ನೇಕಾರರಿಂದ ಸೀರೆ, ಬಟ್ಟೆ ಖರೀದಿಗೆ ಆಗ್ರಹ

7
ಬೇಡಿಕೆ ಈಡೇರಿಕೆಗೆ ಸ್ಪಂದಿಸದಿದ್ದರೆ ಹೋರಾಟದ ಎಚ್ಚರಿಕೆ

ನೇಕಾರರಿಂದ ಸೀರೆ, ಬಟ್ಟೆ ಖರೀದಿಗೆ ಆಗ್ರಹ

Published:
Updated:

ಬೆಳಗಾವಿ: ‘ತಮಿಳುನಾಡು, ಅಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದಲ್ಲೂ ಸರ್ಕಾರದ ವಿವಿಧ ಇಲಾಖೆಗಳಿಗೆ ಬೇಕಾಗುವ ಸೀರೆಗಳು ಮತ್ತು ಬಟ್ಟೆಗಳನ್ನು ನೇಕಾರದಿಂದಲೇ ಖರೀದಿಸಬೇಕು’ ಎಂದು ಜಿಲ್ಲಾ ನೇಕಾರರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಗಜಾನನ ಗುಂಜೇರಿ ಇಲ್ಲಿ ಒತ್ತಾಯಿಸಿದರು.

‘ಇದರಿಂದ, ಸಮುದಾಯದವರಿಗೆ ವರ್ಷಪೂರ್ತಿ ಕೆಲಸ ಹಾಗೂ ಮಾರುಕಟ್ಟೆ ಸಿಕ್ಕಂತಾಗುತ್ತದೆ. ಆಗ, ಸಾಲ ಮನ್ನಾ ಮಾಡದಿದ್ದರೂ ನಾವು ಕೇಳುವುದಿಲ್ಲ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಜಿಲ್ಲೆಯಲ್ಲಿ 4,594 ಕೈಮಗ್ಗಗಳು ಹಾಗೂ 27,091 ವಿದ್ಯುತ್‌ ಮಗ್ಗಗಳು ಕಾರ್ಯನಿರ್ವಹಿಸುತ್ತಿವೆ. 142 ಕೈಮಗ್ಗ ಸಹಕಾರ ಸಂಘಗಳು ಹಾಗೂ 93 ವಿದ್ಯುತ್‌ ಸಹಕಾರ ಸಂಘಗಳಿವೆ. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ 12 ಉಪ ಕೇಂದ್ರಗಳಿವೆ. ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಮಗ್ಗಗಳಿಂದ ತಯಾರಿಸಿದ ಸೀರೆ, ಬಟ್ಟೆ ವ್ಯವಹಾರದಿಂದ ₹ 35 ಕೋಟಿಗೂ ಹೆಚ್ಚು ಜಿಎಸ್‌ಟಿಯನ್ನು ಸರ್ಕಾರಕ್ಕೆ ಕಟ್ಟಲಾಗಿದೆ. ಇದೇ ರೀತಿ ಬೇರೆ ಜಿಲ್ಲೆಗಳಿಂದಲೂ ಅಪಾರ ಪ್ರಮಾಣದ ತೆರಿಗೆ ಸಂಗ್ರಹವಾಗುತ್ತಿದೆ. ಈ ತೆರಿಗೆ ಹಣದಲ್ಲಿ ಶೇ 2ರಷ್ಟನ್ನಾದರೂ ಬಳಸಿ ನೇಕಾರರಿಗೆ ಅನುಕೂಲವಾಗುವ ಯೋಜನೆಗಳನ್ನು ರೂಪಿಸಿ ನೆರವಾಗಬೇಕು. 2019ರಿಂದ 2023ರ ಹೊಸ ಜವಳಿ ನೀತಿಯಲ್ಲಿ ಜಿಲ್ಲೆಗೆ ಹೆಚ್ಚಿನ ಅನುದಾನ ನಿಗದಿಪಡಿಸಬೇಕು’ ಎಂದು ಆಗ್ರಹಿಸಿದರು.

ಸಾಲ ಮನ್ನಾ ಆಗಲಿಲ್ಲ: ‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಘೋಷಿಸಲಾದ ನೇಕಾರರ ಸಾಲ ಮನ್ನಾ ಯೋಜನೆ ಗಗನಕುಸುಮವಾಗಿದೆ. ₹ 50 ಕೋಟಿ ಮೀಸಲಿಡಲಾಗಿತ್ತು. ಆದರೆ, ಅಧಿಕಾರಿಗಳು ಅನವಶ್ಯ ನೀತಿ–ನಿಯಮಗಳ ಮೂಲಕ ನಮಗೆ ಸೌಲಭ್ಯ ತಲುಪದಂತೆ ನೋಡಿಕೊಳ್ಳುತ್ತಿದ್ದಾರೆ. ಪರಿಣಾಮ, ಘೋಷಣೆಯಾಗಿ 18 ತಿಂಗಳಾದರೂ ಅನುಷ್ಠಾನಗೊಂಡಿಲ್ಲ. ಅದೇ ರೀತಿ ಶೇ 1 ಹಾಗೂ ಶೇ 3ರ ಬಡ್ಡಿ ದರದ ಸಹಾಯ ಯೋಜನೆಯಿಂದಲೂ ನಮಗೆ ಪ್ರಯೋಜನವಾಗುತ್ತಿಲ್ಲ’ ಎಂದು ದೂರಿದರು.

‘ಪಾಲಿಕೆ ವ್ಯಾಪ್ತಿಯಲ್ಲಿ ವಡಗಾವಿ, ಭಾರತನಗರ, ಶಹಾಪುರ, ಖಾಸಬಾರ ಮೊದಲಾದ ಕಡೆಗಳಲ್ಲಿ 30ಸಾವಿರ ಮಂದಿ ನೇಕಾರಿಕೆ ಅವಲಂಬಿಸಿದ್ದಾರೆ. ಕುಲಕಸುಬು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದೇವೆ. ಆದರೆ, ಪಾಲಿಕೆಯವರು ವಾಣಿಜ್ಯ ತೆರಿಗೆ ವಿಧಿಸಿ ಸಾವಿರಾರು ರೂಪಾಯಿ ದಂಡ ವಸೂಲಿ ಮಾಡುತ್ತಿದ್ದಾರೆ. ಸರ್ಕಾರವು ವಿನಾಯಿತಿ ನೀಡಿದ್ದರೂ, ಅಧಿಕಾರಿಗಳು ನಮ್ಮ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಈ ಶೋಷಣೆಯನ್ನು ಕೂಡಲೇ ನಿಲ್ಲಿಸಬೇಕು’ ಎಂದು ಕೋರಿದರು.

ಅನುದಾನ ಒದಗಿಸಿ: ‘ಕೈಮಗ್ಗ ಅಭಿವೃದ್ಧಿ ನಿಗಮ, ವಿದ್ಯುತ್‌ ಚಾಲಿತ ಮಗ್ಗಗಳ ನಿಗಮ, ಕಾವೇರಿ ಹ್ಯಾಂಡ್‌ಲೂಮ್‌ ನಿಗಮಗಳು ಅನುದಾನದ ಕೊರತೆಯಿಂದಾಗಿ, ನೇಕಾರರಿಗೆ ಯೋಜನೆಗಳನ್ನು ನೀಡುವುದಕ್ಕೆ ಸಾಧ್ಯವಾಗಿಲ್ಲ. ಸರ್ಕಾರವು ಈ ನಿಗಮಗಳಿಗೆ ಹೆಚ್ಚಿನ ಅನುದಾನ ಒದಗಿಸಬೇಕು’ ಎಂದು ಒತ್ತಾಯಿಸಿದರು.

‘ನಗರದಲ್ಲಿ ಆಧುನಿಕ ಮಗ್ಗಗಳ ತರಬೇತಿ ಕೇಂದ್ರ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಬೇಕು. ಜವಳಿ ಪಾರ್ಕ್‌ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. ಬೇಡಿಕೆ ಈಡೇರಿಕೆಗೆ ನಿರ್ಲಕ್ಷ್ಯ ವಹಿಸಿದರೆ, ಸರ್ಕಾರದ ವಿರುದ್ಧ ರಾಜ್ಯದಾದ್ಯಂತ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಸುರೇಶ ಕಿತ್ತೂರ, ಸಂತೋಷ ಅತ್ತಿಮರದ, ರಾಮಕೃಷ್ಣ ಕಾಂಬಳೆ, ಗ್ಯಾನಪ್ಪ ವಾಗೂಗಕರ, ನಾಗರಾಜ ಹೂಗಾರ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !