ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಜಿಲ್ಲೆಯಲ್ಲಿ ದ್ರಾಕ್ಷಿಗೆ ‘ಕಹಿ’ಯಾದ ಅಕಾಲಿಕ ಮಳೆ

Last Updated 27 ನವೆಂಬರ್ 2021, 7:15 IST
ಅಕ್ಷರ ಗಾತ್ರ

ಬೆಳಗಾವಿ: ಅಕಾಲಿಕ ಮಳೆ ಮತ್ತು ಮೋಡ ಮುಸುಕಿದ ವಾತಾವರಣದಿಂದಾಗಿ ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆ ಹಾಳಾಗಿದ್ದು, ಬೆಳೆಗಾರರು ತೀವ್ರ ಕಂಗಲಾಗಿದ್ದಾರೆ.

ಜಿಲ್ಲೆಯ ಅಥಣಿ ಹಾಗೂ ಕಾಗವಾಡ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ಅಲ್ಲಿ 5,200 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಇದೆ. ಈ ಪೈಕಿ ಶುಕ್ರವಾರದವರೆಗೆ ಬರೋಬ್ಬರಿ 3,200 ಹೆಕ್ಟೇರ್‌ ಹಾಳಾಗಿದೆ. ಇದರಲ್ಲಿ ಅಥಣಿ ತಾಲ್ಲೂಕು ಒಂದರಲ್ಲೇ 3ಸಾವಿರ ಹೆಕ್ಟೇರ್‌ ಇದೆ. ಒಟ್ಟು 4,688 ಮಂದಿ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ.

ಬಹುತೇಕರು ಅಕ್ಟೋಬರ್‌ನಲ್ಲಿ ‘ಚಾಟ್ನಿ’ ಮಾಡಿದ್ದರು. ಹೂವು ಬಿಡುವ ಹಾಗೂ ಕಾಯಿ ಕಚ್ಚುವ ಸಮಯದಲ್ಲಿ ತುಂತುರು ಮಳೆ ಹಾಗೂ ಹವಾಮಾನ ವೈಪರೀತ್ಯ ಶಾಪವಾಗಿ ಪರಿಣಮಿಸಿದೆ.

ಆಸೆ ಬಿಟ್ಟಿದ್ದಾರೆ

ಮಳೆ ಹನಿ ಸಂಗ್ರಹ ಆಗುತ್ತಿರುವುದರಿಂದಾಗಿ ಗೊಂಚಲಿನಿಂದ ಕಾಯಿಗಳು ಉದುರುತ್ತಿವೆ. ತಂಪಾದ ವಾತಾವರಣದಿಂದಾಗಿ ಕೊಳೆ ರೋಗ ಬಾಧೆಯೂ ಹೆಚ್ಚಿದೆ. ನಿತ್ಯ ಮೂರ‍್ನಾಲ್ಕೂ ಬಾರಿಯಾದರೂ ಔಷಧ ಸಿಂಪಡಿಸಬೇಕು. ಹಾಗೆ ಮಾಡಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಪ್ರತಿಕೂಲ ಹವಾಮಾನ ಮುಂದುವರಿದಿದ್ದರಿಂದಾಗಿ, ಈ ಬಾರಿಯ ಬೆಳೆ ಕೈಗೆ ಬರುವ ಆಸೆಯನ್ನು ಬೆಳೆಗಾರರು ಬಿಟ್ಟಿದ್ದಾರೆ.

‘ಪ್ರತಿಕೂಲ ಹವಾಮಾನದಿಂದಾಗಿ ಡೌನಿ, ಕೊಳೆ ರೋಗ ಕಾಣಿಸಿಕೊಂಡಿದ್ದರಿಂದ ಪ್ರಸಕ್ತ ವರ್ಷವೂ ದ್ರಾಕ್ಷಿ ಹುಳಿಯಾಗಿದೆ. ಹೂ ಹಂತದಲ್ಲಿ ರೋಗ ಬಾಧೆಯಿಂದ ಗೊಂಚಲುಗಳಲ್ಲಿನ ಕಾಯಿಗಳು ಸುಟ್ಟು ಕರಕಲಾಗಿ ಉದರುತ್ತಿವೆ. ಸದ್ಯದ ಸ್ಥಿತಿ ನೋಡಿದರೆ ಮಾಡಿದ ಖರ್ಚು ಸಿಗುವುದೂ ಅನುಮಾನ. ಚಾಟ್ನಿ, ಕಡ್ಡಿ ತಯಾರಿಕೆ, ಗೊಬ್ಬರ, ಔಷಧಿ ಸೇರಿ ಎಕರೆಗೆ ₹ 1.50 ಲಕ್ಷಕ್ಕೂ ಹೆಚ್ಚು ಖರ್ಚಾಗಿದೆ. ನಷ್ಟಕ್ಕೆ ಸಿಲುಕಿದ್ದೇವೆ’ ಎಂದು ತೆಲಸಂಗದ ರೈತ ಸುನೀಲ ಕಾಳೆ ತಿಳಿಸಿದರು.

ತೊಂದರೆಯಾಗಿದೆ

ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯ ವಿಜ್ಞಾನಿಗಳು ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರೋಗ ನಿರ್ವಹಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ನೀಡಿದ್ದಾರೆ.

‘ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಹೂಬಿಡುವ ಸಮಯಕ್ಕೆ ಸರಿಯಾದ ಮಳೆಯಾದ್ದರಿಂದ ಹೂವುಗಳು ಕೊಳೆಯುತ್ತಿವೆ. ಡೌನಿ ರೋಗವೂ ಕಾಡುತ್ತಿದೆ. ಇದರಿಂದ ಬೆಳೆ ನಷ್ಟ ಸಂಭವಿಸಿದೆ. ಆ ಭಾಗದ ‍ರೈತರ ಪ್ರಕಾರ, ಕಳೆದ 20 ವರ್ಷಗಳಲ್ಲಿ ಈ ಅವಧಿಯಲ್ಲಿ ಮಳೆ ಬಂದಿರಲಿಲ್ಲವಂತೆ. ಹವಾಮಾನ ವೈಪರೀತ್ಯದಿಂದ ತೊಂದರೆಯಾಗಿದೆ’ ಎಂದು ತೋಟಗಾರಿಖೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಂಟಿ ಸಮೀಕ್ಷೆ ಪ್ರಗತಿಯಲ್ಲಿದೆ. ಪೂರ್ಣಗೊಂಡ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಹೆಕ್ಟೇರ್‌ಗೆ ₹ 18ಸಾವಿರದಂತೆ ಗರಿಷ್ಠ 2 ಹೆಕ್ಟೇರ್‌ಗೆ ₹ 36ಸಾವಿರ ಸಿಗಲಿದೆ. ಬಹುತೇಕರು ವಿಮೆ ಮಾಡಿಸಿರುತ್ತಾರೆ. ಪರಿಹಾರ ಸಿಗುತ್ತದೆ’ ಎನ್ನುತ್ತಾರೆ ಅವರು.

ಪರಿಹಾರ ಒದಗಿಸಬೇಕು

ಮೋಡ ಮುಸುಕಿದ ವಾತಾವರಣ ಮತ್ತು ತುಂತುರು ಮಳೆಯಿಂದ ದ್ರಾಕ್ಷಿಗೆ ಕೊಳೆ ರೋಗ ಬಂದು ಎಳೆಯ ಕಾಯಿಗಳು ಉದರುತ್ತಿವೆ. ಇದರಿಂದ ನಷ್ಟ ಅನುಭವಿಸುವಂತಾಗಿದೆ. ಸರ್ಕಾರವು ರೈತರಿಗೆ ಸಮರ್ಪಕ ಪರಿಹಾರ ನೀಡಬೇಕು.

–ಗುರಪ್ಪ ದಾಶ್ಯಾಳ, ಬೆಳೆಗಾರ, ಕಕಮರಿ, ಅಥಣಿ ತಾಲ್ಲೂಕು

ಮುಖ್ಯಾಂಶಗಳು

3,200 ಹೆಕ್ಟೇರ್‌ ಬೆಳೆ ಹಾನಿ

ಡೌನಿ ರೋಗದ ಬಾಧೆ

4,688 ಬೆಳೆಗಾರರಿಗೆ ನಷ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT