ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಇಲಾಖೆ ಕಾಳಜಿ ತೋರಿತು, ಪ್ರಯಾಣಿಕರು ನಿರ್ಲಕ್ಷ್ಯ ಮೆರೆದರು

ರೈಲು ನಿಲ್ದಾಣದಲ್ಲಿ ಅಳವಡಿಕೆ; ಹಾಳಾದ ಬಟ್ಟೆ, ಹರಿದ ಚಪ್ಪಲಿ ಇಡಬೇಡಿ
Last Updated 21 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ರೈಲ್ವೆ ಇಲಾಖೆಯು ಕಡುಬಡವರು ಅಥವಾ ಅಗತ್ಯವುಳ್ಳವರಿಗೆ ಅನುಕೂಲವಾಗಲೆಂದು ಇಲ್ಲಿನ ರೈಲು ನಿಲ್ದಾಣದ ಪ್ರವೇಶ ದ್ವಾರದ ಆವರಣದಲ್ಲಿ ಈಚೆಗೆ ‘ಪಬ್ಲಿಕ್‌ ಸ್ಟೋರ್‌’ (7x2x7‌ ಅಡಿಯ ರ‍್ಯಾಕ್) ಅಳವಡಿಸಿ ‘ಮಾನವೀಯ ಕಾಳಜಿ’ ಮೆರೆದಿದೆ. ಆದರೆ, ಅಲ್ಲಿಗೆ ಕೆಲವರು ಹಾಳಾದ ಮತ್ತು ಬಹಳ ಕೊಳೆಯಾದ ಬಟ್ಟೆಗಳನ್ನು ಹಾಗೂ ಹರಿದ ಚಪ್ಪಲಿಗಳನ್ನು ಇಟ್ಟು ಹೋಗಿದ್ದಾರೆ.

ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ನೆರವಿನೊಂದಿಗೆ ಲಯನ್ಸ್‌ ಕ್ಲಬ್‌ ಆಫ್‌ ಬೆಳಗಾವಿ ಹಾಗೂ ಹುಬ್ಬಳ್ಳಿ ಪರ್ಲ್ಸ್‌ ಲಯನ್ಸ್‌ ಕ್ಲಬ್‌ ವತಿಯಿಂದ ಇಡಲಾಗಿರುವ ಈ ಸ್ಟೋರ್‌ಗೆ ‘ವಾಲ್‌ ಆಫ್‌ ಕೈಂಡ್‌ನೆಸ್‌’ (ಕಾರುಣ್ಯದ ಗೋಡೆ) ಎಂದು ಹೆಸರಿಸಲಾಗಿದೆ. ಅಲ್ಲಿ ಪ್ಯಾಂಟ್, ಶರ್ಟ್‌, ಚಪ್ಪಲಿಗಳು, ಕೊಡೆ, ಹೊದಿಕೆ, ಟವಲ್‌, ಪಂಚೆ ಮೊದಲಾದವುಗಳನ್ನು ಇಡಬಹುದು ಎಂದು ಚಿತ್ರಗಳ ಸಮೇತ ತಿಳಿಸಿ ಅರಿವು ಮೂಡಿಸಲಾಗಿದೆ.

ಸ್ಪಷ್ಟವಾದ ಮನವಿ: ‘ಈ ಪಬ್ಲಿಕ್‌ ಸ್ಟೋರ್‌ ಅನ್ನು ಅಗತ್ಯವಿರುವವರಿಗೆ ಮಾತ್ರ ಇಡಬಹುದಾಗಿದೆ. ಸಾರ್ವಜನಿಕರು ತಮ್ಮ ಸುಸ್ಥಿತಿಯಲ್ಲಿರುವ ಬಟ್ಟೆ, ಹಾಸಿಗೆ, ಪಾದರಕ್ಷೆ ಅಥವಾ ಇನ್ಯಾವುದೇ ಮರು ಬಳಸುವಂತಹ ವಸ್ತುಗಳನ್ನು ಇಲ್ಲಿ ಇಟ್ಟು ಸಹಾಯ ಮಾಡಬಹುದು. ಈ ವಸ್ತುಗಳನ್ನು ಅವಶ್ಯವಿರುವವರು ತನ್ನ ಸ್ವಂತಕ್ಕೆ ಮಾತ್ರ ಬಳಸಿಕೊಳ್ಳಬಹುದು. ದಯವಿಟ್ಟು ವಸ್ತುಗಳನ್ನು ಸ್ವಚ್ಛ ಹಾಗೂ ಅಂದವಾಗಿಡಿ’ ಎಂದು ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಬರೆಯಲಾಗಿದೆ. ಈ ಮೂಲಕ ನಿರ್ಗತಿಕರಿಗೆ ಸಹಾಯವಾಗಲಿ ಎನ್ನುವುದು ಇಲಾಖೆಯವರು ಹಾಗೂ ದಾನಿಗಳ ಆಶಯ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಕೆಲವರು ಮರು ಬಳಸಲು ಸಾಧ್ಯವಾಗದಂತಹ ಸ್ಥಿತಿಯಲ್ಲಿರುವ ಅಂಗಿಗಳ, ಪ್ಯಾಂಟ್‌ಗಳು ಹಾಗೂ ಚಪ್ಪಲಿಗಳನ್ನು ಇಟ್ಟಿದ್ದಾರೆ. ಪರಿಣಾಮ, ಅಲ್ಲಿರುವ ಬಹುತೇಕ ವಸ್ತುಗಳನ್ನು ತೆಗೆದುಕೊಳ್ಳಲು ಹೆಚ್ಚಿನವರು ಮುಂದೆ ಬಂದಿಲ್ಲ!

ರೈಲು ನಿಲ್ದಾಣದಲ್ಲಿ ಅಸಹಾಯಕರು, ನಿರ್ಗತಿಕರ ಓಡಾಟ ಸಾಮಾನ್ಯ. ಅವರಿಗಾಗಿ ಸ್ಟೋರ್‌ ತೆರೆದಿರುವುದು ಅನುಕೂಲಕಾರಿಯಾಗಿದೆ. ಅದರ ಪಕ್ಕದಲ್ಲೇ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಹೀಗಾಗಿ, ದೂಳಿನ ಕಣಗಳಿಂದಾಗಿ ಸ್ಟೋರ್‌ನಲ್ಲಿನ ಬಟ್ಟೆ ಮೊದಲಾದ ವಸ್ತುಗಳು ಕೊಳಕಾಗುತ್ತಿವೆ. ಅಲ್ಲದೇ, ಸ್ಟೋರ್ ಅನ್ನು ನಿಯಮಿತವಾಗಿ ನಿರ್ವಹಿಸದ ಕಾರಣ, ಅವುಗಳು ಬಳಸಲಾಗದ ಸ್ಥಿತಿಗೆ ತಲುಪಿರುವುದು ‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ನೀಡಿದಾಗ ಕಂಡುಬಂತು.

ಬಳಸಲಾಗುವುದನ್ನು ಇಡಿ: ‘ಸಾರ್ವಜನಿಕರು ಬಳಸಲು ಯೋಗ್ಯವಾದ ಬಟ್ಟೆ, ಚಪ್ಪಲಿಗಳನ್ನಷ್ಟೇ ಇಟ್ಟರೆ ಯಾರಾದರೂ ತೆಗೆದುಕೊಳ್ಳುತ್ತಾರೆ. ಹೀಗೆ, ಹರಿದ ಅಥವಾ ಹಾಳಾದ ಬಟ್ಟೆಗಳನ್ನು ಇಡುವುದರಿಂದ ಪ್ರಯೋಜನವಾಗುವುದಿಲ್ಲ. ಇಲಾಖೆಯ ಆಶಯಕ್ಕೆ ಹಿನ್ನಡೆಯೂ ಆಗುತ್ತದೆ. ಅಂತೆಯೇ, ಆಗಾಗ ಇದನ್ನು ಸ್ವಚ್ಛಗೊಳಿಸುವ ಕೆಲಸವನ್ನು ಸಿಬ್ಬಂದಿ ಮಾಡಬೇಕು. ಸುಸ್ಥಿತಿಯಲ್ಲಿ ಇಲ್ಲದವುಗಳನ್ನು ತೆರವುಗೊಳಿಸಿ ಆಗಾಗ ಸ್ವಚ್ಛವಾಗಿಡಬೇಕು’ ಎಂದು ಪ್ರಯಾಣಿಕ ಸುರೇಶ ಪಾಟೀಲ ಪ್ರತಿಕ್ರಿಯಿಸಿದರು.

‘ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ‘ಪಬ್ಲಿಕ್‌ ಫ್ರಿಜ್‌’ ಇಟ್ಟ ಮಾದರಿಯಲ್ಲಿ ಬೆಳಗಾವಿ ನಿಲ್ದಾಣದಲ್ಲಿ ಹೋದ ತಿಂಗಳು ‘ಪಬ್ಲಿಕ್‌ ಸ್ಟೋರ್‌’ ಅಳವಡಿಸಲಾಗಿದೆ. ಬಟ್ಟೆ, ಚಪ್ಪಲಿ, ಹೊದಿಕೆ ಖರೀದಿಸುವ ಸಾಮರ್ಥ್ಯ ಇಲ್ಲದವರಿಗೆ ಇದರಿಂದ ಅನುಕೂಲವಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ. ಈ ಬಗ್ಗೆ ಪ್ರಯಾಣಿಕರಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ’ ಎಂದು ನೈರುತ್ಯ ರೈಲ್ವೆ ಹುಬ್ಬಳ್ಳಿ ವಲಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT