ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2021 ಹಿನ್ನೋಟ: ಸಂಕಷ್ಟ, ರಾಜಕೀಯ ಚಟುವಟಿಕೆ, ಚುನಾವಣೆಗಳಿಗೆ ಸಾಕ್ಷಿ

Last Updated 28 ಡಿಸೆಂಬರ್ 2021, 6:50 IST
ಅಕ್ಷರ ಗಾತ್ರ

ಬೆಳಗಾವಿ: ಆರಂಭದಲ್ಲಿ ಕೋವಿಡ್ ನೋವು. ಮಧ್ಯಂತರದಿಂದ ನೆರೆ-ಅತಿವೃಷ್ಟಿ ಹಾವಳಿಯಿಂದ ಬೆಳೆ, ಮನೆಗಳಿಗೆ ಹಾನಿಯಿಂದ ಸಂಕಷ್ಟ. ನಡುವೆ ಅಕಾಲಿಕ ಮಳೆ ತಂದೊಡ್ಡಿದ ನಷ್ಟದ ಹೊಡೆತ. ಕೊನೆಯಲ್ಲಿ ವಿವಿಧ ಚುನಾವಣೆಗಳು-ವಿಧಾನಮಂಡಲ ಅಧಿವೇಶನ ರಂಗು. ಕಲ್ಲುತೂರಾಟದ ಕಪ್ಪು ಚುಕ್ಕೆ. ಅನಗೋಳದ ಕನಕದಾಸ ಕಾಲೊನಿಯಲ್ಲಿ ಕಿಡಿಗೇಡಿಗಳಿಂದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಮೂರ್ತಿ ಭಗ್ನದಿಂದ ಕಾನೂನು–ಸುವ್ಯವಸ್ಥೆಗೆ ಧಕ್ಕೆ.

- ಜಿಲ್ಲೆಯಲ್ಲಿನ 2021ರ ಹಿನ್ನೋಟವನ್ನು ಪ್ರಮುಖಾಂಶಗಳಲ್ಲಿ ಮೇಲಿನಂತೆ ಹಿಡಿದಿಡಬಹುದು.

ಕೆಲವು ಸಂಭ್ರಮದ ಕ್ಷಣಗಳಿಗೂ ಜಿಲ್ಲೆ ಸಾಕ್ಷಿಯಾಗಿದೆ. ರಾಜಕೀಯ ಚಟುವಟಿಕೆಗಳು, ಸಾವು-ನೋವು, ದುರಂತಗಳೂ ನಡೆದಿವೆ.

ವರ್ಷಾರಂಭದ ಕೆಲವು ತಿಂಗಳು ಕೋವಿಡ್ ಭೀತಿಯು ಹೆಚ್ಚಾಗಿಯೇ ಕಾಡಿತು. 50ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿತರಾದರು. 606 ಮಂದಿ ಚಿಕಿತ್ಸೆಗೆ ಸ್ಪಂದಿಸಿದೆ ಮೃತರಾದರು. 50ಸಾವಿರ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. ಏರುಗತಿಯಲ್ಲಿದ್ದ ಸೋಂಕಿತರ ಸಂಖ್ಯೆ ಕ್ರಮೇಣ ಇಳಿಮುಖವಾಯಿತು.

ಜ.8ರಂದು ಕೋವಿಡ್ ಲಸಿಕೆಯ ಅಣಕು ಕಾರ್ಯಾಚರಣೆ (ಡ್ರೈರನ್‌) ನಡೆಯಿತು. ಬಳಿಕ ಕೋವಿಡ್ ಲಸಿಕೆಯ ರಕ್ಷಾಕವಚವೂ ಜನರಿಗೆ ಸಿಕ್ಕಿತು. ಕೋವ್ಯಾಕ್ಸಿನ್‌ ಲಸಿಕೆಯ ಕ್ಲಿನಿಕಲ್ ಟ್ರಯಲ್ ನಡೆಸಿದ್ದ ಜೀವನ್‌ ರೇಖಾ ಆಸ್ಪತ್ರೆಯು ‘ಜೈಡಸ್ ಕ್ಯಾಡಿಲಾ ಕಂಪನಿ ಅಭಿವೃದ್ಧಿಪಸಿದ ಕೋವಿಡ್‌ ಲಸಿಕೆ ‘ಝೈಕೋವ್‌–ಡಿ’ 3ನೇ ಹಂತದ ಕ್ಲಿನಿಕಲ್ ಟ್ರಯಲ್‌ ಕೂಡ (12ರಿಂದ 18 ವರ್ಷದವರ ಮೇಲೆ) ನಡೆಯಿತು. ಬಿಮ್ಸ್ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯಗಳು ಸುಧಾರಿಸಿದವು. ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು–ಉಪಾಧ್ಯಕ್ಷರ ಚುನಾವಣೆ ಜರುಗಿತು.

ಜ.13ರಂದು ಹುಕ್ಕೇರಿ ಶಾಸಕ ಉಮೇಶ ಕತ್ತಿ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನಮಾನ ಸಿಗುವುದರೊಂದಿಗೆ, ಅಧಿಕಾರದ ‘ಸುಗ್ಗಿ’ ಬಂತು. ಸಚಿವ ಸಂಪುಟದಲ್ಲಿ ಇಲ್ಲಿನ ಸದಸ್ಯರ ಸಂಖ್ಯೆ ಐದಕ್ಕೇರಿತ್ತು. ‘ಪವರ್ ಸೆಂಟರ್’ ಆಗಿಯೂ ಹೊರಹೊಮ್ಮಿತ್ತು. ಇದು ಬಹಳ ದಿನಗಳವರೆಗೆ ಇರಲಿಲ್ಲ. ಯುವತಿಗೆ ವಂಚಿಸಿದ ಆರೋಪದ ಪ್ರಕರಣದಲ್ಲಿ ರಮೇಶ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸಂಪುಟ ಪುನರ್‌ರಚನೆ ವೇಳೆ ಲಕ್ಷ್ಮಣ ಸವದಿ ಹಾಗೂ ಶ್ರೀಮಂತ ಪಾಟೀಲ ಅವರನ್ನು ಕೈಬಿಡಲಾಯಿತು.

ಜ.17ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಬಿಜೆಪಿಯಿಂದ ‘ಜನಸೇವಕ ಸಮಾವೇಶ’ದ ಸಮಾರೋಪ ನಡೆಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆ, ಆ ಪಕ್ಷದ ನಾಯಕರ ದಂಡೇ ನೆರೆದಿತ್ತು. ಸಾವಿರಾರು ಮಂದಿ ಭಾಗವಹಿಸಿದ್ದರಿಂದ ಕೋವಿಡ್ ನಿಯಮಾವಳಿ ಉಲ್ಲಂಘಿಸಲಾಯಿತು ಎಂಬ ಆರೋಪವೂ ಕೇಳಿಬಂತು. ಅದೇ ದಿನ ಶಾ, ಕೆಎಲ್ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯಿಂದ ಜೆಎನ್‌ಎಂಸಿಯಲ್ಲಿ ಸ್ಥಾಪಿಸಿರುವ ‘ಸುಧಾರಿತ ಸಿಮ್ಯುಲೇಷನ್ ಕೇಂದ್ರ ಮತ್ತು ಕ್ಲಿನಿಕಲ್ ಕೌಶಲ ಪ್ರಯೋಗಾಲಯ’ ಉದ್ಘಾಟಿಸಿದರು. ದಿವಂಗತ ಸುರೇಶ ಅಂಗಡಿ, ಬಿಜೆಪಿ ಮುಖಂಡರಾದ ರಾಜು ಚಿಕ್ಕನಗೌಡರ ಹಾಗೂ ರವಿ ಹಿರೇಮಠ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.

ಜ.31ರಂದು ಗಡಿ ಕಾಗವಾಡದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅಧ್ಯಕ್ಷತೆಯಲ್ಲಿ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಭ್ರಮದಿಂದ ನಡೆಯಿತು.

ಲಿಂಗಾಯತ ಮಹಿಳಾ ಸಮಾಜವು ರಜತ ಮಹೋತ್ಸವವನ್ನು ಫೆ.15ರಂದು ಆಚರಿಸಿಕೊಂಡಿತು.

ಮಾರ್ಚ್‌ 10ರಂದು ‘ಬಂಡಾಯ ಸಾಹಿತ್ಯ ಸಂಘಟನೆ–ಕರ್ನಾಟಕ’ 40ನೇ ವರ್ಷಾಚರಣೆ ಅಂಗವಾಗಿ ನಡೆದ ಸೈದ್ಧಾಂತಿಕ ಅನುಸಂಧಾನ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಕಾದಂಬರಿಕಾರ ಕುಂ.ವೀರಭದ್ರ‍ಪ್ಪ ಹಾಗೂ ಚಿಂತಕ ಬರಗೂರು ರಾಮಚಂದ್ರಪ್ಪ ಪಾಲ್ಗೊಂಡರು.

ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ರಚನೆಯಾಗಿದ್ದ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ನೀರಾವರಿ ಇಲಾಖೆಗಳ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ಗಳ ತ್ರಿಸದಸ್ಯ ಜಂಟಿ ಪರಿಶೀಲನಾ ಸಮಿತಿಯು ಖಾನಾಪುರ ತಾಲ್ಲೂಕಿನ ಕಣಕುಂಬಿಯಲ್ಲಿರುವ ಕಳಸಾ ಬಂಡೂರಿ ಯೋಜನಾ ಪ್ರದೇಶಕ್ಕೆ 2ನೇ ಬಾರಿಗೆ ಅಂದರೆ ಮಾರ್ಚ್‌ 26ರಂದು ಭೇಟಿ ನೀಡಿತು.

‘ಕರ್ನಾಟಕವು ಈಗಾಗಲೇ ಮಹದಾಯಿ ನೀರು ತಿರುಗಿಸಿಕೊಂಡಿದೆ’ ಎಂಬ ಗೋವಾದ ಆರೋಪದ ಹಿನ್ನೆಲೆಯಲ್ಲಿ ಜಂಟಿ ಪರಿಶೀಲನೆಗೆ ನ್ಯಾಯಾಲಯ ಸೂಚಿಸಿತ್ತು. ಮಾರ್ಚ್‌ 19ರಂದು ಸಮಿತಿಯು ಮೊದಲ ಬಾರಿಗೆ ಭೇಟಿ ನೀಡಿತ್ತು. ಆದರೆ, ಒಮ್ಮತದ ನಿರ್ಧಾರಕ್ಕೆ ಬರಲಾಗಿರಲಿಲ್ಲ. ಗೋವಾದ ಅಧಿಕಾರಿಗಳು ಕರ್ನಾಟಕ ಪೊಲೀಸರು ಮತ್ತು ನೀರಾವರಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ ವಾಪಸ್ ಹೋಗಿದ್ದರು.

ಮೂರು ಕೃಷಿ ಕಾಯ್ದೆಗಳ ವಿರುದ್ಧ ಇಲ್ಲಿ ನಡೆದಿದ್ದ ‘ರೈತ ಮಹಾಪಂಚಾಯತ್’ನಲ್ಲಿ ಕೃಷಿಕರು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದರು. ಅಖಿಲ‌ ಭಾರತ ಸಂಯುಕ್ತ ಕಿಸಾನ್ ಮೋರ್ಚಾದಿಂದ ಮಾರ್ಚ್‌ 31ರಂದು ಸಿಪಿಇಡಿ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಮಹಾಪಂಚಾಯತ್‌ನಲ್ಲಿ ಕರಾಳ ಕೃಷಿ ಕಾಯ್ದೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರವು ರೈತರ ಹೋರಾಟಕ್ಕೆ ಮಂಡಿಯೂರಿ, ಕಾಯ್ದೆ ವಾಪಸ್‌ ಪಡೆದಾಗ ರೈತರು ಸಂಭ್ರಮವನ್ನೂ ಆಚರಿಸಿದರು.

ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ (ಏ.17ರಂದು ಮತದಾನ) ರಾಜ್ಯದ ಗಮನಸೆಳೆಯಿತು. ಅಂಗಡಿ ಅವರ ಪತ್ನಿ ಮಂಗಲಾ ಸುರೇಶ ಅಂಗಡಿ ಆಯ್ಕೆಯಾದರೆ, ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ಸೋತರು.

ರೈತ ಹೋರಾಟಗಾರ ಹಾಗೂ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ (78) ಮೇ 22ರಂದು ಮತ್ತು ರೈತ ನಾಯಕ ಕಲ್ಯಾಣರಾವ ಮುಚಳಂಬಿ ಅ.6ರಂದು ಅನಾರೋಗ್ಯದಿಂದ ನಿಧನರಾದರು.

ಮೇ ಕೊನೆ ವಾರದಲ್ಲಿ ಬೆಳಕಿಗೆ ಬಂದ, ಯಮಕನಮರಡಿ ಪೊಲೀಸ್ ಠಾಣೆ ಆವರಣದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿದ್ದ ₹ 2.50 ಕೋಟಿ ಮೌಲ್ಯದ 4 ಕೆ.ಜಿ. 900 ಗ್ರಾಂ ಚಿನ್ನ ಕಳವು ಪ್ರಕರಣ ರಾಜ್ಯದಾದ್ಯಂತ ಸದ್ದು ಮಾಡಿತು. ನಾಲ್ವರು ಪೊಲೀಸ್ ಅಧಿಕಾರಿಗಳಿಗೆ ಸಿಐಡಿ ನೋಟಿಸ್ ಜಾರಿಗೊಳಿಸಿತ್ತು.

ಜುಲೈ 3ನೇ ವಾರದಲ್ಲಿ ಪ್ರವಾಹ ಮತ್ತು ಅತಿವೃಷ್ಟಿ ಉಂಟಾಗಿತ್ತು. ಜಿಲ್ಲಾಡಳಿತದ ಮಾಹಿತಿ ಪ್ರಕಾರ ₹ 2,800 ಕೋಟಿ ಹಾನಿ ಸಂಭವಿಸಿತು. 14 ತಾಲ್ಲೂಕುಗಳ 201 ಗ್ರಾಮಗಳು ಪ್ರವಾಹಕ್ಕೆ ತುತ್ತಾದವು. ನೆರೆಯಲ್ಲಿ ಸಿಲುಕಿದ್ದ 1,50,015 ಜನರನ್ನು ಹಾಗೂ 67,329 ಜಾನುವಾರನ್ನು ರಕ್ಷಿಸಲಾಯಿತು. 1,19,422 ಹೆಕ್ಟೇರ್ ಕೃಷಿ ಹಾಗೂ ತೋಟಗಾರಿಕಾ ಪ್ರದೇಶದಲ್ಲಿ ಬೆಳೆ ಹಾನಿಗೊಳಗಾಯಿತು. 324 ಮನೆಗಳು ಪೂರ್ಣ ಹಾಗೂ 5,003 ಭಾಗಶಃ ಹಾನಿಗೊಳಗಾದವು. ಅಂದರೆ ಸೆ.5ರಂದು ಕೇಂದ್ರದ ಅಧಿಕಾರಿಗಳ ತಂಡ ಹಾನಿಯ ಅಧ್ಯಯನ ಪ್ರವಾಸ ಕೈಗೊಂಡಿತು.

ಆ.22: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಸಿಬಿಐನಿಂದ ಬಂಧಿತರಾಗಿ ಕೇಂದ್ರ ಕಾರಾಗೃಹದಲ್ಲಿದ್ದ ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಜಾಮೀನಿನ ಮೇಲೆ ಬಿಡುಗಡೆಯಾದರು.

ಸೆ.3: ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ ನಡೆಯಿತು. ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಪಕ್ಷದ ಚಿಹ್ನೆಯಡಿ ಇದೇ ಮೊದಲಿಗೆ ಸ್ಪರ್ಧಿಸಿದ್ದು ವಿಶೇಷ. ಬಿಜೆಪಿ-35, ಕಾಂಗ್ರೆಸ್-10, ಎಐಎಂಐಎಂ-1 ಹಾಗೂ ಪಕ್ಷೇತರರು-12 ಸ್ಥಾನಗಳನ್ನು ಗಳಿಸಿದರು. ಬಿಜೆಪಿ ಬಹುಮತ ಗಳಿಸಿತು.

ಸೆ.26: ಸಾಂವಗಾಂವ ರಸ್ತೆಯ ಸುರೇಶ ಅಂಗಡಿ ಶಿಕ್ಷಣ ಪ್ರತಿಷ್ಠಾನದ ಆವರಣದಲ್ಲಿ ದಿ.ಸುರೇಶ ಅಂಗಡಿ ಪುತ್ಥಳಿಯನ್ನು ಮುಖ್ಯಮಂತ್ರಿ ಅನಾವರಣಗೊಳಿಸಿದರು. ಅಂದೇ ಇ–ಲೈಬ್ರರಿ ಹಾಗೂ ವಿಶೇಷ ಮಕ್ಕಳ ಉದ್ಯಾನವನ್ನೂ ಉದ್ಘಾಟಿಸಿದರು.

ಅ.2: ಬೆಳಗಾವಿಯ ಸಂಗೊಳ್ಳಿರಾಯಣ್ಣ ವೃತ್ತದ ಬಳಿ ನಿರ್ಮಿಸಿರುವ ಕಾಂಗ್ರೆಸ್‌ ಭವನ ಉದ್ಘಾಟನೆ.

ಕುಟುಂಬವೊಂದು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬೋರಗಲ್ಲ ಗ್ರಾಮದಲ್ಲಿ ಅ.23ರಂದು ನಡೆಯಿತು. ನಿವೃತ್ತ ಸೈನಿಕ ಮಕ್ಕಳಿಗೆ ವಿಷ ನೀಡಿ ತಾನೂ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು.

ಅ.23–24: ಕಿತ್ತೂರು ಉತ್ಸವ ನಡೆಯಿತು. ಮುಂಬೈ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡುವುದಾಗಿ ಘೋಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಳಿಕ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯುವಲ್ಲೂ ಯಶಸ್ವಿಯಾದರು.

ನ.1: ಅಥಣಿಯ ಸಾಮಾಜಿಕ ಕಾರ್ಯಕರ್ತ ಬಿ.ಎಲ್. ಪಾಟೀಲ 2020–21ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ‍ಪ್ರಶಸ್ತಿಗೆ ಭಾಜನರಾದರು. ಕನ್ನಡ ಹೋರಾಟಗಾರ ಅಶೋಕ ಚಂದರಗಿ ಸರ್ಕಾರದ ಸನ್ಮಾನಕ್ಕೆ ಪಾತ್ರವಾದರು.

ನ.1: ಖ್ಯಾತ ಸಾಹಿತಿ ಹಾಗೂ ಜಾನಪದ ತಜ್ಞ ರಾಯಬಾಗದ ಪ್ರೊ.ಜ್ಯೋತಿ (ಜೋತೆಪ್ಪ) ಹೊಸೂರ (84) ಹೃದಯಾಘಾತದಿಂದ ನಿಧನರಾದರು.

ನವೆಂಬರ್‌ನಲ್ಲಿ ವಾಡಿಕೆಗಿಂತ ಶೇ 230ರಷ್ಟು ಹೆಚ್ಚಿನ ಮಳೆ ಬಿದ್ದಿತು. 5,367 ಹೆಕ್ಟೇರ್‌ ಭತ್ತ ಮೊದಲಾದ ಬೆಳೆಗಳಿಗೆ ಹಾನಿಯಾಯಿತು. ಇಬ್ಬರು ಸಾವಿಗೀಡಾದರು. 3,200 ಹೆಕ್ಟೇರ್‌ ದ್ರಾಕ್ಷಿ ಹಾಳಾಗಿ, 4,688 ಮಂದಿ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ.

ನ.11: ತಾಲ್ಲೂಕಿನ ಹಲಗಾ-ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿಗೆ ಕೃಷಿ ಜಮೀನು ಸ್ವಾಧೀನಪಡಿಸಿಕೊಂಡಿದ್ದು ವಿರೋಧಿಸಿ, ಮಚ್ಚೆ ರೈತರು ಭಾರಿ ಪ್ರತಿಭಟನೆ ನಡೆಸಿದರು. ರೈತ ಅನಿಲ ಅನಗೋಳಕರ ಪುತ್ರ ಪ್ರಕಾಶ ಅನಗೋಳಕರ ಮೈಮೇಲೆ ಪೆಟ್ರೋಲ್‌ ಸುರಿದುಕೊಂಡು ಬೆಂಕಿಗೆ ಆಹುತಿ ಮಾಡಿಕೊಳ್ಳಲು ಯತ್ನಿಸಿದರು.

ಡಿ.8: ಬೆಳಗಾವಿಯ ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದ ಬಳಿ ಪ್ರತಿಷ್ಠಾಪಿಸಿರುವ ಲಿಂ.ಶಿವಬಸವ ಸ್ವಾಮೀಜಿ ಪ್ರತಿಮೆ ಹಾಗೂ ಶಿಲಾಮಂಟಪವನ್ನು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.

ಡಿ.10ರಂದು ನಡೆದ ವಿಧಾನಪರಿಷತ್‌ ಚುನಾವಣೆಯಲ್ಲಿ (ದ್ವಿಸದಸ್ಯ ಕ್ಷೇತ್ರ) ಹೊಸಮುಖಗಳಿಗೆ ಮತದಾರರು ಮಣೆ ಹಾಕಿದರು. ಕಾಂಗ್ರೆಸ್‌ನ ಚನ್ನರಾಜ ಹಟ್ಟಿಹೊಳಿ ಹಾಗೂ ಪಕ್ಷೇತರ ಲಖನ್‌ ಜಾರಕಿಹೊಳಿ ಆಯ್ಕೆಯಾದರು. ಬಿಜೆಪಿಯ ಮಹಾಂತೇಶ ಕವಟಗಿಮಠ ಸೋಲುಂಡರು.

ಡಿ.12: ಸಂಯುಕ್ತ ಹೋರಾಟ–ಕರ್ನಾಟಕದಿಂದ ವಿಧಾನಮಂಡಲ‌ ಚಳಿಗಾಲದ ಅಧಿವೇಶನಕ್ಕೆ ಪೂರ್ವಭಾವಿಯಾಗಿ ‘ರೈತ ಅಧಿವೇಶನ’ ನಡೆಸಿದ ರೈತರು, 3 ಕೃಷಿ ಕಾಯ್ದೆಗಳನ್ನು ರಾಜ್ಯದಲ್ಲೂ ವಾಪಸ್ ಪಡೆಯುವಂತೆ ಆಗ್ರಹಿಸಿದರು.

ಡಿ.13ರಿಂದ 24ರವರೆಗೆ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಯಿತು. ಡಿ.13ರಂದು ಎಂಇಎಸ್‌ನವರು ಮಹಾಮೇಳಾವ ಆಯೋಜಿಸಿದ್ದ ವೇಳೆ ಆ ಸಂಘಟನೆಯ ಅಧ್ಯಕ್ಷ ದೀಪಕ ದಳವಿ ಅವರಿಗೆ ಕನ್ನಡ ಹೋರಾಟಗಾರರು ಮಸಿ ಬಳಿದರು.

ಡಿ.15: ಹಲವು ಜನಪರ ಚಳವಳಿಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ನೇಮಿಚಂದ್ರ (27) ಅನಾರೋಗ್ಯದಿಂದ ನಿಧನರಾದರು.

ಡಿ.17ರ ತಡರಾತ್ರಿ ನಗರದ ವಿವಿಧೆಡೆ ಕಲ್ಲುತೂರಾಟ, 18ರಂದು ನಸುಕಿನಲ್ಲಿ ಅನಗೋಳದಲ್ಲಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿದ್ದರಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಘಟನೆಗೆ ಸಂಬಂಧಿಸಿದಂತೆ 38 ಮಂದಿ ಬಂಧಿಸಲಾಗಿದೆ. ಎಂಇಎಸ್ ನಿಷೇಧಿಸುವಂತೆ ಕೂಗು ಕೇಳಿಬಂದಿದೆ.

ಡಿ.20ರಂದು ಖಾನಾಪುರ ತಾಲ್ಲೂಕಿನ ಹಲಸಿಯಲ್ಲಿ ಕಿಡಿಗೇಡಿಗಳು ಕನ್ನಡ ಬಾವುಟ ಸುಟ್ಟ ಮತ್ತು ಜಗಜ್ಯೋತಿ ಬಸವೇಶ್ವರರ ಚಿತ್ರಕ್ಕೆ ಸೆಗಣಿ ಮೆತ್ತಿದ್ದರು. ಮೂವರು ಆರೋಪಿಗಳನ್ನು ಬಂಧಸಲಾಗಿದೆ.

ಡಿ.21: ಚನ್ನಮ್ಮನ ಕಿತ್ತೂರು ತಾಲ್ಲೂಕಿನ ದಾಸ್ತಿಕೊಪ್ಪ ಗ್ರಾಮದಲ್ಲಿ ಬಾಯವ್ವ ಸಿದ್ರಾಮನಿ ಅವರ ಮನೆಗೆ ಸಾಂಕೇತಿಕವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿ ‘ಬೆಳಕು’ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಡಿ.22: ಹಿರೇಬಾಗೇವಾಡಿಯ ಮಲ್ಲಪ್ಪನಗುಡ್ಡದಲ್ಲಿ ಆರ್‌ಸಿಯು ಕ್ಯಾಂಪಸ್‌ ನಿರ್ಮಾಣಕ್ಕೆ ಮುಖ್ಯಮಂತ್ರಿಯಿಂದ ಭೂಮಿಪೂಜೆ.

ಡಿ.23: ಸರ್ಕಾರ ಜಾರಿಗೊಳಿಸಿರುವ ‘ಸರ್ವರಿಗೂ ಉದ್ಯೋಗ’ ಕಾರ್ಯಕ್ರಮಕ್ಕೆ ಚಾಲನೆ.

ಡಿ.27: ವಿವಿಧ ಪಟ್ಟಣ ಪಂಚಾಯ್ತಿ ಹಾಗೂ ಪುರಸಭೆಗಳಿಗೆ ಚುನಾವಣೆ.

ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ರಚನೆಗೆ ಒತ್ತಾಯಿಸಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯವರು ಅಲ್ಲಿನ ಮಿನಿ ವಿಧಾನಸೌಧದ ಎದುರು ಧರಣಿ ಸತ್ಯಾಗ್ರಹ ನಡೆಸಿದರು.

ಹಲವು ವರ್ಷಗಳಿಂದ ವಿವಿಧ ಸಸ್ಯಗಳ ತಳಿ ಸಂರಕ್ಷಣೆ ಮತ್ತು ಸಂವರ್ಧನೆಯಲ್ಲಿ ತೊಡಗಿಸಿಕೊಂಡಿರುವ ಚಿಕ್ಕೋಡಿ ತಾಲ್ಲೂಕಿನ ಪೋಗತ್ಯಾನಟ್ಟಿಯ ಪ್ರಗತಿಪರ ರೈತ ಶಿವಗೌಡ ಪಾಟೀಲ ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾದರು.

ಜಿಲ್ಲೆಯಾದ್ಯಂತ ಗಣೇಶೋತ್ಸವ ಸಂಭ್ರಮದಿಂದ ನೆರವೇರಿತು. ಚಿತ್ರನಟ ಪುನೀತ್ ರಾಜ್‌ಕುಮಾರ್‌ ನಿಧನ ಹಿನ್ನೆಲೆಯಲ್ಲಿ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT