ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಯಟ್ ಸಾಕು; ಬಿರಿಯಾನಿ ಬೇಕು!

Last Updated 21 ಮೇ 2018, 19:30 IST
ಅಕ್ಷರ ಗಾತ್ರ

ಮನೆಯಲ್ಲಿ ಎಲ್ಲರೂ ನೃತ್ಯಗಾರರು. ಗೆಜ್ಜೆಯ ಸದ್ದು ಕೇಳುತ್ತಲೇ ಬೆಳೆದ ಹುಡುಗಿಯ ಹೆಜ್ಜೆಗೆ ತಂತಾನೆಯೇ ಒಂದು ಸಹಜಲಯ ದೊರಕಿಬಿಟ್ಟಿತ್ತು. ಆದರೆ ಅವಳ ಪ್ರತಿಭೆ ಬರೀ ನೃತ್ಯಕ್ಕಷ್ಟೆ ಸೀಮಿತ ಆಗಿರಲಿಲ್ಲ. ಚಿಕ್ಕಂದಿನಿಂದಲೂ ನಟನೆಯೆಂದರೆ ಅವಳ ಮುಖ ಚಕ್ಕನೆ ಅರಳುತ್ತಿತ್ತು. ಕಣ್ಣುಗಳಲ್ಲಿ ನೂರು ನಕ್ಷತ್ರಗಳ ಹೊಳಪು ತುಂಬಿಕೊಳ್ಳುತ್ತಿದ್ದವು. ತೆರೆಯ ಮೇಲೆ ನೋಡಿದ ಸಿನಿಮಾ ಸಂಭಾಷಣೆಗಳು, ಅಭಿನಯ ಎಲ್ಲವನ್ನೂ ಹಾಗ್ಹಾಗೆಯೇ ಅನುಕರಿಸುತ್ತಿದ್ದಳು. ಮನೆಯ ಸದಸ್ಯರನ್ನೂ ಅಷ್ಟೇ ನಿಖರವಾಗಿ ಅನುಕರಿಸುತ್ತಿದ್ದಳು. ಕಾಲೇಜಿನ ಮೆಟ್ಟಿಲು ಹತ್ತುವಷ್ಟರಲ್ಲಿ ತಾನು ಮುಟ್ಟಬೇಕಾದ ಗುರಿ ಹಿರಿತೆರೆ ಎಂಬುದು ಅವಳಿಗೆ ಸ್ಪಷ್ಟವಾಗಿತ್ತು.

– ಇದು ನಿಶ್ವಿಕಾ ನಾಯ್ಡು ಎಂಬ ಕನ್ನಡದ ಹೊಸ ಪ್ರತಿಭೆ ನಟನೆಯತ್ತ ಹೊರಳಿಕೊಂಡ ಕಥೆ. ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಬಿ.ಎ. ಪದವಿ ಮುಗಿಸಿದ ನಿಶ್ವಿಕಾ ಮುಂಬೈಗೆ ಹೋಗಿ ಬೆರ್‍ರಿ ಜಾನ್‌ ಅಭಿನಯ ಶಾಲೆಯಲ್ಲಿ ಎಂಟು ತಿಂಗಳ ತರಬೇತಿ ಪಡೆದುಕೊಂಡು ಬಂದರು.

ಸಿನಿಮಾ ಜಗತ್ತಿಗೆ ಬೇಕಾಗಿದ್ದ ಅಂಗಸೌಷ್ಠವ ಮತ್ತು ಪ್ರತಿಭೆ ಎರಡೂ ಇದ್ದ ನಿಶ್ವಿಕಾಗೆ ಅವಕಾಶಗಳು ಸಿಗುವುದು ತೀರಾ ಕಷ್ಟವೇನೂ ಆಗಲಿಲ್ಲ. ‘ವಾಸು ನಾನ್ ಪಕ್ಕಾ ಕಮರ್ಷಿಯಲ್‌’ ಸಿನಿಮಾದ ಆಡಿಷನ್‌ನಲ್ಲಿ ಭಾಗವಹಿಸಿದ್ದು ಹುಸಿಹೋಗಲಿಲ್ಲ. ಮೊದಲ ಪ್ರಯತ್ನದಲ್ಲಿಯೇ ಚಿತ್ರದ ನಾಯಕಿಯಾಗಿ ಆಯ್ಕೆಯಾದರು. ನಂತರ ಚೈತನ್ಯ ನಿರ್ದೇಶನದ ‘ಅಮ್ಮಾ ಐ ಲವ್‌ ಯೂ’ ಸಿನಿಮಾದಲ್ಲಿಯೂ ನಾಯಕಿಯಾಗಿ ನಟಿಸಿದರು. ಈಗ ಕೆ. ಮಂಜು ಮಗ ಶ್ರೇಯಸ್ ಅವರು ನಾಯಕನಾಗಿ ನಟಿಸುತ್ತಿರುವ ‘ಪಡ್ಡೆ ಹುಲಿ’ ಚಿತ್ರಕ್ಕೂ ನಿಶ್ವಿಕಾ ನಾಯಕಿ. ಈ ಚಿತ್ರದ ಚಿತ್ರೀಕರಣ ಇನ್ನೂ ನಡೆಯುತ್ತಿದೆ. ಉಳಿದೆರಡು ಚಿತ್ರಗಳೂ ಪೂರ್ಣಗೊಂಡು ತೆರೆಗೆ ಬರಲು ಸಜ್ಜಾಗಿವೆ.

‘ಇದುವರೆಗೆ ನಾನು ಒಪ್ಪಿಕೊಂಡ ಮೂರು ಸಿನಿಮಾಗಳಲ್ಲಿಯೂ ಆಡಿಷನ್‌ನಲ್ಲಿ ಭಾಗವಹಿಸಿಯೇ ಅವಕಾಶ ಪಡೆದುಕೊಂಡಿದ್ದು. ಮೂರೂ ಸಿನಿಮಾಗಳಲ್ಲಿಯೂ ಒಂದಕ್ಕಿಂತ ಇನ್ನೊಂದು ಭಿನ್ನ ಪಾತ್ರ. ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಸಿನಿಮಾದಲ್ಲಿ ಬಬ್ಲಿ, ತುಂಟಿ, ಸಿಕ್ಕಾಪಟ್ಟೆ ಮಾತಾಡುವ ಹುಡುಗಿಯ ಪಾತ್ರ. ಆದರೆ ‘ಅಮ್ಮಾ ಐ ಲವ್ ಯೂ’ ಸಿನಿಮಾದಲ್ಲಿ ತುಂಬ ಮೌನಿ, ಪ್ರಬುದ್ಧೆ, ಎಲ್ಲರಿಗೂ ಸಹಾಯ ಮಾಡುವ ಹುಡುಗಿ. ಪಡ್ಡೆ ಹುಲಿ ಸಿನಿಮಾದಲ್ಲಿ ಈ ಎರಡೂ ಸಿನಿಮಾಗಿಂತ ಬೇರೆಯದೇ ಆದ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನಾರ್ಮಲ್ ಕಾಲೇಜು ಹುಡುಗಿ. ಆದರೆ ಆ ಸಿನಿಮಾದ ಕಥೆಯೇ ತುಂಬಾ ಚೆನ್ನಾಗಿದೆ. ಇಂದಿನ ಪೀಳಿಗೆಯವರಿಗೆ ಇಷ್ಟವಾಗುವ ಹಾಗಿದೆ’ ಎಂದು ತಮ್ಮ ಮೂರೂ ಸಿನಿಮಾಗಳ ಕುರಿತು ವಿವರಿಸುತ್ತಾರೆ ನಿಶ್ವಿಕಾ.

ಅವರು ನಟಿಸಿರುವ ಯಾವ ಸಿನಿಮಾವೂ ಬಿಡುಗಡೆಯಾಗಿಲ್ಲ. ಹಾಗಾಗಿ ತೆರೆಯ ಮೇಲೆ ತನ್ನನ್ನು ನೋಡಿದ ಪ್ರೇಕ್ಷಕ ಹೇಗೆ ಸ್ಪಂದಿಸಬಹುದು ಎಂಬ ಬಗ್ಗೆ ಅವರಿಗೆ ಕುತೂಹಲವಿದೆ. ಆದ್ದರಿಂದಲೇ ‘ಒಂದು ಸಿನಿಮಾ ಬಿಡುಗಡೆಯಾಗಿ ಜನರು ನೋಡಲಿ. ನನ್ನನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ನೋಡಿ ಆಮೇಲೆ ಎಂಥ ಸಿನಿಮಾ ಒಪ್ಪಿಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುತ್ತೇನೆ’ ಎನ್ನುತ್ತಾರೆ ಅವರು. ಇದೇ ಕಾರಣಕ್ಕೆ ಅವರು ಯಾವ ಸಿನಿಮಾವನ್ನೂ ಒಪ್ಪಿಕೊಳ್ಳುತ್ತಿಲ್ಲ.

‘ಬಿಡುವಿನ ಸಮಯದಲ್ಲಿ ಏನು ಮಾಡುತ್ತೀರಿ’ ಎಂದು ಕೇಳಿದರೆ ‘ನೃತ್ಯ, ಈಜು ಮತ್ತು ಊಟ’ ಎಂದು ಹೇಳಿ ನಗುತ್ತಾರೆ ನಿಶ್ವಿಕಾ. ನೃತ್ಯ, ಈಜಿನಷ್ಟೇ ಅವರಿಗೆ ಊಟವೂ ಇಷ್ಟ. ಅಡುಗೆ ಮಾಡ್ತೀರಾ? ಎಂದರೆ ‘ಇಲ್ಲ. ಯಾರಾದರೂ ಮಾಡಿಕೊಟ್ಟರೆ ಚೆನ್ನಾಗಿ ತಿಂತೀನಿ’ ಎಂದು ಇನ್ನಷ್ಟು ಜೋರಾಗಿ ನಗುವ ಅವರಿಗೆ ಬಿರಿಯಾನಿ, ಕಬಾಬ್ ಎಂದರೆ ಜೀವ ಹಾತೊರೆಯುತ್ತದೆ. ‘ದೇಹ, ಆರೋಗ್ಯ ಚೆನ್ನಾಗಿರಬೇಕು ಅನ್ನುವುದು ನಿಜ. ಆದರೆ ಡಯಟ್‌ ಗಿಯಟ್‌ ಅಂತೆಲ್ಲ ಬಾಯಿಕಟ್ಟುವುದು ನನಗೆ ಸಾಧ್ಯವೇ ಇಲ್ಲ. ಈಗಲೇ ನಾನು ಚೆನ್ನಾಗಿದ್ದೀನಿ’ ಎನ್ನುತ್ತಾರೆ. ಆದರೆ ದಿನವೂ ಒಂದಿಷ್ಟು ಹೊತ್ತು ವ್ಯಾಯಾಮವನ್ನೂ ಮಾಡುವುದನ್ನು ಅವರು ತಪ್ಪಿಸುವುದಿಲ್ಲ. ಬಿಡುವಾದಾಗ ಜಿಮ್‌ಗೂ ಹೋಗುತ್ತಾರೆ. ಹಾಗೆಯೇ ಮೈದಣಿಯೆ ನರ್ತಿಸುವುದು, ಪ್ರತಿದಿನ ತಪ್ಪದೇ ಜಾಗ್‌ ಮಾಡುವುದು ಅವರ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕವಾಗಿದೆ.

‘ಎಲ್ಲ ನಟರ ಜತೆಗೂ ನಟಿಸುವ ಆಸೆ ಇದೆ’ ಎಂದು ಹೇಳಿದರೂ ನಿಶ್ವಿಕಾಗೆ ಅಪ್ಪು ಮೇಲೆ ಕೊಂಚ ಅಭಿಮಾನ ಜಾಸ್ತಿ. ಹಾಗೆಯೇ ಎಲ್ಲ ರೀತಿಯ ಪಾತ್ರಗಳನ್ನೂ ನಿರ್ವಹಿಸಿ ಸೈ ಅನಿಸಿಕೊಳ್ಳಬೇಕು ಎಂಬ ಕನಸು ಛಲ ಎರಡೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT