ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಬಾಗ: ಸಂಚಾರಿ ಕುರಿಗಾಹಿಗಳಿಗೆ ಬೇಕು ಸೌಕರ್ಯ

ಆನಂದ ಮನ್ನಿಕೇರಿ
Published : 10 ಆಗಸ್ಟ್ 2024, 5:50 IST
Last Updated : 10 ಆಗಸ್ಟ್ 2024, 5:50 IST
ಫಾಲೋ ಮಾಡಿ
Comments

ರಾಯಬಾಗ: ರಾಜ್ಯದಲ್ಲಿ ಕುರುಬ ಸಮಾಜದ ಸಂಖ್ಯೆ 60 ಲಕ್ಷಕ್ಕೂ ಅಧಿಕವಿದೆ. ಸುಮಾರು 18 ಲಕ್ಷಕ್ಕೂ ಅಧಿಕ ಸಂಚಾರಿ ಕುರಿಗಾಹಿಗಳಿದ್ದಾರೆ. ಒಟ್ಟಾರೆ ಜನಸಂಖ್ಯೆಯ ಶೇ 30ರಷ್ಟು ಮಂದಿ ಸಂಚಾರಿ ಕುರಿಗಾಹಿಗಳೇ ಇದ್ದಾರೆ. ಆದರೆ, ಈ ಸಮಾಜಕ್ಕೆ ಸಲ್ಲಬೇಕಾದ ಕನಿಷ್ಠ ಸೌಕರ್ಯಗಳು ಇನ್ನೂ ಸಿಕ್ಕಿಲ್ಲ.

ಆದಿವಾಸಿ ಬುಡಕಟ್ಟು ಸಂಸ್ಕತಿಯನ್ನೇ ಜೀವಾಳವಾಗಿಸಿಕೊಂಡು ಕುರಿ ಸಾಕಾಣಿಕೆ, ಕಂಬಳಿ ನೇಕಾರಿಕೆ ಮೂಲಕ ಜೀವನ ಸಾಗಿಸುತ್ತಿರುವ ಹಾಲುಮತ ಕುರುಬರು ಇನ್ನೂ ಸಂಕಷ್ಟದಲ್ಲಿದ್ದಾರೆ.

ಸಂಚಾರಿ ಕುರುಬರಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಘೋಷಿಸಿದೆ. ಆದರೂ ಯಾವ ಸೌಲಭ್ಯಗಳೂ ಅವರಿಗೆ ದಕ್ಕದಂತಹ ಸ್ಥಿತಿ ನಿರ್ಮಾಣವಾಗಿದೆ. ಯೋಜನೆಗಳ ಮಾಹಿತಿ ಇಲ್ಲದಿರುವುದೇ ಇದಕ್ಕೆ ಕಾರಣ.

ಕುರಿಗಳು ಸಾವು ಕಂಡರೂ ಸೂಕ್ತ ಪರಿಹಾರ ಸಿಗುತ್ತಿಲ್ಲ. ರಸ್ತೆ ಅಪಘಾತದಲ್ಲಿ, ತೋಳ, ನರಿಗಳು ದಾಳಿಗೆ ಲೆಕ್ಕವಿಲ್ಲದಷ್ಟು ಕುರಿಗಳು ಆಹುತಿ ಆಗುತ್ತಲೇ ಇವೆ. ಹೀಗೆ ಸಂಕಷ್ಟಕ್ಕೆ ಸಿಲುಕಿದವರಿಗೆ ಮತ್ತೆ ಬದುಕು ಕಟ್ಟಿಕೊಳ್ಳುವುದು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಅವರದು.

ಮಕ್ಕಳಿಗಿಲ್ಲ ಶಿಕ್ಷಣ ಭಾಗ್ಯ: ಸಂಚಾರಿ ಕುರುಬರು ತಮ್ಮ ಕುರಿಗಳೊಂದಿಗೆ ಸಂಚಾರ ಮಾಡುತ್ತ, ಮಕ್ಕಳೊಂದಿಗೆ ಸಂಚಾರ ಹೋಗುತ್ತಾರೆ. ವ್ಯವಸ್ಥಿತ ನೆಲೆಯಿಲ್ಲದ್ದರಿಂದ ಇವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸಂಚಾರಿ ಕುರುಬರ ಮಕ್ಕಳು ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಯಲ್ಲಿರುವ ಉದಾಹರಣೆಗಳು ಕಡಿಮೆ. ಹೆಣ್ಣು ಮಕ್ಕಳಂತೂ ಶಿಕ್ಷಣದಿಂದ ವಂಚಿತರಾಗುವುದೇ ಹೆಚ್ಚು.

ಪೌರಾಣಿಕವಾಗಿ ಹಾಲುಮತ ಎಂಬ ನಾಮಾಂಕಿತ ಹೊಂದಿದ್ದರೂ ಈ ಸಮಾಜದ ಬದುಕು ಇನ್ನೂ ಹಾಲುಮಯ ಆಗಿಲ್ಲ. ಕುರುಬರು ಕಾಡು ಪಾಲಾಗದಂತೆ ಕಾಪಾಡಬೇಕಾದುದು ಸರ್ಕಾರದ ಕರ್ತವ್ಯ ಎನ್ನುವುದು ಅವರ ಆಗ್ರಹ.

ಸಂಚಾರ ಮಾಡುತ್ತ ಕುರಿ ಕಾಯುವ ಇವರ ಕುಟುಂಬದಲ್ಲಿ ಮಕ್ಕಳ ಮದುವೆ, ಊರಿನ ಜಾತ್ರೆ, ಸಂಬಂಧಿಕರ ನಿಧನ, ಹಬ್ಬಗಳು ಹೀಗೆ ಎಲ್ಲದರಿಂದಲೂ ದೂರ ಉಳಿಯುವುದು ಅನಿವಾರ್ಯವಾಗಿದೆ. ಈಗ ಮೊಬೈಲ್‌ ಬಂದ ಮೇಲೆ ಕೆಲವರಿಗೆ ಸಂಪರ್ಕ ಸಾಧ್ಯವಾಗಿದೆ. ಅದನ್ನು ಬಿಟ್ಟರೆ ಅವರ ನಾಗರಿಕ ಸಮಾಜದಿಂದ ದೂರವೇ ಉಳಿದು ಬದುಕುವ ಸ್ಥಿತಿ ಇನ್ನೂ ಇದೆ.

ಈ ಹಿಂದೆ ಇದ್ದ ಕುರಿ ಆಂಬುಲೆನ್ಸ್‌ ಯೋಜನೆ ಕೂಡ ಈಗ ನಿಂತಿದ್ದರಿಂದ ಸಂಚಾರಿ ಕುರಿಗಾಹಿಗಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕುರುಬರು ಸ್ವಾಭಿಮಾನಿಗಳು. ರಾಜಕೀಯ ಹಾಗೂ ಶೈಕ್ಷಣಿಕ ಅವಕಾಶಗಳು ಹೆಚ್ಚಾಗಿ ಸಿಕ್ಕರೆ ಮಾತ್ರ ಸಮಾಜ ಸುಧಾರಣೆ ಆಗುತ್ತದೆ
-ಸಂದೀಪ ಒಂಟಮೂರೆ ಸಮಾಜದ ಮುಖಂಡ
ಸರ್ಕಾರ ಭೋವಿ ಲಂಬಾಣಿ ವಾಲ್ಮೀಕಿ ಆದಿಜಾಂಬವ ಸೇರಿದಂತೆ ಅನೇಕರಿಗೆ ಅಭಿವೃದ್ದಿ ನಿಗಮ ಸ್ಥಾಪಿಸಿದೆ. ಹಾಲುಮತ ನಿಗಮ ಸ್ಥಾಪಿಸಬೇಕು
-ಸಿದ್ದಪ್ಪ ಪೂಜಾರಿ ಹುಬ್ಬರವಾಡಿ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT