ಭಾನುವಾರ, ಸೆಪ್ಟೆಂಬರ್ 22, 2019
25 °C
ಶಾಸಕ ಅನಿಲ ಬೆನಕೆ ಹೇಳಿಕೆ

ಸಂತ್ರಸ್ತರಿಗೆ ಪರಿಹಾರ ಒದಗಿಸಲು ಕ್ರಮ

Published:
Updated:
Prajavani

ಬೆಳಗಾವಿ: ‘ಜಿಲ್ಲೆಯಲ್ಲಿ ಧಾರಾಕಾರ ಮಳೆ ಮತ್ತು ಪ್ರವಾಹದಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಸರ್ಕಾರದಿಂದ ಈಗಾಗಲೇ ಪರಿಹಾರ ನೀಡಲಾಗುತ್ತಿದೆ. ಹುಕ್ಕೇರಿ ಶ್ರೀಗಳ ನೇತೃತ್ವದಲ್ಲಿ ನಡೆದ ಚಿಂತನ, ಮಂಥನ ಅನುಷ್ಠಾನದ ನಿರ್ಣಯವನ್ನು ಕೂಡ ಸಲ್ಲಿಸಲಾಗುವುದು’ ಎಂದು ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ತಿಳಿಸಿದರು.

ಇಲ್ಲಿನ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಭಾರಿ ಮಳೆ, ನೆರೆ ಹಾವಳಿ ಹಾಗೂ ಅದರಿಂದಾದ ಹಾನಿ ಮತ್ತು ಪರಿಹಾರದ ವಿಷಯ ಕುರಿತು ಭಾನುವಾರ ನಡೆದ ಚಿಂತನ–ಮಂಥನ–ಅನುಷ್ಠಾನ ಸಭೆಯಲ್ಲಿ ಮಾತನಾಡಿದರು.

‘ನಗರದ ಉತ್ತರ ಹಾಗೂ ದಕ್ಷಿಣ ಕ್ಷೇತ್ರದಲ್ಲಿ ಮಳೆಯಿಂದ, ಚಿಕ್ಕೋಡಿ, ರಾಮದುರ್ಗ, ಅಥಣಿ ಹಾಗೂ ಗೋಕಾಕ ತಾಲ್ಲೂಕಿನಲ್ಲಿ ಪ್ರವಾಹದಿಂದ ಅಪಾರ ಹಾನಿಯಾಗಿದೆ. ಸರ್ಕರವು ನೊಂದವರಿಗೆ ಹೆಚ್ಚಿನ ಪರಿಹಾರ ನೀಡಲು ಶ್ರಮಿಸುತ್ತಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸಿತಾರಾಮನ್‌ ಸಮೀಕ್ಷೆ ನಡೆಸಿದ್ದಾರೆ. ಕೇಂದ್ರದ ಅಧ್ಯಯನ ತಂಡವೂ ಬಂದು ಹೋಗಿದೆ. ಶೀಘ್ರದಲ್ಲೇ ಕೇಂದ್ರ ಸರ್ಕಾರದಿಂದ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ಅನುದಾನ ದೊರೆಯುವ ವಿಶ್ವಾಸ ಇದೆ’ ಎಂದರು.

‘ಪ್ರತಿ ಹತ್ತು ವರ್ಷಕ್ಕೊಮ್ಮೆ ಬೆಳಗಾವಿಯಲ್ಲಿ ಇಂತಹ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಇನ್ನೂ ಹೆಚ್ಚು ಚಿಂತನೆ ನಡೆಯಬೇಕು’ ಎಂದು ಹೇಳಿದರು.

ಬಿಜೆಪಿ ಮುಖಂಡ ರಾಜಕುಮಾರ ಟೋಪಣ್ಣವರ ಮಾತನಾಡಿ, ‘ಗ್ರಾಮೀಣ ಭಾಗದ ಜಳಚರಂಡಿಗಳು ಒತ್ತುವರಿಯಾಗಿವೆ. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗುತ್ತಿದೆ’ ಎಂದರು.

ಬಿಜೆಪಿ ಮುಖಂಡ ಆರ್.ಎಸ್. ಮುತಾಲಿಕ ದೇಸಾಯಿ ಮಾತನಾಡಿ, ‘ಬೆಳಗಾವಿಯಲ್ಲಿ ಸಪ್ತ ನದಿಗಳು ಹರಿಯುತ್ತವೆ. ಈ ನೀರನ್ನು ಸಂಗ್ರಹಿಸುವ ಯೋಜನೆಯನ್ನು ಸರ್ಕಾರದ ಮಟ್ಟದಲ್ಲಿ ಮಾಡಬೇಕು. ನದಿ ದಡದಲ್ಲಿರುವ ಗ್ರಾಮಗಳ ಸ್ಥಳಾಂತರ ಮಾಡುವಾಗ ಅಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಸಾನ್ನಿಧ್ಯ ವಹಿಸಿದ್ದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ನೆರೆ ಹಾವಳಿ ತಡೆಯಲು ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸುವುದು ಎಲ್ಲರ ಜವಾಬ್ದಾರಿಯಾಗಿದೆ. ಪ್ರವಾಹ ಬಾಧಿತ ಜನರ ಸಂಕಷ್ಟ ನೋಡಲಾಗದು. ನಾನೇ ಮುಂದೆ ನಿಂತು ಸಂತ್ರಸ್ತರಿಗೆ ಕೈಲಾದಷ್ಟು ಸಹಾಯ ಮಾಡಿದ್ದೇನೆ. ಜಾನುವಾರುಗಳಿಗೂ ಮೇವು ಒದಗಿಸಿದ್ದೇವೆ. ನೆರೆಯಿಂದ ತತ್ತರಿಸಿದ ಜನರಿಗೆ ಉತ್ತಮ ಸೂರು ಕಲ್ಪಿಸಬೇಕು’ ಎಂದು.

ಮುಖಂಡರಾದ ಅರವಿಂದ ಪಾಟೀಲ, ವಿರೂಪಾಕ್ಷಯ್ಯ ನೀರಲಿಗಿಮಠ, ನಂದೀಶ ಪಾಟೀಲ, ಎ.ವಿ. ಬದಾಮಿ, ಬಿ.ಎಸ್. ಪಾಟೀಲ, ಮುಕ್ತಾರ ಪಠಾಣ ಪಾಲ್ಗೊಂಡಿದ್ದರು.

Post Comments (+)