ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ರಾಷ್ಟ್ರೀಯ ಹೆದ್ದಾರಿ ತಡೆ, 10 ಮಂದಿ ವಶಕ್ಕೆ

ರಾಷ್ಟ್ರೀಯ ತನಿಖಾ ಸಂಸ್ಥೆ ದಾಳಿ ಖಂಡಿಸಿ ದಿಢೀರ್‌ ಪ್ರತಿಭಟನೆ ನಡೆಸಿದ ಪಿಎಫ್‌ಐ ಕಾರ್ಯಕರ್ತರು
Last Updated 22 ಸೆಪ್ಟೆಂಬರ್ 2022, 15:52 IST
ಅಕ್ಷರ ಗಾತ್ರ

ಬೆಳಗಾವಿ: ದೇಶದ ವಿವಿಧೆಡೆ ಪಿಎಫ್‍ಐ ಮುಖಂಡರ ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದಾಳಿ ಮಾಡಿದ ಕ್ರಮ ಖಂಡಿಸಿ, ಸಂಘಟನೆಯ ಜಿಲ್ಲಾ ಘಟಕದ ಕಾರ್ಯಕರ್ತರು ತಾಲ್ಲೂಕಿನ ಕಾಕತಿ ಬಳಿ ಗುರುವಾರ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು. ಈ ವೇಳೆ 10 ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.

ಏಕಾಏಕಿ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಬಂದ ಸಂಘಟನೆಯ ಹಲವು ಮುಖಂಡರು ಹಾಗೂ ಕಾರ್ಯಕರ್ತರು, ಹೆದ್ದಾರಿ ಮಧ್ಯೆ ಕುಳಿತು ಸಂಚಾರ ಬಂದ್‌ ಮಾಡಿಸಿದರು. ‘ಯಾವುದೇ ದಾಖಲೆ, ನೋಟಿಸ್‌ ಇಲ್ಲದೇ ರಾಷ್ಟ್ರೀಯ ತನಿಖಾ ಸಂಸ್ಥೆಯು ಪಿಎಫ್‌ಐ ಸಂಘಟನೆಯ ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿದೆ. ಇದು ಅಮಾನವೀಯ. ಗೃಹಸಚಿವ ಅಮಿತ್‌ ಶಾ ಅವರ ಸೂಚನೆ ಮೇರೆಗೆ ಈ ದಾಳಿ ನಡೆಯುತ್ತಿದೆ. ಇಂಥ ದಬ್ಬಾಳಿಕೆ ನಡೆಯುವುದಿಲ್ಲ’ ಎಂದು ಘೋಷಣೆ ಕೂಗಿದರು.

ಸ್ಥಳಕ್ಕೆ ಬಂದಬೆಳಗಾವಿ ಗ್ರಾಮೀಣ ಎಸಿಪಿ ಗಿರೀಶ್, ಪಿಎಸ್ಐ ಗುರುನಾಥ ಅವರು ಧರಣಿ ನಿಲ್ಲಿಸುವಂತೆ ಸೂಚಿಸಿದರು. ‘ರಾಷ್ಟ್ರೀಯ ಹೆದ್ದಾರಿ ತಡೆ ಮಾಡಲು ಬರುವುದಿಲ್ಲ. ಇದು ಕಾನೂನ ಬಾಹಿರ’ ಎಂದು ತಿಳಿಸಿದರು. ಆದರೂ ಪ್ರತಿಭಟನಕಾರರು ಸ್ಥಳ ಬಿಟ್ಟು ಕದಲಲಿಲ್ಲ. ನಂತರ, ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ನವೀದ್‌ ಕಟಗಿ ಸಮೇತ ಮುಖಂಡರನ್ನು ವಶಕ್ಕೆ ಪಡೆದು ಪೊಲೀಸ್‌ ವಾಹನಗಳಲ್ಲಿ ಕರೆದುಕೊಂಡು ಹೋದರು. ಉಳಿದವರನ್ನು ಸ್ಥಳದಿಂದ ಚದುರಿಸಿದರು.

‘ನಾರಾ ತಕ್ದೀರ್‌ ಅಲ್ಲಾಹು ಅಕ್ಬರ್‌’, ‘ಆರ್‌ಎಸ್ಎಸ್ ಮುರ್ದಾಬಾದ್– ಪಿಎಫ್ಐ ಜಿಂದಾಬಾದ್’ ಘೋಷಣೆ ನಿರಂತರ ಮೊಳಗಿಸಿದರು.

15 ನಿಮಿಷ ಹೆದ್ದಾರಿ ಬಂದ್‌ ಮಾಡಿದ್ದರಿಂದ ಕಿಲೋಮೀಟರ್‌ವರೆಗೆ ವಾಹನಗಳು ನಿಂತವು. ನಂತರ ಪೊಲೀಸರು ಸಂಚಾರ ಸುಗಮಗೊಳಿಸಿದರು.

ಖಂಡನೆ: ‘ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಅಲ್ಪಸಂಖ್ಯಾತರ, ಹಿಂದುಳಿದವರ ವಿರೋಧಿ ಧೋರಣೆ ಅನುಸರಿಸುತ್ತಿದೆ. ಸರ್ಕಾರವನ್ನು ಪ್ರಶ್ನಿಸುವವರು, ಸಂವಿಧಾನ ಉಳಿಸಲು ಹೋರಾಡುವವರ ಮೇಲೆ ತನಿಖಾ ಸಂಸ್ಥೆಗಳನ್ನು ಬಳಸಲಾಗುತ್ತಿದೆ. ಇದು ಖಂಡನೀಯ’ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಘಟಕದ ಅಧ್ಯಕ್ಷ ತಾಹೇರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮದರಸಾಗಳ ಸರ್ವೆ ಹೆಸರಲ್ಲಿ ಅಲ್ಪಸಂಖ್ಯಾತ ವಿದ್ಯಾಸಂಸ್ಥೆಗಳಲ್ಲಿ ಕಿರುಕುಳ ನೀಡಲಾಗುತ್ತಿದೆ. ಭಯದ ವಾತಾವರಣ ಸೃಷ್ಟಿಸುವ ಹುನ್ನಾರ ನಡೆದಿದೆ. ಜೊತೆಗೆ ಸಾಮಾಜಿಕ ಹಾಗೂ ಧಾರ್ಮಿಕ ಸಂಘಟನೆಗಳನ್ನು ದಮನ ಮಾಡುವ ನಿರಂತರ ಕಾರ್ಯ ನಡೆದಿದೆ’ ಎಂದೂ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT