ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರಕ್ಕಾಗಿ ನೆರೆ ಸಂತ್ರಸ್ತರ ಪ್ರತಿಭಟನೆ

ಅಧಿಕಾರಿಗಳ ವಿರುದ್ಧ ತಳಕಟ್ನಾಳ ಗ್ರಾಮಸ್ಥರ ಆಕ್ರೋಶ
Last Updated 26 ಫೆಬ್ರುವರಿ 2020, 13:42 IST
ಅಕ್ಷರ ಗಾತ್ರ

ಗೋಕಾಕ (ಬೆಳಗಾವಿ ಜಿಲ್ಲೆ): ‘ಪ್ರವಾಹದಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಬೇಕು. ಸಮೀಕ್ಷೆಯಲ್ಲಿ ಅಧಿಕಾರಿಗಳು ಮಾಡಿರುವ ತಾರತಮ್ಯ ಸರಿಪಡಿಸಿ ನೊಂದವರಿಗೆ ನ್ಯಾಯ ಒದಗಿಸಬೇಕು’ ಎಂದು ತಾಲ್ಲೂಕಿನ ತಳಕಟ್ನಾಳ ಗ್ರಾಮಸ್ಥರು ತಹಶೀಲ್ದಾರ್‌ ಕಚೇರಿಗೆ ಬುಧವಾರ ಮನವಿ ಸಲ್ಲಿಸಿದರು.

ಮಿನಿ ವಿಧಾನಸೌಧದ ಮುಂದೆ ತಾಲ್ಲೂಕು ಪಂಚಾಯ್ತಿ ಸದಸ್ಯ ಲಕ್ಷ್ಮಣ ಮುಸಗುಪ್ಪಿ ನೇತೃತ್ವದಲ್ಲಿ ಸೇರಿದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಗೇಟ್‌ ಬಂದ್ ಎರಡು ಗಂಟೆಗಳಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.

ಉಪ ತಹಶೀಲ್ದಾರ್ ವೈ.ಎಲ್. ಡಬ್ಬನ್ನವರ ಮನವೊಲಿಸಲು ಪ್ರಯತ್ನಿಸಿದರು. ಆದರೆ ತಹಶೀಲ್ದಾರ್‌ ಸ್ಥಳಕ್ಕೆ ಬರಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಜಿಲ್ಲಾಧಿಕಾರಿ ಕರೆದಿರುವ ಸಭೆಗೆ ಹೋಗಿದ್ದಾರೆ ಎಂದು ಉಪತಹಶೀಲ್ದಾರ್‌ ತಿಳಿಸಿದರು.

ಗ್ರಾಮಸ್ಥರೊಂದಿಗೆ ಸೇರಿದ ರೈತ ಸಂಘದ ಮುಖಂಡರು, ವಾರದೊಳಗಾಗಿ ಸಂತ್ರಸ್ತರಿಗೆ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ತೀವ್ರಗೊಳಿಸಬೇಕಾಗುತ್ತದೆ ಎಂದು ಉಪತಹಶೀಲ್ದಾರ್‌ಗೆ ತಿಳಿಸಿ ಪ್ರತಿಭಟನೆ ಹಿಂಪಡೆದರು.

ಲೋಳಸೂರ ಗ್ರಾಮದ ರುಕ್ಸಾನಾ ಪಟೇಲ ಬಾಯಿ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ‘ಪರಿಹಾರಕ್ಕಾಗಿ ಅಲೆದಾಡಿ ಸಾಕಾಗಿದೆ’ ಎಂದು ದೂರಿದರು.

‘ಕಳೆದ ವರ್ಷ ಅಗಸ್ಟ್‌ನಲ್ಲಿ ಉಂಟಾಗಿದ್ದ ಮಹಾಪೂರದಿಂದ ಗ್ರಾಮದಲ್ಲಿ ಹಲವಾರು ಮನೆಗಳು ಬಿದ್ದಿವೆ. ಆದರೆ, ಪರಿಹಾರ ವಿತರಣೆ ಸಮರ್ಪಕವಾಗಿ ನಡೆದಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಕೂಡಲೇ ತಹಶೀಲ್ದಾರ್‌ ಸ್ಥಳ ಪರಿಶೀಲನೆ ನಡೆಸಿ ಪರಿಹಾರ ಕೊಡಿಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು’ ಎಂದು ಗ್ರಾಮಸ್ಥರು ತಿಳಿಸಿದರು.

ರೈತ ಸಂಘದ ಮುಖಂಡರಾದ ಗಣಪತಿ ಈಳಿಗೇರ, ಮಾರುತಿ ಸನದಿ, ರಮೇಶ ಗೂದಿಗೊಪ್ಪ, ಪರಶುರಾಮ ಹಳ್ಳಿ, ಬಾಳೇಶ ಬಾಗೇವಾಡಿ, ಗ್ರಾಮದ ಮುಖಂಡರಾದ ಹಣಮಂತ ಹುಲಕುಂದ, ರಮೇಶ ಭಜಂತ್ರಿ, ನಾಗಪ್ಪ ಮಾದರ, ಆರ್.ವಿ. ದೊಡಮನಿ, ತಾಯವ್ವ ನಂದಿ, ರಾಮಪ್ಪ ನಾಯಿಕ, ಅರ್ಜುನ ನಂದಿ, ದುಂಡಪ್ಪ ಗುದಗನ್ನವರ, ಹೊಳೆಪ್ಪ ದೊಡಮನಿ, ಅಶೋಕ ಕಂಬಾರ, ಸಂಜು ಬಾಗೇವಾಡಿ, ನಿಂಗಪ್ಪ ಗೋಟುರ, ಲಖನ ಹುಲಕುಂದ, ರಾಜು ದೊಡಮನಿ, ರವಿ ಕಂಬಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT