ಸಂಜೆ 7ರ ನಂತರ ಉದ್ಯಾನಗಳು ಬಂದ್!

7
ಪೊಲೀಸ್‌ ಆಯುಕ್ತ ಡಿ.ಸಿ. ರಾಜಪ್ಪ

ಸಂಜೆ 7ರ ನಂತರ ಉದ್ಯಾನಗಳು ಬಂದ್!

Published:
Updated:
Deccan Herald

ಬೆಳಗಾವಿ: ‘ನಗರದಲ್ಲಿ ಮಾದಕ ವಸ್ತುಗಳ ಸೇವನೆಗೆ ಕಡಿವಾಣ ಹಾಕುವ ಉದ್ದೇಶದಿಂದ, ಪಾಲಿಕೆ ವ್ಯಾಪ್ತಿಯ ಎಲ್ಲ ಉದ್ಯಾನಗಳನ್ನು ಸಂಜೆ 7ರ ನಂತರ ಬಂದ್ ಮಾಡಲಾಗುವುದು. ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗುವುದು’ ಎಂದು ಪೊಲೀಸ್‌ ಆಯುಕ್ತ ಡಿ.ಸಿ. ರಾಜಪ್ಪ ತಿಳಿಸಿದರು.

‘ಕತ್ತಲಾಗುತ್ತಿದ್ದಂತೆಯೇ ಉದ್ಯಾನಗಳಲ್ಲಿ, ಮಾದಕ ವಸ್ತುಗಳನ್ನು ಸೇವಿಸಲಾಗುತ್ತಿದೆ ಎಂಬ ಮಾಹಿತಿ ಇದೆ. ಹೀಗಾಗಿ ಇದನ್ನು ತಡೆಯಲು, ಪಾಲಿಕೆಯ ಸಹಯೋಗದಲ್ಲಿ ಅಭಿಯಾನ ಕೈಗೊಳ್ಳಲಾಗಿದೆ. ಉದ್ಯಾನಗಳ ಬಳಿ ಪೆಟ್ರೋಲಿಂಗ್‌ ನಡೆಸಿ, ನಿಗಾ ವಹಿಸಲಾಗುವುದು. ಶುಕ್ರವಾರದಿಂದಲೇ ಇದು ಅನ್ವಯವಾಗಲಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಪಾಲಿಕೆಯಿಂದಲೂ ಭದ್ರತಾ ಸಿಬ್ಬಂದಿ ನಿಯೋಜಿಸುತ್ತಾರೆ. ಈ ಕುರಿತು ಆಯುಕ್ತ ಶಶಿಧರ ಕುರೇರ ಅವರೊಂದಿಗೂ ಚರ್ಚಿಸಲಾಗಿದೆ’ ಎಂದು ಹೇಳಿದರು.

ಕೋಟೆ ಕೆರೆ, ಕ್ಯಾಂಪ್: ‘ಮುಖ್ಯವಾಗಿ ಅಶೋಕ ವೃತ್ತದಲ್ಲಿರುವ ಕೋಟೆ ಕೆರೆಯ ಆವರಣದಲ್ಲಿ ಬಹಳಷ್ಟು ಅವ್ಯವಹಾರ ನಡೆಯುತ್ತವೆ ಎಂಬ ಮಾಹಿತಿ ಇದೆ. ಅಲ್ಲಿ ಹೆಚ್ಚಿನ ನಿಗಾ ವಹಿಸಲಾಗುವುದು. ಅಲ್ಲದೇ, ಕೆಎಲ್ಇ ಸೇರಿದಂತೆ ವಿವಿಧ ಕಾಲೇಜುಗಳ ಎದುರು ಮತ್ತು ಕ್ಯಾಂಪ್ ಏರಿಯಾದಲ್ಲೂ ಪೊಲೀಸರು ಕಣ್ಣಿಡುತ್ತಾರೆ. ನಿತ್ಯವೂ ಒಂದೊಂದು ಕಾಲೇಜು ಹಾಗೂ ಹಾಸ್ಟೆಲ್‌ಗಳಿಗೆ ತೆರಳಿ, ಆಡಳಿತ ಮಂಡಳಿಗಳಿಗಿರುವ ಜವಾಬ್ದಾರಿ ಕುರಿತು ತಿಳಿಸಿಕೊಡಲಾಗುವುದು. ಯಾವುದಾದರೂ ಕಾಲೇಜಿನಲ್ಲಿ ಮಾದಕ ವಸ್ತು ಸೇವಿಸುವವರು ಸಿಕ್ಕಿಬಿದ್ದರೆ, ಆ ಕಾಲೇಜಿಗೆ ನೀಡುವ ಸೌಲಭ್ಯವನ್ನು ತಡೆಹಿಡಿಯುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ಮಾದಕ ವಸ್ತುಗಳಿಗೆ ಸಂಬಂಧಿಸಿದಂತೆ, ಜನವರಿಯಿಂದ ಈವರೆಗೆ 11 ಪ್ರಕರಣ ದಾಖಲಿಸಿ, 52 ಮಂದಿಯನ್ನು ಬಂಧಿಸಲಾಗಿದೆ. 24 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ಮಾದಕ ವಸ್ತುಗಳನ್ನು ಬಳಸುವುದನ್ನು ತಪ್ಪಿಸಲು ಪೊಲೀಸ್ ಕಮಿಷನರೇಟ್‌ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಯಾವ್ಯಾವುದೋ ಡ್ರಗ್ಸ್‌ ಬಳಸುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತವೆ. ಆದರೆ, ಯಾರ ಬಳಿಯೂ ಖಚಿತ ಮಾಹಿತಿ ಇಲ್ಲ. ಸಾರ್ವಜನಿಕರು ಮಾಹಿತಿ ಸಿಕ್ಕಿರೆ ಪೊಲೀಸರಿಗೆ ತಿಳಿಸಿ ಸಹಕರಿಸಬೇಕು’ ಎಂದು ಕೋರಿದರು.

ಹಳೆಯ ಕಟ್ಟಡಗಳ ಬಳಿ: ‘ಕಾಲೇಜುಗಳು ಹಾಗೂ ಹಾಸ್ಟೆಲ್‌ಗಳಲ್ಲಿ ಆ್ಯಂಟಿ ಡ್ರಗ್ಸ್‌ ಸಮಿತಿ ರಚಿಸುವಂತೆ ಸೂಚಿಸಲಾಗುವುದು. ಪೊಲೀಸ್‌ ಇಲಾಖೆಯೊಂದರಿಂದಲೇ ಎಲ್ಲವನ್ನೂ ತಡೆಯುವುದಕ್ಕೆ ಸಾಧ್ಯವಾಗುವುದಿಲ್ಲ’ ಎಂದರು.

‘ಎಲ್ಲ ಚೆಕ್‌ಪೋಸ್ಟ್‌ಗಳಲ್ಲೂ ಪ್ರತಿ ವಾಹನಗಳನ್ನೂ ‍ತಪಾಸಣೆಗೆ ಒಳಪಡಿಸಲಾಗುತ್ತಿದೆ. ಮಹಾರಾಷ್ಟ್ರ ಹಾಗೂ ಜಿಲ್ಲಾ ಪೊಲೀಸರ ಜೊತೆ ಸಂಪರ್ಕದಲ್ಲಿದ್ದೇವೆ. ‘ಶಕ್ತಿ’ ಪೆಟ್ರೋಲಿಂಗ್ ವಾಹನಗಳು ಸಂಚರಿಸುತ್ತಿವೆ’ ಎಂದು ವಿವರಿಸಿದರು.

‘ಕಿಡಿಗೇಡಿಗಳು ಹಳೆಯ ಅಥವಾ ಶಿಥಿಲಗೊಂಡ ಕಟ್ಟಡಗಳ ಬಳಿ ಚಟುವಟಿಕೆಗಳನ್ನು ನಡೆಸುತ್ತಾರೆ ಎನ್ನುವ ಮಾಹಿತಿ ಇದೆ. ಹೀಗಾಗಿ, ಅಲ್ಲೂ ನಿಗಾ ವಹಿಸಲಾಗಿದೆ. ನಂಬರ್‌ ಪ್ಲೇಟ್‌ ಅಳವಡಿಸದ ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ’ ಎಂದು ಪ್ರತಿಕ್ರಿಯಿಸಿದರು. ಡಿಸಿಪಿಗಳಾದ ಮಹಾನಿಂಗ ನಂದಗಾವಿ, ಸೀಮಾ ಲಾಟ್ಕರ್‌ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !