ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಇಎಸ್‌ ನಿಷೇಧಕ್ಕೆ ಕರವೇ ಆಗ್ರಹ; ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನ

ಎಂಇಎಸ್‌ ನಿಷೇಧಕ್ಕೆ ಕರವೇ ಆಗ್ರಹ, ಪೊಲೀಸರೊಂದಿಗೆ ಸಂಘರ್ಷ
Last Updated 20 ಡಿಸೆಂಬರ್ 2021, 13:01 IST
ಅಕ್ಷರ ಗಾತ್ರ

ಬೆಳಗಾವಿ: ‘ನಗರದ ಅನಗೋಳದ ಕನಕದಾಸ ಕಾಲೊನಿಯಲ್ಲಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಮೆ ಭಗ್ನಗೊಳಿಸಿದವರನ್ನು ಕೂಡಲೇ ಬಂಧಿಸಬೇಕು ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌)ಯನ್ನು ರಾಜ್ಯದಲ್ಲಿ ನಿಷೇಧಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಟಿ.ಎ.ನಾರಾಯಣಗೌಡ ಮತ್ತು ಪ್ರವೀಣ್‌ಶೆಟ್ಟಿ ನೇತೃತ್ವದಲ್ಲಿ ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಿದರು.

ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು 2 ತಂಡಗಳಾಗಿ ಪ್ರತ್ಯೇಕವಾಗಿ ಬರುತ್ತಿದ್ದ ಸಾವಿರಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರು. ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಅವರನ್ನು ಹಿರೇಬಾಗೇವಾಡಿ ಟೋಲ್‌ ಬಳಿ, ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ–4ರಲ್ಲೇ ತಡೆದರು. ಈ ವೇಳೆ, ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ತಳ್ಳಾಟ–ನೂಕಾಟವಾಯಿತು.

ಕಾರ್ಯಕರ್ತೆಯರು ಸೇರಿದಂತೆ ಕೆಲವರು ಪೊಲೀಸ್ ವಾಹನದ ಮೇಲೇರಿ, ಎಂಇಎಸ್ ವಿರುದ್ಧ ಘೋಷಣೆ ಕೂಗಿದರು. ಕೆಲವರು ಲಾರಿ ಕೆಳಗೆ ಮಲಗಿ ಪ್ರತಿಭಟನೆ ನಡೆಸಿದರು. ಕೆಲವರು, ಮಹಾರಾಷ್ಟ್ರ ನೋಂದಣಿಯ ವಾಹನವೊಂದರ ಮೇಲೆ ದಾಳಿ ಮಾಡಲು ಯತ್ನಿಸಿದರು. ಆದರೆ, ಪೊಲೀಸರು ಅವಕಾಶ ಕೊಡಲಿಲ್ಲ.

‘ಡಿ.29ಕ್ಕೆ ಬೆಂಗಳೂರಿನಲ್ಲಿ ಹೋರಾಟಗಾರರ ಸಭೆ ಕರೆಯಲಾಗಿದೆ. ರಾಜ್ಯದಲ್ಲಿ ಎಂಇಎಸ್‌ ನಿಷೇಧಿಸುವಂತೆ ಆಗ್ರಹಿಸಿ ಮತ್ತು ಆ ಸಂಘಟನೆಯವರ ಪುಂಡಾಟ ಖಂಡಿಸಿ ಕರ್ನಾಟಕ ಬಂದ್‌ಗೆ ಕರೆ ನೀಡುವ ಬಗ್ಗೆ ಅಂದು ಚರ್ಚಿಸಲಾಗುವುದು’ ಎಂದು ಕರವೇ ಪ್ರವೀಣ್‌ಶೆಟ್ಟಿ ಬಣದ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ತಿಳಿಸಿದರು.

ಎಂಇಎಸ್‌ ಕೃತ್ಯಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು. ಕನ್ನಡ ಬಾವುಟಗಳು ರಾರಾಜಿಸಿದವು.

ಮುಂಜಾಗ್ರತಾ ಕ್ರಮವಾಗಿ ಟೋಲ್‌ನಲ್ಲಿ 200ಕ್ಕೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT