‘ಪೂರಕ ಕ್ರಮಕೈಗೊಳ್ಳದಿದ್ದರೆ ಬೃಹತ್‌ ಹೋರಾಟ’

7
ಬೆಳಗಾವಿ 2ನೇ ರಾಜಧಾನಿ;

‘ಪೂರಕ ಕ್ರಮಕೈಗೊಳ್ಳದಿದ್ದರೆ ಬೃಹತ್‌ ಹೋರಾಟ’

Published:
Updated:

ಬೆಳಗಾವಿ: ರಾಜ್ಯದ 2ನೇ ರಾಜಧಾನಿಯನ್ನಾಗಿ ಬೆಳಗಾವಿಯನ್ನು ಘೋಷಿಸಲಾಗುವುದೆಂದು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ 2–3 ತಿಂಗಳಲ್ಲಿ ಅದಕ್ಕೆ ಪೂರಕವಾಗಿ ನಿರ್ಣಯಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನೂರಾರು ಜನ ಮಠಾಧೀಶರು ಹಾಗೂ ಸಾವಿರಾರು ಜನರನ್ನು ಸೇರಿಸಿಕೊಂಡು ಬೃಹತ್‌ ಹೋರಾಟ ನಡೆಸಲಾಗುವುದು ಎಂದು ಉತ್ತರ ಕರ್ನಾಟಕ ವಿಕಾಸ ವೇದಿಕೆಯ ಸದಸ್ಯ ಅಶೋಕ ಪೂಜಾರಿ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉತ್ತರ ಕರ್ನಾಟಕವನ್ನು ಸಂಪೂರ್ಣ ಅಭಿವೃದ್ಧಿಪಡಿಸಬೇಕು ಎನ್ನುವುದು ನಮ್ಮ ಬೇಡಿಕೆ. ಅಭಿವೃದ್ಧಿಯಾಗದಿದ್ದರೆ ಪ್ರತ್ಯೇಕ ರಾಜ್ಯಕ್ಕೆ ಹೋರಾಟ ನಡೆಸಲಾಗುವುದು. ಇದಕ್ಕೆ ಅವಕಾಶ ಕೊಡಬಾರದು ಎಂದಾದರೆ ತಕ್ಷಣ ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ಪ್ರಮುಖ ಇಲಾಖೆಗಳ ಕಚೇರಿಗಳನ್ನು ಸ್ಥಳಾಂತರಿಸಬೇಕು ಹಾಗೂ ಉತ್ತರ ಕರ್ನಾಟಕವನ್ನು ಅಭಿವೃದ್ಧಿಪಡಿಸಬೇಕು’ ಎಂದು ಒತ್ತಾಯಿಸಿದರು.

ಮಹಾಜನ್‌ ಆಯೋಗದ ವರದಿ ಪ್ರಕಾರ, ಬೆಳಗಾವಿ ಕರ್ನಾಟಕಕ್ಕೆ ಸೇರಿದೆ. ಬೆಳಗಾವಿಯ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರ ಕ್ರಮಕೈಗೊಳ್ಳಲು ಹಾಗೂ 2ನೇ ರಾಜಧಾನಿಯನ್ನಾಗಿ ಘೋಷಿಸಲು ಸರ್ವಸ್ವತಂತ್ರವಾಗಿದೆ. ಇದರಲ್ಲಿ ಮಹಾರಾಷ್ಟ್ರದ ಶಿವಸೇನೆ ಮುಖಂಡರು ಮೂಗು ತೂರಿಸುವ ಅಗತ್ಯವಿಲ್ಲ ಎಂದು ಖಂಡಿಸಿದರು.

ರಾಜ್ಯದ ಕೆಲವು ಮುಖಂಡರು ಕೂಡ ರಾಜಧಾನಿಗೆ ವಿರೋಧವಾಗಿ ಮಾತನಾಡುತ್ತಿದ್ದಾರೆ. ಇಂತಹ ಮಾತುಗಳಿಗೆ ಕಿವಿಗೊಡದೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿ ತಕ್ಷಣ ನಿರ್ಣಯ ಪ್ರಕಟಿಸಬೇಕು ಎಂದು ಆಗ್ರಹಿಸಿದ ಅವರು, ಅಭಿವೃದ್ಧಿಯನ್ನು ನಿರ್ಲಕ್ಷಿಸಿದರೆ ಪುನಃ ಪ್ರತ್ಯೇಕತೆಯ ಕೂಗು ಬಲಗೊಳ್ಳುವುದರಲ್ಲಿ ಅನುಮಾನವಿಲ್ಲ ಎಂದು ಎಚ್ಚರಿಕೆ ನೀಡಿದರು.

ರಾಜಧಾನಿ ಮಾಡುವ ನಿರ್ಧಾರಕ್ಕೆ ಉತ್ತರ ಕರ್ನಾಟಕ ಶಾಸಕರು ಹಾಗೂ ಸಚಿವರು ಶಾಸನಸಭೆಯಲ್ಲಿ ಸರ್ಕಾರದ ಪರ ಒತ್ತಾಸೆಯಾಗಿ ನಿಲ್ಲಬೇಕು. ಒಂದು ವೇಳೆ ಸರ್ಕಾರ ತನ್ನ ಮಾತಿನಿಂದ ಹಿಂದೆ ಸರಿದರೆ ಎಲ್ಲರೂ ರಾಜೀನಾಮೆ ನೀಡಿ, ಹೋರಾಟಕ್ಕೆ ಇಳಿಯಬೇಕು ಎಂದು ಹೇಳಿದರು.

ಪ್ರತ್ಯೇಕ ಧ್ವಜದ ಪ್ರಸ್ತಾಪ ಇರಲಿಲ್ಲ; ಮೊನ್ನೆ ಸುವರ್ಣ ವಿಧಾನಸೌಧದ ಎದುರು ಮಠಾಧೀಶರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆಯಾಗಲಿ ಅಥವಾ ಪ್ರತ್ಯೇಕ ಧ್ವಜ ಹಾರಿಸುವ ಪ್ರಸ್ತಾಪ ಇರಲಿಲ್ಲ. ಸುವರ್ಣ ವಿಧಾನಸೌಧಕ್ಕೆ ಶಕ್ತಿ ತುಂಬಬೇಕು ಹಾಗೂ  ಉತ್ತರ ಕರ್ನಾಟಕವನ್ನು ಅಭಿವೃದ್ಧಿಪಡಿಸಬೇಕು ಎನ್ನುವುದಷ್ಟೇ ನಮ್ಮ ಬೇಡಿಕೆಯಾಗಿತ್ತು ಎಂದು ಅವರು ಸ್ಪಷ್ಟಪಡಿಸಿದರು.

‘ನಮ್ಮ ಮುಖ್ಯ ಉದ್ದೇಶವು ಉತ್ತರ ಕರ್ನಾಟಕದ ಅಭಿವೃದ್ಧಿಯಾಗಬೇಕು. ಇಲ್ಲದಿದ್ದರೆ ಪ್ರತ್ಯೇಕ ರಾಜ್ಯವಾಗ ಬೇಕು ಎನ್ನುವುದಾಗಿತ್ತು. ಆದರೆ, ಒಂದೆರಡು ಸಂಘಟನೆಗಳು ದುಡುಕಿನ ನಿರ್ಧಾರ ಕೈಗೊಂಡು ಜುಲೈ 2ರಂದು ಬಂದ್‌ಗೆ ಕರೆ ನೀಡಿದ್ದವು. ಈ ಭಾಗದಲ್ಲಿ ಹಲವು ಸಂಘಟನೆಗಳು ಇವೆ. ಇವುಗಳ ಅಭಿಪ್ರಾಯವನ್ನು ಅವು ಪಡೆದಿರಲಿಲ್ಲ. ಹೀಗಾಗಿ ಬಂದ್‌ ಕರೆ ಯಶಸ್ವಿಯಾಗಲಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖಂಡರಾದ ಕಲ್ಯಾಣರಾವ ಮುಚಳಂಬಿ, ಆರ್‌.ಎಸ್‌. ದರ್ಗೆ, ಟಿ.ಟಿ. ಮುರಕಟ್ನಾಳ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !