ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ರಕ್ಷಣಾ ಇಲಾಖೆಯಿಂದ ಜಾಗ ಹಸ್ತಾಂತರ ವಿಳಂಬ: ಸಚಿವ ಸುರೇಶ ಅಂಗಡಿ

ಸಭೆಯಲ್ಲಿ ಹೇಳಿಕೆ
Last Updated 27 ಜುಲೈ 2020, 14:24 IST
ಅಕ್ಷರ ಗಾತ್ರ

ಬೆಳಗಾವಿ: ‘ಸ್ಮಾರ್ಟ್ ಸಿಟಿ ಯೋಜನೆಯಡಿ ಸಾಕಷ್ಟು ಅನುದಾನ ಬಿಡುಗಡೆ ಆಗಿದೆ. ಆದರೆ, ರಕ್ಷಣಾ ಇಲಾಖೆಯಿಂದ ಜಾಗ ಹಸ್ತಾಂತರ ವಿಳಂಬ ಸೇರಿದಂತೆ ವಿವಿಧ ತಾಂತ್ರಿಕ ಕಾರಣಗಳಿಂದ ಕೆಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಕಾಮಗಾರಿ ವ್ಯಾಪ್ತಿಯ ಖಾಸಗಿ ಆಸ್ತಿಗಳ ಸ್ವಾಧೀನ ಮತ್ತು ಜಮೀನು ಹಸ್ತಾಂತರ ಸೇರಿದಂತೆ ಎಲ್ಲ ಬಗೆಯ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿಕೊಳ್ಳಬೇಕು’ ಎಂದು ಸೂಚಿಸಿದರು.

‘ಕೆಲವು ಕಾಮಗಾರಿಗಳ ವ್ಯಾಪ್ತಿಯಲ್ಲಿ ಬರುವ ಖಾಸಗಿ ಆಸ್ತಿಗಳ ಮೌಲ್ಯಮಾಪನ ಮಾಡಿ ಪುನರ್ವಸತಿ ಅಥವಾ ಸ್ಥಳಾಂತರ ಬಗ್ಗೆ ವರದಿ ನೀಡಿದರೆ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಅಗತ್ಯ ಅನುದಾನ ಪಡೆಯಲಾಗುವುದು. ಜಮೀನು ಹಸ್ತಾಂತರಕ್ಕೆ ಸಂಬಂಧಿಸಿದಂತೆ ರಕ್ಷಣಾ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಅನುಮೋದನೆಗೆ ಪ್ರಯತ್ನಿಸಲಾಗುವುದು’ ಎಂದರು.

‘ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಚುರುಕುಗೊಳಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸೂಚಿಸಿದರು.

ಬಸ್ ನಿಲ್ದಾಣ ಬಳಿಯ ಜಮೀನು ಹಸ್ತಾಂತರ, ರಾಯಚೂರು-ಬಾಚಿ ರಸ್ತೆ (ಎಸ್.ಎಚ್.20) ಗಾಂಧಿನಗರದಿಂದ ಅಶೋಕ ವೃತ್ತದವರೆಗೆ ರಸ್ತೆ ನಿರ್ಮಾಣ, ಸಂಚಯನಿ ವೃತ್ತದಿಂದ ಮೀನು ಮಾರುಕಟ್ಟೆವರೆಗೆ ಸ್ಮಾರ್ಟ್ ಸಿಟಿ ರಸ್ತೆ ನಿರ್ಮಾಣ ಬಗ್ಗೆ ಚರ್ಚಿಸಲಾಯಿತು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ, ಉಪ ವಿಭಾಗಾಧಿಕಾರಿ ಅಶೋಕ ತೇಲಿ ಇದ್ದರು.

‘ಪ್ರಸ್ತಾವ ಬಾಕಿ ಉಳಿದಿಲ್ಲ’

ಮರಾಠಾ ಲಘು ಪದಾತಿದಳದ ಬ್ರಿಗೇಡಿಯರ್‌ ಚೌಧರಿ ಮಾತನಾಡಿ, ‘ಬಸ್ ನಿಲ್ದಾಣಕ್ಕೆ ಜಾಗ ಹಸ್ತಾಂತರಿಸುವುದಕ್ಕೆ ಸಂಬಂಧಿಸಿದ ಪ್ರಸ್ತಾವ ರಕ್ಷಣಾ ಇಲಾಖೆಗೆ ಕಳುಹಿಸಲಾಗಿದೆ. ಅಲ್ಲಿಂದ ಅನುಮೋದನೆ ಸಿಗಬೇಕಿದೆ. ಸಾರ್ವಜನಿಕರಿಗೆ ಉತ್ತಮ ಸೌಕರ್ಯಗಳನ್ನು ಒದಗಿಸಲು ಅನುಕೂಲವಾಗುವಂತೆ ಪ್ರಸ್ತಾವ ಸಿದ್ಧಪಡಿಸಲಾಗುವುದು. ಬಸ್ ನಿಲ್ದಾಣದ ಜಮೀನು ಹಸ್ತಾಂತರ ಹೊರತುಪಡಿಸಿದರೆ ಇದುವರೆಗೆ ರಾಜ್ಯ ಸರ್ಕಾರಕ್ಕೆ ಕಳುಹಿಸಿದ ಯಾವುದೇ ಪ್ರಸ್ತಾವ ಬಾಕಿ ಉಳಿದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಸಾಂವಗಾಂವ ರಸ್ತೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಅನುಕೂಲ ಆಗುವಂಥ ಪ್ರಸ್ತಾವ ರಕ್ಷಣಾ ಇಲಾಖೆಗೆ ಸಲ್ಲಿಸಬೇಕು. ಜನರಿಗೆ ಅನುಕೂಲ ಕಲ್ಪಿಸಲು ರೂಪಿಸಲಾಗುವ ರಸ್ತೆ ಮತ್ತಿತರ ಮೂಲಸೌಕರ್ಯ ಯೋಜನೆಗೆ ಸಕಾರಾತ್ಮಕ ವರದಿ ಕೊಡಬೇಕು. ಆಗ ಮಾತ್ರ ಯೋಜನೆ ಅನುಷ್ಠಾನ ವೇಗ ಪಡೆದುಕೊಳ್ಳುತ್ತದೆ’ ಎಂದು ದಕ್ಷಿಣ ಕ್ಷೇತ್ರದ ಶಾಸಕಶಾಸಕ ಅಭಯ ಪಾಟೀಲ ಬ್ರಿಗೇಡಿಯರ್‌ ಅವರನ್ನು ಕೋರಿದರು.

***

ಬೆಳಗಾವಿ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ 30 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಸೌಲಭ್ಯಗಳನ್ನು ಕಲ್ಪಿಸಬೇಕು

-ಸುರೇಶ ಅಂಗಡಿ,ರೈಲ್ವೆ ಖಾತೆ ರಾಜ್ಯ ಸಚಿವ

***

ಕಾಮಗಾರಿ ವ್ಯಾಪ್ತಿಯಲ್ಲಿ ಬರುವ ಖಾಸಗಿ ಆಸ್ತಿದಾರರ ಪುನರ್ವಸತಿ ಮತ್ತು ಸ್ಥಳಾಂತರ ಕುರಿತು ಸಮಗ್ರ ವರದಿಯನ್ನು ಲೋಕೋಪಯೋಗಿ ಇಲಾಖೆಯಿಂದ ಸಲ್ಲಿಸಬೇಕು

-ಎಂ.ಜಿ. ಹಿರೇಮಠ,ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT