ಖಾನಾಪುರ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಕೆಲಸಮಯ ಜಿಟಿಜಿಟಿ ಸುರಿದದ್ದು ಹೊರತುಪಡಿಸಿದರೆ ಮಳೆ ಬಹುತೇಕ ಬಿಡುವು ಪಡೆದಿದೆ.
ತಾಲ್ಲೂಕಿನ ನಾಗರಗಾಳಿ, ಶಿರೋಲಿ, ಕಣಕುಂಬಿ, ಜಾಂಬೋಟಿ, ಭೀಮಗಡ, ಲೋಂಡಾ ಮತ್ತು ಗುಂಜಿ ಅರಣ್ಯ ಪ್ರದೇಶದಲ್ಲಿ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಿದೆ. ಶನಿವಾರ ತಾಲ್ಲೂಕಿನ ವಿವಿಧೆಡೆ ಒಟ್ಟು 18 ಮನೆಗಳಿಗೆ ಹಾನಿ ಉಂಟಾಗಿದೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.
ಮೂಲಗಳ ಪ್ರಕಾರ ಶನಿವಾರ ತಾಲ್ಲೂಕಿನಾದ್ಯಂತ ಸರಾಸರಿ 7 ಸೆಂ.ಮೀ ಮಳೆಯಾಗಿದೆ. ಲೋಂಡಾದಲ್ಲಿ ಗರಿಷ್ಠ ಮಳೆ ದಾಖಲಾಗಿದ್ದು, 11 ಸೆಂ.ಮೀ ಮಳೆ ದಾಖಲಾಗಿದೆ. ಕಣಕುಂಬಿಯಲ್ಲಿ 9.3 ಸೆಂ.ಮೀ, ಜಾಂಬೋಟಿಯಲ್ಲಿ 6.8 ಸೆಂ.ಮೀ, ಅಸೋಗಾದಲ್ಲಿ 4.8 ಸೆಂ.ಮೀ ಮಳೆ ಸುರಿದಿದೆ. ಮಹದಾಯಿ ಮತ್ತು ಮಲಪ್ರಭಾ ನದಿಯಲ್ಲಿ ನೀರಿನ ಹರಿವು ಯಥಾಸ್ಥಿತಿ ಮುಂದುವರೆದಿದೆ.
ಇದುವರೆಗಿನ ಮಳೆಯಿಂದಾಗಿ ತಾಲ್ಲೂಕಿನ ಗ್ರಾಮೀಣ ಭಾಗದ ಹಲವು ರಸ್ತೆಗಳು, ಸೇತುವೆಗಳು ಮತ್ತು ಬ್ರಿಡ್ಜ್ ಕಂ ಬ್ಯಾರೇಜ್‌ಗಳ ಮೇಲೆ ನೀರು ಹರಿಯುತ್ತಿದೆ. ಪರಿಣಾಮ ತಾಲ್ಲೂಕಿನ ಕಾನನದಂಚಿನ 50ಕ್ಕೂ ಹೆಚ್ಚು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತ ಮುಂದುವರಿದಿದೆ. ಅಲಾತ್ರಿ ಹಳ್ಳದ ಮೇಲೆ ನೀರಿನ ಹರಿವು ಇಳಿಮುಖವಾದ ಕಾರಣ ಸಿಂಧನೂರು- ಹೆಮ್ಮಡಗಾ ಹೆದ್ದಾರಿಯಲ್ಲಿ ವಾಹನ ಸಂಚಾರ ಶುರುವಾಗಿದೆ.
ಹಬ್ಬನಹಟ್ಟಿಯ ಆಂಜನೇಯ ಮತ್ತು ಇಟಗಿಯ ಮರುಳಶಂಕರ ದೇವಾಲಯಗಳು ಜಲಾವೃತವಾಗಿವೆ. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸರ್ಕಾರಿ ಶಾಲೆ ಮತ್ತು ಅಂಗನವಾಡಿಗಳಲ್ಲಿ ಇತ್ತೀಚೆಗಷ್ಟೇ ನಿರ್ಮಿಸಿದ ಕಟ್ಟಡಗಳು ಸೋರಲಾರಂಭಿಸಿವೆ. ನರೇಗಾ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳಡಿ ನಿರ್ಮಾಣಗೊಂಡ ತಾಲ್ಲೂಕಿನ ಡುಕ್ಕರವಾಡಿ, ಭಾಲ್ಕೆ ಗ್ರಾಮಗಳ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡ, ಅಡುಗೆಕೋಣೆಗಳ ಚಾವಣಿ ಸೋರುತ್ತಿವೆ. ಇದರಿಂದಾಗಿ ಶಾಲೆಗಳಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಮತ್ತು ಅಡುಗೆ ಮಾಡಲು ಅನಾನುಕೂಲ ಉಂಟಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.