17ರಂದು ಬೆಳಿಗ್ಗೆ 6ರಿಂದ ಜೂನ್ 18ರ ಬೆಳಿಗ್ಗೆ 6ರವರೆಗೆ ನಗರದಲ್ಲಿರುವ ಖಾಸಗಿ ಆಸ್ಪತ್ರೆಗಳ ಒಪಿಡಿ ಹಾಗೂ ಲ್ಯಾಬೊರೇಟರಿಗಳು ಬಂದ್‌ ಆಗಿರಲಿವೆ. ಇದರಿಂದ, ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಮುಷ್ಕರ ಬೆಂಬಲಿಸಲು ಐಎಂಎ ಜಿಲ್ಲಾ ಘಟಕದ ಸಭೆಯಲ್ಲಿ ನಿರ್ಧರಿಸಲಾಗಿದೆ. ತುರ್ತು ಸೇವೆ, ಒಳರೋಗಿ ಹಾಗೂ ಹೆರಿಗೆ ವಿಭಾಗಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದರೆ, ಒಪಿಡಿಯಲ್ಲಿ ಆರೋಗ್ಯ ಸೇವೆ ದೊರೆಯುವುದಿಲ್ಲ.

ಸರ್ಕಾರಿ ಜಿಲ್ಲಾಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಸೇವೆ ಇರುತ್ತದೆ. ಖಾಸಗಿ ವೈದ್ಯರ ಮುಷ್ಕರದಿಂದ ಉಂಟಾಗುವ ವ್ಯತ್ಯಯವನ್ನು ನಿರ್ವಹಿಸಲು ಸರ್ಕಾರಿ ಆಸ್ಪತ್ರೆಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

‘ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ ಹಾಗೂ ವೈದ್ಯಕೀಯ ವಿರೋಧಿ ನೀತಿಗಳನ್ನು ಬದಲಿಸುವಂತೆ ಒತ್ತಾಯಿಸಿ ಐಎಂಎ ಮುಷ್ಕರಕ್ಕೆ ಕರೆ ನೀಡಿದೆ. ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ವೈದ್ಯ ಸಾವು–ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ವೈದ್ಯರ ವೃತ್ತಿ ಗೌರವ ಕಾಪಾಡುವ ಉದ್ದೇಶದಿಂದಾಗಿ ಮುಷ್ಕರ ಬೆಂಬಲಿಸುತ್ತಿದ್ದೇವೆ. ಈ ಮೂಲಕ ಸಮಾಜ, ಸರ್ಕಾರದ ಗಮನಸೆಳೆಯುವುದು ನಮ್ಮ ಉದ್ದೇಶವಾಗಿದೆ’ ಎಂದು ಐಎಂಎ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವಿವೇಕ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಳಿಗ್ಗೆ 10ಕ್ಕೆ ಬೋಗಾರ್‌ವೇಸ್‌ನಿಂದ ಬಿಮ್ಸ್‌ ಬಳಿಯ ಐಎಂಎ ಹಾಲ್‌ವರೆಗೆ ಮೌನ ಮೆರವಣಿಗೆ ನಡೆಸಲಾಗುವುದು. ಐಎಂಎ ಸದಸ್ಯರಾದ 300ಕ್ಕೂ ಹೆಚ್ಚಿನ ಖಾಸಗಿ ಆಸ್ಪತ್ರೆಗಳ ವೈದ್ಯರು ಭಾಗವಹಿಸಲಿದ್ದಾರೆ. ದೊಡ್ಡ ಆಸ್ಪತ್ರೆಯಾದ ಕೆಎಲ್‌ಇಯವರೂ ಪಾಲ್ಗೊಳ್ಳುವರು. ಮಹಾವೀರ ರಕ್ತ ಭಂಡಾರದ ಸಹಯೋಗದಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30ರವರೆಗೆ ರಕ್ತದಾನ ಶಿಬಿರ ನಡೆಸಲಾಗುವುದು. ವೈದ್ಯರು ಸ್ವಯಂಪ್ರೇರಿತವಾಗಿ ರಕ್ತ ದಾನ ಮಾಡುವರು’ ಎಂದು ಮಾಹಿತಿ ನೀಡಿದರು.

‘ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಲಭ್ಯವಿರುತ್ತದೆ. ಇದಕ್ಕಾಗಿ ಹೆಚ್ಚುವರಿ ಔಷಧಿಗಳ ವ್ಯವವ್ಥೆ ಮಾಡಿಕೊಳ್ಳಲಾಗಿದೆ. ವೈದ್ಯರಿಗೆ ರಜೆ ತೆಗೆದುಕೊಳ್ಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ವೈದ್ಯರಿಗೆ ಸೂಚಿಸಲಾಗಿದೆ’ ಎಂದು ಡಿಎಚ್‌ಒ ಡಾ.ಅಪ್ಪಾಸಾಹೇಬ ನರಟ್ಟಿ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !