ಗುರುವಾರ , ಸೆಪ್ಟೆಂಬರ್ 23, 2021
22 °C
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಡಾ. ಅಂಥೋಣಿ ಸೂಚನೆ;

ಬೆಳಗಾವಿ| ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು 14 ದಿನಗಳ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘14 ದಿನಗಳ ಒಳಗಾಗಿ ಪ್ರತಿಯೊಂದು ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಬೇಕು. ಇದರ ಜೊತೆಗೆ ಮಕ್ಕಳ ಸಹಾಯವಾಣಿಯ ಫಲಕವನ್ನೂ ಅಳವಡಿಸಬೇಕು’ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಡಾ. ಅಂಥೋಣಿ ಸೆಬಾಸ್ಟಿಯನ್ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶಾಲೆ ಬಿಟ್ಟ ಮಕ್ಕಳು ಹಾಗೂ ಆರ್.ಟಿ.ಇ ಕುರಿತು ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಿರುವ ಶೂ, ಸಮವಸ್ತ್ರಗಳ ಬಗ್ಗೆ ಆಯೋಗಕ್ಕೆ ವರದಿ ಸಲ್ಲಿಸಬೇಕು’ ಎಂದು ಸೂಚನೆ ನೀಡಿದರು.

‘7 ವಲಯಗಳಲ್ಲಿ 45 ಮಕ್ಕಳು ಶಾಲೆಯಿಂದ ದೂರ ಉಳಿದಿದ್ದಾರೆ. ಆ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಬೆಳಗಾವಿ ಗಡಿ ಜಿಲ್ಲೆ ಆಗಿರುವುದರಿಂದ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗಿರುತ್ತದೆ’ ಎಂದು
ಅಧಿಕಾರಿಗಳು ಹೇಳಿದರು.

ಆಯೋಗದ ಸದಸ್ಯ ಡಿ. ಶಂಕ್ರಪ್ಪ ಮಾತನಾಡಿ, ‘ವಲಸೆ ಬಂದವರ ಮಕ್ಕಳಿಗಾಗಿ ಟೆಂಟ್ ಶಾಲೆ ನಿರ್ಮಿಸಬೇಕು’ ಎಂದರು.

ಆಯೋಗದ ಸದಸ್ಯ ಎಚ್.ಸಿ.ರಾಘವೇಂದ್ರ ಮಾತನಾಡಿ, ‘ಯಾವುದೇ ಒಂದು ಮಗು ಕೂಡ ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣವು ಮಕ್ಕಳ ಮೂಲಭೂತ ಹಕ್ಕು. ಯಾವುದಾದರೂ ಮಗು ಶಿಕ್ಷಣದಿಂದ ವಂಚನೆಯಾಗಿ, ಶೋಷಣೆಗೆ ಒಳಗಾದರೆ ಸಂಬಂಧಿಸಿದ ಎಲ್ಲ ಅಧಿಕಾರಗಳ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಅವಕಾಶಗಳಿವೆ’ ಎಂದು ಹೇಳಿದರು.

ಸದಸ್ಯರಾದ ಭಾರತಿ ಎಸ್. ಡಬ್ಲು. ಮಾತನಾಡಿದರು. ಡಿಡಿಪಿಐ ಗಜಾನನ ಮನ್ನಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬಾಲನ್ಯಾಯ ಕಾಯ್ದೆ ಅನುಷ್ಠಾನದ ಸಭೆ:

‘ಜಿಲ್ಲೆಯಲ್ಲಿರುವ ವಸತಿ ಶಾಲೆಗಳಲ್ಲಿ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತು ಸತ್ಯಶೋಧನೆ ಕೈಗೊಂಡು ಆಯೋಗಕ್ಕೆ
ವರದಿ ಸಲ್ಲಿಸಬೇಕು’ ಎಂದು ಅಧ್ಯಕ್ಷ ಡಾ. ಅಂಥೋಣಿ ಸೆಬಾಸ್ಟಿಯನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಾಲ ನ್ಯಾಯ ಕಾಯ್ದೆ 2015ರ ಅನುಷ್ಠಾನದ ಕುರಿತು ನಡೆದ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.

‘ವಸತಿ ಶಾಲೆಗಳಿಗೆ ಅನಿರೀಕ್ಷಿತ ಭೇಟಿ ಪರಿಶೀಲಿಸಲು ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಸಂಸ್ಥೆಗಳ ಸದಸ್ಯರನ್ನೊಳಗೊಂಡ ಪ್ರತ್ಯೇಕ ತಂಡಗಳು ಕಾಲಕಾಲಕ್ಕೆ ವಸತಿನಿಲಯಗಳಿಗೆ ಭೇಟಿ ಪರಿಶೀಲಿಸಬೇಕು’ ಎಂದು ನಿರ್ದೇಶನ ನೀಡಿದರು.
 
ಸಮುದಾಯಗಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು, ಬಾಲ್ಯ ವಿವಾಹ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು, ಬಾಲ್ಯ ವಿವಾಹ ಕಾಯ್ದೆ ಬಗ್ಗೆ ಅರಿವು ಮೂಡಿಸುವುದು, ಬಾಲ ನ್ಯಾಯ ಕಾಯ್ದೆ ಅನ್ವಯ ದಾಖಲಾದ ಪ್ರಕರಣಗಳು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ವಿವಿಧ ಕಾಯ್ದೆಗಳ ಬಗ್ಗೆ ಅರಿವು ಮೂಡಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು