ಶುಕ್ರವಾರ, ಆಗಸ್ಟ್ 23, 2019
22 °C
ಅಂಗಡಿ–ಮುಗ್ಗಟ್ಟುಗಳನ್ನು ತೆರೆದು ಪರಿಶೀಲಿಸಿದ ವ್ಯಾಪಾರಿಗಳು

ಮಳೆ ಇಳಿಮುಖ; ಜನರು ನಿರಾಳ

Published:
Updated:
Prajavani

ಬೆಳಗಾವಿ: ನಗರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಸೋಮವಾರ ಮಳೆ ಕಡಿಮೆಯಾಗಿದ್ದು, ಆಗಾಗ ಜಿಟಿ–ಜಿಟಿ ಮಳೆ ಮಾತ್ರ ಸುರಿಯಿತು. ಎರಡು ದಿನಗಳಿಂದ ಮಳೆ ಇಳಿಮುಖವಾಗಿರುವುದರಿಂದ ಜನರು ನಿಟ್ಟುಸಿರು ಬಿಟ್ಟರು.

ಎರಡು ವಾರಗಳಿಂದ ನಗರದ ವಿವಿಧ ಬಡಾವಣೆಗಳಲ್ಲಿ ನಿಂತಿದ್ದ ನೀರು ಹರಿದು ಹೋಗಿದ್ದು, ಸಂಪೂರ್ಣವಾಗಿ ಖಾಲಿಯಾಗಿದೆ. ಮನೆಗಳು ಜಲಾವೃವಾಗಿದ್ದರಿಂದ ಹೊರಬರಲು ಸಾಧ್ಯವಾಗದೇ ಮನೆಗಳಲ್ಲೇ ಕುಳಿತಿದ್ದ ಜನರು ನಿರಾಳರಾದರು. ಮಾರುಕಟ್ಟೆ ಹಾಗೂ ಅಂಗಡಿಗಳಿಗೆ ತೆರಳಿ ಆಹಾರ ಪದಾರ್ಥಗಳು ಹಾಗೂ ವಿವಿಧ ಸಾಮಗ್ರಿಗಳನ್ನು ಖರೀದಿಸಿದರು.

ವಿವಿಧ ಬಡಾವಣೆಗಳಲ್ಲಿ ಮನೆ ಹಾಗೂ ಬೃಹತ್‌ ಕಟ್ಟಡಗಳ ನೆಲ ಮಹಡಿಗಳಲ್ಲಿ ಮಳೆ ಹಾಗೂ ಚರಂಡಿಯಿಂದ ನುಗ್ಗಿದ್ದ ನೀರನ್ನು ಮೋಟಾರ್‌ ಮೂಲಕ ಹೊರಹಾಕುತ್ತಿರುವುದು ಕಂಡುಬಂತು. 

ಮಳಿಗೆ ಪರಿಶೀಲಿಸಿದ ವರ್ತಕರು: ಧಾರಾಕಾರ ಮಳೆಯಿಂದ ವಾರದಿಂದ ಅಂಗಡಿಗಳನ್ನು ತೆರೆಯದೇ ಇದ್ದ ವ್ಯಾಪಾರಿಗಳು ಇಂದು ತಮ್ಮ ಅಂಗಡಿಗಳನ್ನು ತೆರೆದು ಸಾಮಗ್ರಿಗಳನ್ನು ಪರಿಶೀಲಿಸಿದರು. ಔಷಧ ಮಳಿಗೆ, ಎಲೆಕ್ಟ್ರಾನಿಕ್ಸ್‌, ಕಿರಾಣಿ ಅಂಗಡಿ ಸೇರಿ ವಿವಿಧ ಮಳಿಗೆಗಳಲ್ಲಿನ ಸಾಮಗ್ರಿಗಳಿಗೆ ಹಾನಿಯಾಗಿರುವುದರಿಂದ ವ್ಯಾಪಾರಿಗಳಿಗೆ ನಷ್ಟ ಉಂಟಾಗಿದೆ. 

ಮಾರುಕಟ್ಟೆ ಸೇರಿ ವಿವಿಧ ಬಡಾವಣೆಗಳಲ್ಲಿ ಚರಂಡಿ ತುಂಬಿ ಹರಿದು ರಸ್ತೆಯಲ್ಲಿ ತ್ಯಾಜ್ಯ ಬಿದ್ದಿದ್ದು, ಗಬ್ಬು ನಾರುತ್ತಿದೆ. ಇದರಿಂದ ಸುತ್ತಲಿನ ನಿವಾಸಿಗಳಿಗೆ ದುರ್ವಾಸನೆ ಬೀರುತ್ತಿದೆ. ಪಾಲಿಕೆ ಸಿಬ್ಬಂದಿ ತ್ಯಾಜ್ಯವನ್ನು ಸ್ವಚ್ಛಗೊಳಿಸುತ್ತಿರುವ ದೃಶ್ಯವೂ ಕಂಡುಬಂತು. 

ಮನೆಯ ಕಳೆದುಕೊಂಡವರ ನೋಂದಣಿ: ಇಲ್ಲಿನ ಹಳೇ ಪಿ.ಬಿ. ರಸ್ತೆಯ ಪಾಟೀಲ ರೈಸ್‌ ಮಿಲ್‌ ಆವರಣದಲ್ಲಿರುವ ಶಾಸಕ ಅಭಯ ಪಾಟೀಲ ಅವರ ಕಚೇರಿಯ ಆವರಣದಲ್ಲಿ ದಕ್ಷಿಣ ಮತಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ಮನೆ ಕುಸಿತಗೊಂಡಿರುವ ಮಾಲೀಕರ ಮಾಹಿತಿ ಪಡೆದು ಅರ್ಜಿ ವಿತರಿಸಲಾಯಿತು.

ಅರ್ಜಿ ಭರ್ತಿ ಮಾಡಿ ಮನೆ ಅಥವಾ ಗೋಡೆ ಬಿದ್ದಿರುವ ಫೋಟೊ, ಆಧಾರ್ ಕಾರ್ಡ್‌ ಮತ್ತು ಇನ್ನಿತರ ದಾಖಲಾತಿಗಳಿದ್ದರೇ ನೀಡುವಂತೆ ಶಾಸಕರ ಬೆಂಬಲಿಗರು ಸಂತ್ರಸ್ತರಿಗೆ ಮಾಹಿತಿ ನೀಡುತ್ತಿದ್ದರು. ವಿವಿಧ ಬಡಾವಣೆಗಳ ಜನರು ಕ್ಯೂನಲ್ಲಿ ನಿಂತಿದ್ದರು. 200ಕ್ಕೂ ಹೆಚ್ಚು ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ. 

ಯಳ್ಳೂರ, ಧಾಮಣೆ, ಯಡಿಯೂರಪ್ಪ ಮಾರ್ಗ ಸೇರಿ ನಗರದಿಂದ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿವೆ. ಕೆಲವೆಡೆ ರಸ್ತೆಗಳೇ ಕೊಚ್ಚಿಕೊಂಡು ಹೋಗಿರುವುದರಿಂದ ತುರ್ತಾಗಿ ದುರಸ್ತಿ ಮಾಡಿಸುವ ಅಗತ್ಯವಿದೆ. ನಗರದ ಬಹುತೇಕ ರಸ್ತೆಗಳ ಡಾಂಬರ್‌ ಕಿತ್ತು ಮೇಲೆ ಬಂದಿದ್ದು, ತಗ್ಗು–ಗುಂಡಿಗಳು ಬಿದ್ದಿವೆ.          

Post Comments (+)