ಗುರುವಾರ , ಸೆಪ್ಟೆಂಬರ್ 23, 2021
22 °C
ಗುಣಮಟ್ಟದ ಶಿಕ್ಷಣ; ಸಮಗ್ರ ಪ್ರಗತಿಗೆ ಗಮನ

‘ಸುವರ್ಣ ಸಂಭ್ರಮ’ದಲ್ಲಿ ಕಿತ್ತೂರು ಪಿಯು ಕಾಲೇಜು

ಪ್ರದೀಪ ಮೇಲಿನಮನಿ Updated:

ಅಕ್ಷರ ಗಾತ್ರ : | |

Prajavani

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಶಿಸ್ತು, ಗುಣಮಟ್ಟದ ಶಿಕ್ಷಣ ಹಾಗೂ ಪ್ರಸ್ತುತ ಸ್ಪರ್ಧಾತ್ಮಕ ಯುಗಕ್ಕೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ಮಹತ್ವಾಕಾಂಕ್ಷಿ ಇಟ್ಟುಕೊಂಡು ಮುನ್ನುಗ್ಗುತ್ತಿರುವ ಇಲ್ಲಿಯ ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಸುವರ್ಣ ಮಹೋತ್ಸವ ಸಂಭ್ರಮಾಚರಣೆಯಲ್ಲಿದೆ.

ಸುಸಜ್ಜಿತ ಕಟ್ಟಡ ಹೊಂದಿದೆ. ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಹೆಚ್ಚು ಗಮನ ನೀಡುತ್ತಾ ಬಂದಿದೆ.

‘ಸಂಸ್ಥೆ ಅಧ್ಯಕ್ಷ ರಾಜಗುರು ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಅವರ ಮಾರ್ಗದರ್ಶನ, ಆಡಳಿತ ಮಂಡಳಿಯವರ ನೇತೃತ್ವ ಹಾಗೂ ಸಮರ್ಥ ಸಿಬ್ಬಂದಿಯ ಶ್ರಮ ಈ ಕಾಲೇಜಿಗೆ ಹೆಸರು ತಂದುಕೊಟ್ಟಿದೆ ಎನ್ನುತ್ತಾರೆ’ ಪ್ರಾಚಾರ್ಯ ಎಂ.ಎಸ್. ಪಾಟೀಲ.

ಪದವಿಯಿಂದ ಬೇರ್ಪಟ್ಟ ಕಾಲೇಜು:

1983-84ರಲ್ಲಿ ಪದವಿ ಕಾಲೇಜಿನೊಂದಿಗೆ ಸೇರ್ಪಡೆಯಾಗಿದ್ದ ಈ ಕಾಲೇಜು 2001ರಲ್ಲಿ ಬೇರ್ಪಡೆಯಾಗಿ ಸ್ವತಂತ್ರ ಕಾಲೇಜು ಆಗಿ ಕಾರ್ಯಾರಂಭ ಮಾಡಲು ಪ್ರಾರಂಭಿಸಿತು. ಹೀಗಾಗಿ ಕಾಯಂ ಬೋಧಕರ ಸಮಸ್ಯೆಯನ್ನು ಕಾಲೇಜು ಎದುರಿಸುತ್ತಿದೆ. ಅತಿಥಿ ಉಪನ್ಯಾಸಕರೇ ಇಲ್ಲಿ ಹೆಚ್ಚಿನ ‘ಬೋಧಕ ಬಲ’ವಾಗಿದ್ದಾರೆ.

ಕಲಾ ಮತ್ತು ವಾಣಿಜ್ಯ ವಿಭಾಗ ಸೇರಿ ಪ್ರಥಮ ಪಿಯುಸಿಯಲ್ಲಿ 368 ವಿದ್ಯಾರ್ಥಿಗಳು, ದ್ವಿತೀಯ ಪಿಯುಸಿದಲ್ಲಿ 310 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇಲ್ಲಿಯ ಕಲಿತ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಆಯೇಷಾ ಹುಣಸಿಕಟ್ಟಿ ದ್ವಿತೀಯ ಪಿಯು ಕಲಾ ವಿಭಾಗದ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆದಿದ್ದರು.

‘ಕ್ರೀಡಾ ವಿಭಾಗದಲ್ಲಿ ತಮ್ಮ ಛಾಪನ್ನು ಈ ಕಾಲೇಜು ಸದಾ ಮೂಡಿಸುತ್ತಲೇ ಬಂದಿದೆ. ಆರು ವರ್ಷಗಳಿಂದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ವಾಲಿಬಾಲ್‌ನಲ್ಲಿ ಪ್ರತಿ ವರ್ಷ ವರ್ಷ ವಿದ್ಯಾರ್ಥಿನಿಯರು ರಾಜ್ಯ ಮಟ್ಟವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಕಬಡ್ಡಿ ಸೇರಿ ಇತರ ಕ್ರೀಡೆಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದಿದೆ’ ಎಂದು ಪ್ರಾಚಾರ್ಯರು ಮಾಹಿತಿ ನೀಡಿದರು.

ಪದವಿ ಕಾಲೇಜಿನಿಂದ ಬೇರ್ಪಟ್ಟ ನಂತರ ಎರಡು ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ಕೊಟ್ಟಿತ್ತು. 17 ಬೋಧಕರು ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಕೊಠಡಿಗಳ ಕೊರತೆಯೂ ಇಲ್ಲಿಲ್ಲ ಎಂದು ಅವರು ಹೇಳಿದರು.

‘ಇಂಗ್ಲಿಷ್ ಭಾಷೆಯ ಉಪನ್ಯಾಸಕರ ತರಬೇತಿ ಕಾರ್ಯಾಗಾರ, ಜಿಲ್ಲಾ ಮಟ್ಟದ ಕಬಡ್ಡಿ ಸ್ಪರ್ಧೆ ಆಯೋಜನೆ ಮಾಡಿದ ಶ್ರೇಯಸ್ಸು ಕಾಲೇಜಿಗಿದೆ. ವಿದ್ಯಾರ್ಥಿಗಳಿಗೆ ಪ್ರೇರಣೆ ಒದಗಿಸಲು ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತಿದೆ. ಸರ್ವತೋಮುಖ ಬೆಳವಣಿಗೆಗೆ ಹೆಚ್ಚು ಗಮನ ನೀಡಲಾಗುತ್ತಿದೆ’ ಎನ್ನುತ್ತಾರೆ ಅವರು.

ಬದುಕು ರೂಪಿಸಿಕೊಳ್ಳಲು

ವಿದ್ಯಾರ್ಥಿಗಳಿಗೆ ಪ್ರೇರಣೆ ಒದಗಿಸುವ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸುತ್ತೇವೆ. ಇಂದಿನ ಯುಗಕ್ಕೆ ತಕ್ಕಂತೆ ಬದುಕು ರೂಪಿಸಿಕೊಳ್ಳಲು ಈಗಿನಿಂದಲೇ ಅವರನ್ನು ಸಜ್ಜುಗೊಳಿಸಲಾಗುತ್ತಿದೆ.

–ಎಂ.ಎಸ್.ಪಾಟೀಲ, ಪ್ರಾಚಾರ್ಯ

ಮುಖ್ಯಾಂಶಗಳು

ವಿವಿಧ ಚಟುವಟಿಕೆಗಳಿಗೆ ಆದ್ಯತೆ

ಕ್ರೀಡೆಯಲ್ಲೂ ವಿದ್ಯಾರ್ಥಿಗಳ ಸಾಧನೆ

ಕಾಯಂ ಉಪನ್ಯಾಸಕರ ಅಗತ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು