ಮಂಗಳವಾರ, ಫೆಬ್ರವರಿ 18, 2020
29 °C
0–5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ

ಬೆಳಗಾವಿ: ಜಿಲ್ಲೆಯಾದ್ಯಂತ ಪಲ್ಸ್‌ ಪೋಲಿಯೊ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ 0–5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್‌ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಿತು. ಬಸ್‌ ನಿಲ್ದಾಣ, ರೈಲು ನಿಲ್ದಾಣ, ಪ್ರಮುಖ ಸಾರ್ವಜನಿಕ ಸ್ಥಳಗಳು, ಆರೋಗ್ಯ ಕೇಂದ್ರಗಳು, ಪಂಚಾಯಿತಿ ಮೊದಲಾದ ಕಡೆಗಳಲ್ಲಿ ಲಸಿಕೆ ಹಾಕಲಾಯಿತು.

ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಪಾಲಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಉದ್ಘಾಟನಾ ಸಮಾರಂಭ ಇಲ್ಲಿನ ವಡಗಾವಿಯ ನಗರ ಆರೋಗ್ಯ ಕೇಂದ್ರದಲ್ಲಿ ನಡೆಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಬೆಳಗಾವಿ ವಿಭಾಗದ ಸಹ ನಿರ್ದೇಶಕ ಡಾ.ಅಪ್ಪಾಸಹೇಬ ನರಟ್ಟಿ ಮಾತನಾಡಿ, ‘ಭಾರತ ದೇಶ ಈಗಾಗಲೇ ಪೋಲಿಯೊ ಮುಕ್ತ ರಾಷ್ಟ್ರವೆಂದು ವಿಶ್ವ ಅರೋಗ್ಯ ಸಂಸ್ಥೆಯಿಂದ ಪ್ರಮಾಣಪತ್ರ ಪಡೆದುಕೊಂಡಿದೆ. ಆದರೂ ನೆರೆ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಅಪ್ಘಾನಿಸ್ತಾನಗಳಲ್ಲಿ ಪೋಲಿಯೊ ಪ್ರಕರಣಗಳು ಕಂಡುಬಂದಿರುವುದರಿಂದ ಹಾಗೂ ವಲಸಿಗರ ಮೂಲಕ ನಮ್ಮ ದೇಶಕ್ಕೆ ಹರಡುವ ಸಾಧ್ಯತೆ ಇರುವುದರಿಂದ ಈ ಕಾರ್ಯಕ್ರಮವನ್ನು ಅತ್ಯಂತ ಜವಬ್ದಾರಿತವಾಗಿ ನಿರ್ವಹಿಸಬೇಕಾಗಿದೆ. ಇದಕ್ಕೆ ಎಲ್ಲ ಇಲಾಖೆಗಳು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಿದೆ’ ಎಂದು ತಿಳಿಸಿದರು.

ನಗರಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ ಮಾತನಾಡಿ, ‘ಪೋಲಿಯೊ ಲಸಿಕಾ ಕಾರ್ಯಕ್ರಮಕ್ಕೆ ಪಾಲಿಕೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಪಾಲಕರು ತಮ್ಮ 0–5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಲಸಿಕೆ ಹಾಕಿಸಬೇಕು. ದೇಶವನ್ನು ಆರೋಗ್ಯವಂತ ರಾಷ್ಟ್ರವನ್ನಾಗಿಸಬೇಕು’ ಎಂದರು.

ರೋಟರಿ ಕ್ಲಬ್‌ ಬೆಳಗಾವಿ ದಕ್ಷಿಣದ ಪ್ರತಿನಿಧಿ ಜಯಸಿಂಹ, ‘ಪೋಲಿಯೊ ನಿರ್ಮೂಲನೆಗಾಗಿ ಸಂಸ್ಥೆಯು ಹಿಂದಿನಿಂದಲೂ ಸಹಕಾರ ಕೊಡುತ್ತಿದೆ’ ಎಂದು ಹೇಳಿದರು.

ಡಿಎಚ್‌ಒ ಡಾ.ಶಶಿಕಾಂತ ಮುನ್ಯಾಳ ಮಾತನಾಡಿ, ‘ಅಭಿಯಾನಕ್ಕೆ ಜಿಲ್ಲೆಯಲ್ಲಿ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮೊದಲನೇ ದಿನ ಲಸಿಕಾ ಕೇಂದ್ರಗಳಲ್ಲಿ ಹಾಗೂ 2–3ನೇ ದಿನಗಳಲ್ಲಿ ಆರೋಗ್ಯ ಕಾರ್ಯಕರ್ತರು ಮನೆಗಳಿಗೆ ಭೇಟಿ ನೀಡಿ ಲಸಿಕೆ ವಂಚಿತ 0–5 ವರ್ಷದೊಳಗಿನ  ಮಕ್ಕಳಿಗೆ ಪೊಲಿಯೊ ಹನಿ ಹಾಕುವರು’ ಎಂದು ತಿಳಿಸಿದರು.

ಜಿಲ್ಲಾ ಸಂತಾನೋತ್ಪತಿ ಮತ್ತು ಮಕ್ಕಳ ಅಧಿಕಾರಿ ಡಾ.ಐ.ಪಿ. ಗಡಾದ, ‘ಜಿಲ್ಲೆಯಲ್ಲಿ 0–5 ವರ್ಷದೊಳಗಿನ ಒಟ್ಟು 5,09,892 ಮಕ್ಕಳನ್ನು ಗುರುತಿಸಲಾಗಿದ್ದು, 2,335 ಬೂತ್‌ಗಳನ್ನು ಸ್ಥಾಪಿಸಲಾಗಿದೆ. ಲಸಿಕೆ ಹಾಕಲು 9,954 ಕಾರ್ಯಕರ್ತೆಯರು ಹಾಗೂ 199 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. 34 ಮೊಬೈಲ್ ತಂಡಗಳನ್ನು ರಚಿಸಲಾಗಿದೆ. ಬಸ್, ರೈಲು ನಿಲ್ದಾಣ ಮೊದಲಾದ ಕಡೆಗಳಲ್ಲಿ ಲಸಿಕೆ ಹಾಕಲಾಗಿದೆ’ ಎಂದು ಮಾಹಿತಿ ನೀಡಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ಎಸ್. ರೊಟ್ಟಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಕಾಶ ವಾಲಿ, ವ್ಯವಸ್ಥಾಪಕಿ ಸ್ವಾತಿ ಇದ್ದರು.

ಅಂಗನವಾಡಿ ಕಾರ್ಯಕರ್ತೆ ಪ್ರೇಮಾ ಜಡಗಿ ಹಾಗೂ ತಂಡದವರು ಪ್ರಾರ್ಥಿಸಿದರು. ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಪಿ. ಯಲಿಗಾರ ಸ್ವಾಗತಿಸಿದರು. ಸಿ.ಜಿ. ಅಗ್ನಿಹೋತ್ರಿ ನಿರೂಪಿಸಿದರು. ಟಿಎಚ್‌ಒ ಡಾ.ಸಂಜಯ ಡುಮ್ಮಗೊಳ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು