ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೂದಿ ಊದಿದರೆ ನಿಗಿ ನಿಗಿ ಕೋಮುವಾದ, ಬುದ್ಧನತ್ತ ತಿರುಗಿದ ಕೊಂಡಗೂಳಿ

Last Updated 6 ಮೇ 2018, 19:30 IST
ಅಕ್ಷರ ಗಾತ್ರ

ಕೊತ ಕೊತವೆನ್ನುವ ಕಲಬುರ್ಗಿಯನ್ನು ಬೆಳ್ಳಂಬೆಳಗ್ಗೆ ತೊರೆದು ಬೆಳಗಾವಿಯ ದಾರಿಯಲ್ಲಿ ಹರಿದ ಕಾರು ಭೀಮಾ ತೀರದ ಜೇವರ್ಗಿ ತಲುಪಿದರೆ ನುಗ್ಗಿದ್ದು, ಸದಾ ಮುಖದಲ್ಲಿ ನಗೆ ಧರಿಸಿರುತ್ತಿದ್ದ ದಿವಂಗತ ಧರ್ಮಸಿಂಗ್‌ ನೆನಪುಗಳು. ಅವರ ಮಗ ಡಾ. ಅಜಯ ಸಿಂಗ್ ಕಾಂಗ್ರೆಸ್ ಪಕ್ಷದಿಂದ ಮರು ಆಯ್ಕೆ ಬಯಸಿದ್ದಾರೆ.

2008ರಲ್ಲಿ ಧರ್ಮಸಿಂಗ್‌ ಅವರನ್ನು ಅತ್ಯಂತ ಕಡಿಮೆ ಮತಗಳ ಅಂತರದಿಂದ ಸೋಲಿಸಿದ್ದರು ಬಿಜೆಪಿಯ ದೊಡ್ಡಪ್ಪಗೌಡ ಪಾಟೀಲ ನರಿಬೋಳ. ಅಪ್ಪನ ವಿರುದ್ಧ ಸೆಣಸುತ್ತಿದ್ದ ನರಿಬೋಳ ಮಗನನ್ನೂ ಕಾಡಿದ್ದಾರೆ. ಸಿಂಗ್ ಕುಟುಂಬದ ಪಾಲಿಗೆ ಗಂಟಲ ಮುಳ್ಳು. ಮುಖ್ಯವಾಗಿ ಮುಸ್ಲಿಮರ ಮತಗಳತ್ತ ಗುರಿಯಿಟ್ಟು ಧುತ್ತನೆ
ಪ್ರತ್ಯಕ್ಷವಾದ ಮಹಿಳಾ ಎಂಪವರ್‌ಮೆಂಟ್ ಪಾರ್ಟಿಗೆ ಇಲ್ಲಿ ಹುರಿಯಾಳು ಪರಿಶಿಷ್ಟ ಜಾತಿಯ ಪ್ರಭು ರತ್ನಾಕರ್. ಮುಸ್ಲಿಂ ಮತಗಳಲ್ಲಿ ಜಾತ್ಯತೀತ ದಳದ ಕೇದಾರಲಿಂಗಯ್ಯ ಅವರು ಪಾಲು ಪಡೆಯುವ ಸೂಚನೆಗಳಿವೆ.

ಪ್ರಧಾನ ಪಕ್ಷಗಳ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ‘ಹಂಚಿಕೊಂಡು ನೆರವಾಗಲು’ ಪಕ್ಷೇತರ ಅಭ್ಯರ್ಥಿಗಳೂ ಇಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಹೊಸ ತಾಲ್ಲೂಕು ಕೇಂದ್ರ ಯಡ್ರಾಮಿ ಇನ್ನೂ ಮೇಲೆದ್ದಿಲ್ಲ. ಲಕ್ಷ ಎಕರೆಗೆ ನೀರು ಉಣಿಸುವ ಮಲ್ಲಾಬಾದ್ ಏತ ನೀರಾವರಿ ಯೋಜನೆ ಕದಲುತ್ತಿಲ್ಲ. ಕಲಬುರ್ಗಿಯ ಮೋದಿ ರ‍್ಯಾಲಿಗೆ ಇಲ್ಲಿಂದ 300 ವಾಹನಗಳಲ್ಲಿ ಮಂದಿಯನ್ನು ಕರೆದೊಯ್ಯಲಾಗಿತ್ತು.

ಗಂಗಾಮತಸ್ಥರು ಎಂದೂ ಕರೆಯಲಾಗುವ ಕೋಲಿ ಸಮುದಾಯದವರು ಕಲಬುರ್ಗಿ ಸೀಮೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಬಿಜೆಪಿಯು ರಾಷ್ಟ್ರಪತಿ ಸ್ಥಾನಕ್ಕೆ ನೇಮಕ ಮಾಡಿದ ರಾಮನಾಥ ಕೋವಿಂದ್‌ ತಮ್ಮವರೇ ಎಂಬ ಭಾವನೆ ವ್ಯಾಪಕ. ಬಿಜೆಪಿಯ ಪಾಲಿಗೆ ಸಂತಸದ ಸಂಗತಿಯಿದು. ಈ ಮಾತಿಗೆ ಜೇವರ್ಗಿಯೂ ಹೊರತಲ್ಲ. ಕೋಲಿ ಸಮುದಾಯದ ಮುಂದಾಳು ದಿವಂಗತ ವಿಠ್ಠಲ ಹೇರೂರ ಅವರ ಪುತ್ಥಳಿಯು ಸಮೀಪದ ದೇವಲಗಾಣಗಾಪುರದಲ್ಲಿ ರಾಷ್ಟ್ರಪತಿಯವರಿಂದ ಅನಾವರಣಕ್ಕೆ ಕಾದಿದೆ.

ಕೋವಿಂದ್ ಮತ್ತು ಬಿಜೆಪಿ ಪ್ರಭಾವ ವಲಯದ ಕಾರಣ ತಮಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ಸಿಗಬಹುದು ಎಂಬ ನಿರೀಕ್ಷೆಯೂ ಈ ಜನರಲ್ಲಿದೆ. ಪಕ್ಷೇತರರಾಗಿ ಆಯ್ಕೆಯಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶೋಭಾ ಬಾಣಿ ಅವರು ಕೋಲಿ ಸಮಾಜಕ್ಕೆ ಸೇರಿದವರು. ಕಾಂಗ್ರೆಸ್ ಪಕ್ಷದವರು ಕೋಲಿ ಸಮಾಜದವರನ್ನು ಗ್ರಾಮ ಪಂಚಾಯಿತಿ ಸದಸ್ಯರನ್ನಾಗಿ ಕೂಡ ಮಾಡಿಲ್ಲ ಎಂಬ ಅಸಮಾಧಾನ ಇಲ್ಲಿದೆ. ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಶಿಫಾರಸು ಮಾಡಿದ ಕಾಂಗ್ರೆಸ್ ನೇತೃತ್ವದ ಸರ್ಕಾರ ‘ನಮ್ಮ ನಮ್ಮಲ್ಲೇ ಜಗಳ ಹಚ್ಚಿತು’ ಎಂಬ ಕುದಿಯೂ ಇಲ್ಲಿ ಲಿಂಗಾಯತರ ಪೈಕಿ ಕಂಡಿದೆ. ಜನತಾದಳದ ಕೇದಾರಲಿಂಗಯ್ಯ ಮೂರು ಸಲ ಸೋತಿದ್ದಾರೆ. ಎಚ್.ಡಿ.ಕುಮಾರಸ್ವಾಮಿಯವರ ಸಭೆ ಇಲ್ಲಿ ಸಾವಿರಾರು ಮಂದಿಯನ್ನು ಸೆಳೆದದ್ದುಂಟು.

ಹಿಂದೂ-ಮುಸ್ಲಿಂ ಕೋಮುವಾದ ಮತ್ತು ದಲಿತರು- ಸವರ್ಣೀಯರ ನಡುವಿನ ಘರ್ಷಣೆ ಈ ಚುನಾವಣೆಯಲ್ಲಿ ಹೊತ್ತಿ ಉರಿದಿಲ್ಲ ಹೌದು. ಆದರೆ ಹಳ್ಳಿಗಾಡಿನ ಒಳನಾಡುಗಳಲ್ಲಿ ದೂರದ ಬೂದಿ ಮುಚ್ಚಿದ ಕೆಂಡದಂತೆ ಅಲ್ಲಲ್ಲಿ ಅಡಗಿ ಸುಡತೊಡಗಿರುವುದು ವಾಸ್ತವ. ಈ ಮಾತಿಗೂ ಜೇವರ್ಗಿಯಲ್ಲಿ ಇತ್ತೀಚಿನ ಮಾದರಿಗಳು ಉಂಟು. ಕೊಂಡಗೂಳಿ ಎಂಬ ಹಳ್ಳಿಯಲ್ಲಿ ದಲಿತರು-ಸವರ್ಣೀಯರ ನಡುವೆ ನಡೆದ ಘರ್ಷಣೆಯಿಂದ ನೂರು ಮಂದಿ ದಲಿತರು ಬೌದ್ಧ ಮತಕ್ಕೆ ಪರಿವರ್ತನೆ ಹೊಂದಿದರು.

ಅಂತೆಯೇ ಆಂದೋಲಾ ಗ್ರಾಮದ ಕರುಣೇಶ್ವರ ಮಠದ ಯುವ ಪೀಠಾಧಿಪತಿ ರಾಜ್ಯ ಶ್ರೀರಾಮಸೇನೆಯ ಪದಾಧಿಕಾರಿ. ಮತ್ತೊಂದು ಕೋಮಿನ ವಿರುದ್ಧ ಕಿಚ್ಚೆಬ್ಬಿಸುವ ಹೇಳಿಕೆಗಳಿಗೆ ಪ್ರಸಿದ್ಧರು. ಇದೇ ಕಾರಣಕ್ಕಾಗಿ ಅವರ ಬಂಧನವೂ ಆಯಿತು. ಬೆಂಬಲಿಗರು ಟ್ರ್ಯಾಕ್ಟರುಗಳಲ್ಲಿ ಬಂದು ಪ್ರತಿಭಟಿಸಿದರು. ಲಾಠಿ ಚಾರ್ಜ್ ನಡೆಯಿತು. ಗಾಯಗೊಂಡವರು ಓಡಿ ಹೋಗಿ ಹೊಲ, ಅಡವಿ ಸೇರಿದರು. 90ಕ್ಕೂ ಹೆಚ್ಚು ಮಂದಿಯ ವಿರುದ್ಧ ಎಫ್.ಐ.ಆರ್. ದಾಖಲಾಯಿತು.

ಹಳ್ಳಿ ಹಳ್ಳಿಗಳಲ್ಲಿ ಮತದಾರರನ್ನು, ಮುಂದಾಳುಗಳನ್ನು ಹೆಸರು ಹಿಡಿದು ಕರೆಯುತ್ತಿದ್ದ, ‘ಬರ್ರೀ, ಕುಂದರ್ರೀ’ ಎಂದು ಹೆಗಲ ಮೇಲೆ ಕೈ ಹಾಕಿ ಮಾತಾಡಿಸುತ್ತಿದ್ದ, ಗುಡಿ ಗುಂಡಾರಗಳು, ಮಠಗಳಿಗೆ ಎಡತಾಕುತ್ತಿದ್ದ ‘ಹಳೆಯ’ ತಲೆಮಾರಿನ ಧರ್ಮಸಿಂಗ್ ಅವರನ್ನು ಜೇವರ್ಗಿ ‘ಮಿಸ್’ ಮಾಡಿಕೊಂಡಿದೆ.

ಉರಿ ಬಿಸಿಲು ಸುರಿದ ಟಾರು ರಸ್ತೆಯಲ್ಲಿ ದೂರ ದೂರದಲ್ಲಿ ಕಂಡು, ಸಮೀಪಿಸುತ್ತಿದ್ದಂತೆ ಮರೆಯಾಗುವ ಮೃಗಜಲ. ತೆರೆದ ವಾಹನಗಳಲ್ಲಿ ಧಗೆಯ ಲೆಕ್ಕಿಸದೆ ಪಯಣಿಸುವ ಹಳ್ಳಿಹೋಕರು... ಕಲ್ಲಹಂಗರ ಜೇರಟಗಿ ಮೋರಟಗಿ ತಲುಪಿದರೆ ವಿಜಯಪುರದ ಸರಹದ್ದು. ಗಬಸಾವಳಗಿ ಬಿಸನಾಳ ಮತ್ತು ಕೊಲೆಯಾಗಿ ಹೋದ ಎಂ.ಎಂ.ಕಲಬುರ್ಗಿಯವರ ಊರು ಯರಗಲ್ಲನ್ನು ಹಾದು ಸಿಂದಗಿಯನ್ನು ಮುಟ್ಟಿದರೆ ಊರ ತುಂಬ ನುಲಿಯ ಚಂದಯ್ಯ, ಬಸವಣ್ಣ, ಅಂಬಿಗರ ಚೌಡಯ್ಯ, ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ ಪ್ರತಿಮೆಗಳು- ವೃತ್ತಗಳು.

ಹಸ್ತದ ಪರ ಅರಚುತ್ತಿದ್ದ ಧ್ವನಿವರ್ಧಕದಲ್ಲಿ ‘ಇದು ಇಂದ್ರಾ ಗಾಂಧೀ ಕಾಂಗ್ರೆಸ್ಸು, ಸೋನಿಯಾ ಗಾಂಧೀ ಕಾಂಗ್ರೆಸ್ಸು, ರಾಹುಲ್ ಗಾಂಧೀ ಕಾಂಗ್ರೆಸ್ಸು, ಬಡವರ ಪಕ್ಷ’ ಎಂಬ ಘೋಷಣೆ... ಸಿಂಗಾರಗೊಂಡ ಕಮಲದ ವಾಹನಗಳು, ತೆನೆ ಹೊತ್ತ ಮಹಿಳೆಯ ಭಿತ್ತಿಗಳು. ಕಬ್ಬು ಬೆಳೆಯುವ ಈ ಸೀಮೆ ಇತ್ತೀಚೆಗೆ ತೊಗರಿ ಉತ್ಪಾದನೆಯಲ್ಲಿ ಕಲಬುರ್ಗಿಗೆ ಸಡ್ಡು ಹೊಡೆದಿದೆ. ಬೆಂಬಲ ಬೆಲೆ ತೆತ್ತು ಖರೀದಿಸಲಾದ ತೊಗರಿಯ ಹಣ ಇನ್ನೂ ರೈತರ ಕೈಗೆ ಬಂದಿಲ್ಲ.

ಅಂಬೇಡ್ಕರ್ ವೃತ್ತದ ಬಳಿ ಬೀದಿ ಬದಿಯ ಹೋಟೆಲಿನಲ್ಲಿ ಬಿಡುವಿಲ್ಲದ ವ್ಯಾಪಾರ. ಈರುಳ್ಳಿ ಪಕೋಡ, ಹತ್ತಿಕಾಯಿ, ಮೆಣಸಿನ ಬೋಂಡ ಕರಿಯುತ್ತಿದ್ದ, ಬುರುಡೆಟೋಪಿ ಧರಿಸಿ ಎದ್ದು ಕಾಣಿಸುತ್ತಿದ್ದ ಗಡ್ಡಧಾರಿ ಸದ್ದಾಂ ಬಾವಾ. ಒಳಗೆ ಬೆಂಚುಗಳ ಮೇಲೆ ಕುಳಿತು ಮೆಲ್ಲುತ್ತಿದ್ದ ಗ್ರಾಹಕರು ಹಿಂದೂಗಳು. ಬಡಿಸುತ್ತಿದ್ದವರು ಕುಂಕುಮ ಧರಿಸಿದ ಹಿಂದೂ ಹುಡುಗರು. ಗಲ್ಲಾ ಪೆಟ್ಟಿಗೆ ಮೇಲೆ ಸದ್ದಾಂ ಸಂಬಂಧಿ ಮಹಿಳೆ. ಹಿಂದೂ- ಮುಸ್ಲಿಮರು ಕಾಕಾ... ಮಾಮಾ... ಮುತ್ಯಾ ಎಂದು ಪರಸ್ಪರ ಕರೆದು ಬೆರೆತು ಬದುಕುವ ಈ ಅಪರೂಪದ ನೋಟ ನಗರಗಳಲ್ಲಿ ಮರೆಯಾಗಿದೆ. ಆದರೆ ಹಿನ್ನಾಡು, ಒಳನಾಡುಗಳಲ್ಲಿ ಇನ್ನೂ ಜೀವಂತ.

ತಾಲ್ಲೂಕು ಕಚೇರಿಯ ಮೇಲೆ ಗುಟ್ಟಾಗಿ ಪಾಕಿಸ್ತಾನದ ಧ್ವಜ ಹಾರಿಸಿದ್ದು ಇದೇ ಸಿಂದಗಿಯಲ್ಲಿ. ಈ ಕೃತ್ಯವನ್ನು ತಾನೇ ಮಾಡಿದ್ದಾಗಿ ಒಪ್ಪಿಕೊಂಡ ರಾಕೇಶ್ ಮಠ ಹೂಗಾರ ಎಂಬ ಯುವಕ ಶ್ರೀರಾಮಸೇನೆಯವರು. ಹಂಚಿ ಹೋಗಿರುವ ಹಿಂದೂಗಳನ್ನು ಒಗ್ಗೂಡಿಸಲು ಹೀಗೆ ಮಾಡಿದ್ದಾಗಿ ಹೇಳಿಕೆ ನೀಡಿದ್ದರು. ಈಗ ಅವರು ತಮ್ಮ ಸಂಘಟನೆಯ ಜಿಲ್ಲಾ ಸಂಚಾಲಕರು.

ಆಗತಾನೇ ಅಲ್ಲಿ ಪತ್ರಿಕಾಗೋಷ್ಠಿ ಮುಗಿಸಿದ್ದ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಸಂವಿಧಾನವನ್ನು ಬದಲಾಯಿಸುವುದಿಲ್ಲ ಎಂದು ದಲಿತರಿಗೆ ಸಮಾಧಾನ ಹೇಳಿ ಮುಂದಿನ ಊರಿಗೆ ಹೊರಟಿದ್ದರು.

ದೇವೇಗೌಡರ ಜಾತ್ಯತೀತ ಜನತಾದಳದ ಅಭ್ಯರ್ಥಿ 82ರ ವಯಸ್ಸಿನ ಎಂ.ಸಿ.ಮನಗೂಳಿ ಈ ಬಾರಿ ಗೆಲುವಿನ ಹೊಸ್ತಿಲಿನಲ್ಲಿ ನಿಂತಿದ್ದಾರೆ ಎಂದೇ ಇಲ್ಲಿ ಜನಜನಿತರು. ಉತ್ತಮ ವ್ಯಕ್ತಿಯಾದರೂ ಮೂರು ಸಲ ಸೋತಿದ್ದಾರೆಂಬ ಸಹಾನುಭೂತಿ, ಈ ಹಿಂದೆ ಮಾಡಿದ್ದ ಉತ್ತಮ ಕೆಲಸ ಕಾರ್ಯಗಳು ಅವರ ಕೈ ಹಿಡಿಯುವಂತಿವೆ. ‘ಮನಗೂಳಿ ಸೋತು ಸತ್ತ ಅನಿಸಬ್ಯಾಡ್ರೀ... ಗೆದ್ದು ಸತ್ತ ಅನಸರಿ’ ಎಂಬುದು ಮತದಾರರಲ್ಲಿ ಮನಗೂಳಿಯವರ ಭಾವುಕ ವಿನಂತಿ. ಗುತ್ತಿಬಸವಣ್ಣ ನೀರಾವರಿ ಯೋಜನೆಗೆ ಮಂಜೂರಾತಿ ಪಡೆಯುವ ತನಕ ಕಾಲಿಗೆ ಚಪ್ಪಲಿ ಧರಿಸುವುದಿಲ್ಲ ಎಂದಿದ್ದ ಮನಗೂಳಿ ನುಡಿದಂತೆ ನಡೆದವರು. ನೀರಿಲ್ಲದ ಸಿಂದಗಿಗೆ ಹೆಣ್ಣು ಕೊಡುವುದಿಲ್ಲ ಎಂಬ ಕಾಲವೊಂದಿತ್ತು. ಕೃಷ್ಣಾ ಯೋಜನೆಯ ಇಂಡಿ ಶಾಖಾ ಕಾಲುವೆಯಿಂದ ನೀರು ತಂದು ಕೆರೆ ತುಂಬಿಸಿದ ನಂತರ ಅಂತರ್ಜಲ ಹೆಚ್ಚಿದ ಬಳಿಕ ಸಿಂದಗಿ ಈಗ ದಾಹ ತೀರಿದ ಊರು.

ಬಿಜೆಪಿಯ ಅಭ್ಯರ್ಥಿ ರಮೇಶ್ ಭೂಸನೂರು ಹಾಲಿ ಶಾಸಕರು. ಲಿಂಗಾಯತ ಗಾಣಿಗರು. ಉತ್ತರ ಕರ್ನಾಟಕದ ಕೋಲಿ ಸಮಾಜವು ರಾಷ್ಟ್ರಪತಿ ರಾಮನಾಥ ಕೋವಿಂದ್‌ ತಮ್ಮದೇ ಜಾತಿಯವರು ಎಂದು ಎದೆ ಉಬ್ಬಿಸಿರುವ ಅದೇ ತೆರದಲ್ಲಿ, ಪ್ರಧಾನಿ ಮೋದಿ ಎಣ್ಣೆ ತೆಗೆಯುವ ಗಾಂಚಿ (ಗಾಣಿಗ) ಜಾತಿಗೆ ಸೇರಿದವರು, ಯಡಿಯೂರಪ್ಪನವರೂ ಗಾಣಿಗ ಲಿಂಗಾಯತರು. ಈ ಇಬ್ಬರೂ ‘ತಮ್ಮವರು’ ಎಂದು ಎಲ್ಲೆಡೆ ಗುರುತಿಸಿಕೊಂಡು ಹೇಳಿಕೊಳ್ಳುವ ಪ್ರವೃತ್ತಿ ಗಾಣಿಗ ಲಿಂಗಾಯತರಲ್ಲಿ ವ್ಯಾಪಕ. ಸಮಾವೇಶಗಳಲ್ಲೂ ಪ್ರಸ್ತಾಪಗೊಳ್ಳುತ್ತಿರುವ ಸಂಗತಿಯಿದು.

ಟಿಪ್ಪು ಸುಲ್ತಾನ್ ವೃತ್ತದಲ್ಲಿ ‘ಮಂದಿರ ವಹೀ ಬನಾಯೇಂಗೇ...’ ಎಂಬ ಧ್ವನಿವರ್ಧಕದಲ್ಲಿನ ಹಾಡು... ಚಪ್ಪಲಿ ತೂರಾಟ, ಗದ್ದಲ. ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಮರುದಿನ ಸನಿಹದ ಮಸೀದಿಗೆ ಹೋಗಿ ‘ಯಾರೋ ಕಿಡಿಗೇಡಿಗಳು ನಡಸ್ಯಾರ. ಮನಸಿಗೆ ಹಚಗೋಬ್ಯಾಡ್ರೀ’ ಎಂದು ಸಮಾಧಾನ ಮಾಡಿದರು. ಟಿಪ್ಪು ಜಯಂತಿಗೆ ಲಕ್ಷ ರೂಪಾಯಿ ದೇಣಿಗೆ ನೀಡಿದರು. ಸ್ವಾಭಾವಿಕವಾಗಿಯೇ ಭೂಸನೂರರ ಈ ನಡೆಯನ್ನು ಶ್ರೀರಾಮಸೇನೆ ಉಗ್ರವಾಗಿ ಪ್ರತಿಭಟಿಸಿದೆ. ಅವರಿಗೆ ವೋಟು ಹಾಕಬಾರದೆಂದು ಹಿಂದೂಗಳಿಗೆ ಮುತಾಲಿಕರು ಕರೆ ನೀಡಿದ್ದಾರೆ.

ಸಿಂದಗಿಗೆ ಬೆನ್ನು ತಿರುಗಿಸಿದಾಗ ಹೊತ್ತು ಕಂತಿತ್ತು. ಮಡಿವಾಳ ಮಾಚಿದೇವನ ದೇವರಹಿಪ್ಪರಗಿ ಕರೆಯುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT