ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಗಡಿಯಲ್ಲಿ ಕನ್ನಡ ಬೆಳಗಿಸಿದ ಸಿದ್ದಣ್ಣ

ಪ್ರೊ.ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ
Last Updated 23 ಜೂನ್ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಗಡಿ ನಾಡಿನಲ್ಲಿ ಐದು ದಶಕಗಳಿಂದ ಕನ್ನಡ ಕಟ್ಟುವ ಮತ್ತು ಬೆಳೆಸುವ ಕಾರ್ಯದಲ್ಲಿ ತೊಡಗಿ ಸಾರಸ್ವತ ಲೋಕದಲ್ಲಿ ‘ಗಡಿನಾಡ ಕನ್ನಡ ಸಿದ್ದಣ್ಣ’ ಎಂದೇ ಹೆಸರಾಗಿರುವ ಪ್ರೊ.ಸಿದ್ದಣ್ಣ ಉತ್ನಾಳ ಅವರಿಗೆ ರಾಜ್ಯ ಸರ್ಕಾರ 2019–20ನೇ ಸಾಲಿನ ‘ಪ್ರೊ.ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ’ ನೀಡಿ ಗೌರವಿಸಿದೆ.

ವಿಜಯಪುರದ ದೇಗಿನಾಳದವರಾದರೂ ಗಡಿ ಅಥಣಿಯನ್ನು ಕರ್ಮಭೂಮಿ ಮಾಡಿಕೊಂಡವರು. ನೂರಾರು ಕಾರ್ಯಕ್ರಮಗಳ ಆಯೋಜನೆ ಹಾಗೂ ಖ್ಯಾತನಾಮರನ್ನು ಆಹ್ವಾನಿಸಿ ಅಲ್ಲಿನ ಕನ್ನಡ ಭಾಷಿಕರಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ಕನ್ನಡದ ಅಭಿಮಾನದ ದೀಪ ಬೆಳಗುತ್ತಿದ್ದಾರೆ.

ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಕನ್ನಡ ಎಂಎ ಸ್ನಾತಕೋತ್ತರ ಪದವಿ ಪಡೆದ ಅವರು, ಅಥಣಿಯ ಕೆಎಲ್ಇ ಮುರುಘೇಂದ್ರ ಶಿವಯೋಗಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ನಿವೃತ್ತರಾಗಿದ್ದಾರೆ. ಬಳಿಕ ಹುಣಸಗಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದರು. 78ರ ಹರೆಯದಲ್ಲೂ ಕನ್ನಡ ಕೈಂಕರ್ಯ ಮುಂದುವರಿಸಿದ್ದಾರೆ. ತಮ್ಮ ಪ್ರಕಾಶನದ ಮೂಲಕ ನಾಡು–ನುಡಿಗೆ ಕೊಡುಗೆ ನೀಡುತ್ತಿದ್ದಾರೆ.

ಅನುಪಮ’ ಸೇವೆ

ಮಹಾರಾಷ್ಟ್ರದ ಜತ್ತದಲ್ಲಿ ನಡೆದ ತಾಲ್ಲೂಕು ಕನ್ನಡ ಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಹಿರಿಮೆ ಅವರದು. ಸಂಪಾದಿತ ಕೃತಿಗಳು ಸೇರಿ 19 ಪುಸ್ತಕಗಳನ್ನು ರಚಿಸಿದ್ದಾರೆ. ತಮ್ಮ ಅನುಪಮ ಪ್ರಕಾಶನದಿಂದ 70ಕ್ಕೂ ಹೆಚ್ಚಿನ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ‘ವೀರಗಣಾಚಾರಿ ಗುಡ್ಡಾಪುರದ ದಾನಮ್ಮ’ (ಇದರಲ್ಲಿ ಅವರು ಪ್ರೊ.ಕೆ.ಜಿ. ಕುಂದಣಗಾರ ಅವರು ಸಂಶೋಧಿಸಿದ ಶಾಸನಗಳನ್ನು ಬಳಸಿದ್ದಾರೆ), ಇಂಚಗೇರಿ ಸಂಪ್ರದಾಯದ ತತ್ವಪದಕಾರ್ತಿ ‘ಜತ್ತದ ಶಿವಲಿಂಗವ್ವ’ ಕನ್ನಡ ಪುಸ್ತಕಗಳು ಮರಾಠಿಗೆ ಅನುವಾದಗೊಂಡಿವೆ. ಪ್ರಕಾಶನಕ್ಕೆ 1999ರಲ್ಲಿ ‘ಅತ್ಯುತ್ತಮ ಪ್ರಕಾಶನ’ ಪ್ರಶಸ್ತಿ ದೊರೆತಿದೆ. ಸಿದ್ದಯ್ಯ ಪುರಾಣಿಕರ ಕೊನೆಯ ಕವನಸಂಕಲನ ‘ಹಾಲ್ಗೆನೆ’, ಕುಂ.ವೀರಭದ್ರಪ್ಪ ಅವರ ‘ನಿಜಲಿಂಗ’ ಕಾದಂಬರಿ (ಒಮ್ಮೆಲೇ 3ಸಾವಿರ ಪ್ರತಿ ಮುದ್ರಿಸಿದ್ದರು) ಮೊದಲಾದವು ಈ ಪ್ರಕಾಶನದಿಂದ ಲೋಕಾರ್ಪಣೆಯಾಗಿವೆ.

ಹಲವು ಜವಾಬ್ದಾರಿ

ರಾಜ್ಯ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿ ಸದಸ್ಯ, ಪುಸ್ತಕ ಪ್ರಾಧಿಕಾರದ ಸದಸ್ಯ, ಆರ್‌ಸಿಯು ಸಿಂಡಿಕೇಟ್ ಸದಸ್ಯರಾಗಿದ್ದರು. ಕಸಾಪ ಜಿಲ್ಲಾ ಘಟಕದ ಕಾರ್ಯದರ್ಶಿ ಹಾಗೂ ಅಥಣಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿದ್ದರು. ಪ್ರಸ್ತುತ ರಾಜ್ಯ ಪ್ರಕಾಶಕರ ಸಂಘದ ಉಪಾಧ್ಯಕ್ಷರಾಗಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಸಾರಾಂಗ ಸಲಹಾ ಸಮಿತಿ ಸದಸ್ಯರಾಗಿದ್ದಾರೆ.

ಅಥಣಿಯಲ್ಲಿ 1990ರಲ್ಲಿ ಏಕಕಾಲಕ್ಕೆ 12 ಪುಸ್ತಕಗಳನ್ನು ಪ್ರಕಟಿಸಿ (ವೀರಶೈವ, ಜೈನ, ಮಹಮದೀಯ ಹಾಗೂ ವೈಷ್ಣವಕ್ಕೆ ಸೇರಿದವು) ಆನೆ ಮೇಲಿಟ್ಟು ಮೆರವಣಿಗೆ ಮಾಡಿದ್ದರು. ದಿಗ್ಗಜರಾದ ಸಿದ್ದಯ್ಯ ಪುರಾಣಿಕ, ಮಹದೇವ ಬಣಕಾರ, ಆರ್.ಸಿ. ಹಿರೇಮಠ, ಶಾಂತದೇವಿ ಮಾಳವಾಡ ಮೊದಲಾದವರು ಪಾಲ್ಗೊಂಡಿದ್ದರು. ದಾಸ ಸಾಹಿತ್ಯ ಕುರಿತು ‘ದಾಸ ಭಕ್ತಿ’ ರಾಜ್ಯಮಟ್ಟದ ವಿಚಾರಸಂಕಿರಣ ಹಾಗೂ ಮಹಾರಾಷ್ಟ್ರದ ಸಂಕದಲ್ಲಿ ದೇಸಿ ಸಮ್ಮೇಳನ ಆಯೋಜಿಸಿದ್ದರು. ಅವರಿಗೆ ಮಹಾರಾಷ್ಟ್ರದಿಂದ ‘ಗಡಿನಾಡ ಕನ್ನಡ ಸಂಘಟಕ’ ಹಾಗೂ ಆಂಧ್ರದಿಂದ ‘ಸಂಸ್ಕೃತಿ ಪ್ರಕಾಶ’ ಸೇರಿದಂತೆ ಹಲವು ಗೌರವಗಳು ಸಂದಿವೆ.

ಪುಸ್ತಕವಾಗಿದೆ

ಅಥಣಿಯ ‘ಸಾಹಿತ್ಯ ಮಂಟಪ’ದ ಸಂಚಾಲಕರಾಗಿದ್ದರು. ದೇವದಾಸಿ ವಿಮೋಚನಾ ಸಂಘದ ಮೊದಲ ಕಾರ್ಯದರ್ಶಿ ಅವರು. ಅಲ್ಲಿ ಲಿಂಗರಾಜ ಸಾಹಿತ್ಯ ಪ್ರತಿಷ್ಠಾನದಿಂದ ಪ್ರತಿ ವರ್ಷ ಕೃತಿಗಳನ್ನು ಆಹ್ವಾನಿಸಿ 3 ಬಹುಮಾನ ನೀಡಿ ಲೇಖಕರನ್ನು ಪ್ರೋತ್ಸಾಹಿಸುತ್ತಿದ್ದರು. ಇನ್ಫೊಸಿಸ್‌ನ ಸುಧಾಮೂರ್ತಿ ಅವರ ‘ಸಾಮಾನ್ಯರಲ್ಲ ಅಸಾಮಾನ್ಯರು’ ಕೃತಿಗೆ ಪ್ರಶಸ್ತಿ ಸಿಕ್ಕಾಗ, ರಾಜ್ಯಪಾಲರಾಗಿದ್ದ ಟಿ.ಎನ್. ಚತುರ್ವೇದಿ ಹೆಲಿಕಾಪ್ಟರ್‌ನಲ್ಲಿ ಗಡಿಗೆ ಬಂದಿದ್ದರು. ಸಿದ್ದಣ್ಣ ವ್ಯಕ್ತಿತ್ವ ಕುರಿತು ಡಾ.ವಿ.ಎಸ್. ಮಾಳಿ ಅವರು ಪುಸ್ತಕ ರಚಿಸಿದ್ದಾರೆ.

‘ಗಡಿಯಲ್ಲಿ ಐದು ದಶಕಗಳಿಂದ ಕನ್ನಡಕ್ಕೆ ಮಾಡಿದ ಅಳಿಲು ಸೇವೆಯನ್ನು ಸರ್ಕಾರ ಗುರುತಿಸಿರುವುದು ಸಂತಸ ನೀಡಿದೆ. ಕನ್ನಡ ಕಟ್ಟುವ ಕೆಲಸ ಹೆಮ್ಮೆ ತಂದಿದೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT