ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟಪಾಡಿ ಹೆದ್ದಾರಿ ಪಕ್ಕದಲ್ಲಿ ತ್ಯಾಜ್ಯರಾಶಿ

ಸಾಂಕ್ರಾಮಿಕ ರೋಗದ ಭೀತಿ, ಸ್ಥಳೀಯಾಡಳಿತ, ಆರೋಗ್ಯಾಧಿಕಾರಿಗಳ ನಿರ್ಲಕ್ಷ್ಯ
Last Updated 20 ಮೇ 2018, 12:45 IST
ಅಕ್ಷರ ಗಾತ್ರ

ಶಿರ್ವ: ಕಟಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟಪಾಡಿ-ಶಿರ್ವ ಹೆದ್ದಾರಿ ಸಂಪರ್ಕ ರಸ್ತೆಯ ಬೊಕ್ಕಾಡಿ ರೈಲ್ವೇ ಸೇತುವೆ ಮೇಲೆ ಹೆದ್ದಾರಿ ಸಮೀಪವೇ ಕಣ್ಣಿಗೆ ರಾಚುವಂತೆ ಬೃಹತ್ ತ್ಯಾಜ್ಯ ರಾಶಿ ನಿರ್ಮಾಣವಾಗಿದ್ದರೂ ಸ್ಥಳೀಯಾಡಳಿತವು ವಿಲೇವಾರಿ ಮಾಡುವ ಗೋಜಿಗೆ ಹೋಗದೆ ವಿಪರೀತ ಮಳೆಯಿಂದಾಗಿ ತ್ಯಾಜ್ಯ ರಾಶಿ ಕೊಳೆತು ನಾರುತ್ತಿದೆ.

ಈ ಪ್ರದೇಶದಲ್ಲಿ ವಾಹನ ಚಾಲಕರು, ಪಾದಚಾರಿಗಳು ಮೂಗುಮುಚ್ಚಿಕೊಂಡೇ ಸಂಚಾರ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಈ ದಾರಿಯಲ್ಲಿ ಪ್ರತಿನಿತ್ಯ ಸಂಚರಿಸುವ ಗ್ರಾಮ ಪಂಚಾಯಿತಿ ಸದಸ್ಯರಾಗಲಿ, ಅಧಿಕಾರಿಗಳಾಗಲಿ ತ್ಯಾಜ್ಯ ಸಮಸ್ಯೆಗೆ ಯಾವುದೇ ಪರಿಹಾರ ಕಲ್ಪಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವಿಧಾನ ಸಭೆ ಚುನಾವಣೆಯ ಹಿನ್ನಲೆಯಲ್ಲಿ ಹೆಚ್ಚಿನೆಲ್ಲಾ ಕೆಲಸಗಳನ್ನು ಬದಿಗೊತ್ತಿ ಚುನಾವಣಾ ಡ್ಯೂಟಿ, ನೀತಿಸಂಹಿತೆ ಎಂಬುದಾಗಿ ಸಬೂಬು ಹೇಳುತ್ತಿದ್ದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಚುನಾವಣೆ ಮುಗಿದು ವಾರಕಳೆದರೂ ಈ ತ್ಯಾಜ್ಯರಾಶಿಗೆ ಮುಕ್ತಿ ನಿಡಲು ಮುಂದಾಗದಿರುವುದು ಗ್ರಾಮಸ್ಥರ ಸಿಟ್ಟಿಗೆ ಕಾರಣವಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆಯದಂತೆ ನಾಮಫಲಕವನ್ನಷ್ಟೇ ಹಾಕಿ ಜವಾಬ್ದಾರಿಯಿಂದ ನುಣುಚಿಕೊಂಡಿರುವ ಸ್ಥಳೀಯಾಡಳಿತ ತ್ಯಾಜ್ಯ ನಿರ್ವಹಣೆ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ತ್ಯಾಜ್ಯ ನಿರ್ವಹಣೆಗೆ ಆಧುನಿಕವಾಗಿ ಸಾಕಷ್ಟು ಸೌಕರ್ಯಗಳಿದ್ದರೂ ಕೂಡ ಅದರ ಸಮರ್ಪಕ ಬಳಕೆಗೆ ಗ್ರಾಮ ಪಂಚಾಯಿತಿಗಳು ಮನಸ್ಸು ಮಾಡಬೇಕಿದೆ.  ಸರ್ಕಾರದ ಇಲಾಖೆಗಳಿಂದ ಈ ಬಗ್ಗೆ ತರಬೇತಿ, ಕಾರ್ಯಾಗಾರಗಳು ಎಷ್ಟೇ ಆದರೂ ಅದರ ಅನುಷ್ಠಾನಗಳು ಕಡಿಮೆ.

ಹೆದ್ದಾರಿ ಪಕ್ಕದಲ್ಲೇ ಅದರಲ್ಲೂ ರೈಲ್ವೇ ಸೇತುವೆಯ ಮೇಲೆಯೇ ಕೊಳಿತ್ಯಾಜ್ಯ,ಪ್ಲಾಸ್ಟಿಕ್‌ ರಾಶಿ,ತರಕಾರಿ ಮೊಟ್ಟೆಗಳ ತ್ಯಾಜ್ಯ ಸೇರಿದಂತೆ ನಾನಾ ರೀತಿಯ ಕಸಗಳನ್ನು ಪ್ರತಿನಿತ್ಯ ಪೇಟೆಯಲ್ಲಿರುವ ಅಂಗಡಿಯವರು ಹಾಗೂ ಸ್ಥಳೀಯರು ತಂದು ಇಲ್ಲಿ ಬಿಸಾಡಿ ಹೋಗುವುದರಿಂದ ತ್ಯಾಜ್ಯರಾಶಿ ದಿನೇ ದಿನೇ ಬೃಹದಾಕಾರವಾಗಿ ಬೆಳೆಯುತ್ತಿದೆ. ಮಾತ್ರವಲ್ಲದೆ ತ್ಯಾಜ್ಯರಾಶಿಯಲ್ಲಿರುವ ಕರಗದ ಪ್ಲಾಸ್ಟಿಕ್ ತ್ಯಾಜ್ಯಗಳು ಸ್ಥಳೀಯರ ದನಗಳಿಗೆ ಆಹಾರವಾಗುತ್ತಿದೆ ಎಂಬುದು ಸಾರ್ವಜನಿಕರ ದೂರು. ಈಗ ಮಳೆ ನೀರಿನಲ್ಲಿ ಕೊಳೆತ ತಾಜ್ಯದಲ್ಲಿ ಈಗಾಗಲೇ ಸೊಳ್ಳೆಗಳು ಉತ್ಪತ್ತಿಯಾಗಿರುವುದರಿಂದ ಪರಿಸರದ ನಿವಾಸಿಗಳಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.

ಇದೇ ದಾರಿಯಲ್ಲಿ ಪ್ರತಿನಿತ್ಯ  ತೆರಳುವ ಸ್ಥಳೀಯ ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳೂ ಕೂಡಾ ಈ ಬಗ್ಗೆ ಗಮನ ಹರಿಸದಿರುವುದು ನಿಜಕ್ಕೂ ಶೋಚನೀಯ ಸಂಗತಿಯಾಗಿದೆ. ಸಾರ್ವಜನಿಕರ ಆರೋಗ್ಯದ ಮೇಲೆ ಆರೋಗ್ಯ ಇಲಾಖಾಧಿಕಾರಿಗಳಿಗೆ ಯಾವ ರೀತಿಯ ಮಹತ್ವ ಇದೆ ಎಂಬುದಕ್ಕೆ ಚೊಕ್ಕಾಡಿಯ ಈ ತ್ಯಾಜ್ಯರಾಶಿಯೇ ಸಾಕ್ಷಿಯಾಗಿದೆ ಎನ್ನುತ್ತಾರೆ ಸ್ಥಳೀಯರು.

ಕಟಪಾಡಿ ಶಾಲಾ ಸಮೀಪವೂ ತ್ಯಾಜ್ಯರಾಶಿ:
ಸರ್ಕಾರದಿಂದ ಸ್ವಚ್ಚ ಗ್ರಾಮ ಪ್ರಶಸ್ತಿ ವಿಜೇತ ಗ್ರಾಮ ಪಂಚಾಯಿತಿ ಎಂದು ಹೆಸರಾಗಿರುವ ಕಟಪಾಡಿ ಗ್ರಾಮ ಪಂಚಾಯಿತಿ ಆಡಳಿತವು ಚೊಕ್ಕಾಡಿಯ ಈ ಭಾಗದಲ್ಲಿ ಮಾತ್ರವಲ್ಲದೆ ಕಟಪಾಡಿ ಎಸ್.ವಿ.ಎಸ್. ಕಾಲೇಜಿನ ಸಮೀಪದಲ್ಲೂ ನಿರ್ಮಾಣಗೊಂಡಿರುವ ತ್ಯಾಜ್ಯ ರಾಶಿಯನ್ನು ವಿಲೇವಾರಿ ಮಾಡಲು ಹಿಂದೇಟು ಹಾಕುತ್ತಿದೆ ಎಂದು ಇಲ್ಲಿನ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಟಪಾಡಿಯಲ್ಲಿ ಸಮೀಪದಲ್ಲೇ ಕಾಲೇಜು ಹಾಗೂ ಮಸೀದಿ ಇದ್ದರೂ ಕೂಡಾ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಕ್ಕೆ ಕಾರಣವಾಗಿರುವ ತ್ಯಾಜ್ಯ ರಾಶಿ ದಿನೇದಿನೇ ಬೆಳೆಯುತ್ತಿದೆ. ಸ್ಥಳೀಯಾಡಳಿತವಾಗಲಿ,ಆರೋಗ್ಯಾಧಿಕಾರಿಗಳಾಗಲಿ ಶಾಲಾ ವಿದ್ಯಾರ್ಥಿಗಳ ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪೋಷಕರು ದೂರಿದ್ದಾರೆ.

ಗಾಳಿಗೆ ತೂರಿದ ಜಿಲ್ಲಾಧಿಕಾರಿ ಆದೇಶ: ಉಡುಪಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ವಹಿಸಬೇಕಾದ ಮುಂಜಾಗರೂಕತಾ ಕ್ರಮ, ಸಾರ್ವಜನಿಕ ಸ್ಥಳದಲ್ಲಿ ಎಸೆಯಲಾಗುವ ತ್ಯಾಜ್ಯ ರಾಶಿಗಳನ್ನು ನಿರ್ವಹಣೆ ಮಾಡಲು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತರಿಗೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಅವರು ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದರು. ಸಮೀಪದ ಕೆಲವೊಂದು ಗ್ರಾಮ ಪಂಚಾಯಿತಿಗಳಿಗೆ ಸ್ವತಃ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಸರ ಸ್ವಚ್ಛತೆ ಕಾಯ್ದುಕೊಳ್ಳುವಂತೆ ಗ್ರಾಮ ಪಂಚಾಯಿತಿಗಳಿಗೆ ಕಟ್ಟುನಿಟ್ಟಿನ ಆದೇಶವನ್ನೂ ಕೂಡಾ ನೀಡಿದ್ದರು. ಆದರೆ ಇಲ್ಲಿ ಜಿಲ್ಲಾಧಿಕಾರಿಗಳ ಆದೇಶವನ್ನು ಗಾಳಿಗೆ ತೂರಲಾಗಿದೆ ಎಂದು ಸ್ಥಳೀಯ ಸಾಮಾಜಿಕ ಮುಖಂಡ ಹರೀಶ್ ಹೇರೂರು ಆರೋಪಿಸಿದ್ದಾರೆ.

ಕೇಮಾರು ಸ್ವಾಮೀಜಿ ಅಸಮಾಧಾನ
ಕಟಪಾಡಿಯ ಚೊಕ್ಕಾಡಿ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಂಚರಿಸುವಾಗ ರೈಲ್ವೇ ಸೇತುವೆ ಮೇಲೆ ಕಳೆದ ಕೆಲವು ತಿಂಗಳಿಂದ ಬಿದ್ದುಕೊಂಡಿರುವ ತ್ಯಾಜ್ಯ ರಾಶಿ ಕೊಳೆತು ವಾಸನೆಯನ್ನು ಬೀರುತ್ತಿದೆ. ತಿಂಗಳುಗಳು ಕಳೆದರೂ ಈ ತ್ಯಾಜ್ಯ ರಾಶಿಯನ್ನು ನಿರ್ವಹಣೆ ಮಾಡಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿ ಈ ಬಗ್ಗೆ ಜಾಗೃತರಾಗದಿರುವುದು ನಿಜಕ್ಕೂ ವಿಷಾದನೀಯ. ಇನ್ನಾದರೂ ಗ್ರಾಮಪಂಚಾಯಿತಿ ಆಡಳಿತವು ಕ್ರೀಯಾಶೀಲರಾಗಿ ತ್ಯಾಜ್ಯರಾಶಿಗೆ ಮುಕ್ತಿ ದೊರಕಿಸಿ ಗ್ರಾಮಸ್ಥರು ಆರೋಗ್ಯವನ್ನು ಕಾಪಾಡಬೇಕು ಎಂದು ಕೇಮಾರು ಸಾಧನಾಶ್ರಮದ ಈಶವಿಠಲದಾಸ ಸ್ವಾಮೀಜಿ ಆಗ್ರಹಿಸಿದ್ದಾರೆ.

ವರದಿ:ಪ್ರಕಾಶ ಸುವರ್ಣ ಕಟಪಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT