ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರದ ಮಳೆ: ಕಮರುತ್ತಿದೆ ಬೆಳೆ

ವಿಳಂಬವಾಗುತ್ತಿರುವ ಮುಂಗಾರು; ಆತಂಕದಲ್ಲಿ ರೈತರು
ಅಕ್ಷರ ಗಾತ್ರ

ಚಿಕ್ಕೋಡಿ: ಬಹುನಿರೀಕ್ಷಿತ ‘ರೋಹಿಣಿ’ ಮತ್ತು ’ಮೃಗಶಿರ’ ಮಳೆ ಮೋಡಗಳ ಮೆರವಣಿಗೆಯೊಂದಿಗೆ ಮರೆಯಾಗಿದೆ. ಮುಂಗಾರು ಪೂರ್ವ ಮಳೆಯೂ ನಿರೀಕ್ಷಿತ ಮಟ್ಟದಲ್ಲಿ ಸುರಿದಿಲ್ಲ. ಪರಿಣಾಮವಾಗಿ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಮುಂಗಾರು ಬಿತ್ತನೆ ಕುಂಠಿತಗೊಂಡಿವೆ. ಕಬ್ಬು ಹೊರತುಪಡಿಸಿ ಕೇವಲ ಶೇ. 8ರಷ್ಟು ಬಿತ್ತನೆಯಾಗಿದೆ. ಮೊಳಕೆಯೊಡೆಯುತ್ತಿರುವ ಆ ಬೆಳೆಗಳೂ ಕೆಂಡದಂತಹ ಬಿಸಿಲಿನಿಂದಾಗಿ ಕಮರುತ್ತಿವೆ.

ಚಿಕ್ಕೋಡಿ, ಅಥಣಿ, ರಾಯಬಾಗ, ಹುಕ್ಕೇರಿ ಮತ್ತು ಗೋಕಾಕ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ವಾಡಿಕೆಯಂತೆ ಮೇ 31ಕ್ಕೂ ಮುನ್ನ 97.05 ಮಿ.ಮೀ. ಮುಂಗಾರು ಪೂರ್ವ ಮಳೆ ನಿರೀಕ್ಷಿಸಲಾಗಿತ್ತು. ಆದರೆ, ಶೇ. 25ರಷ್ಟು ಮಾತ್ರ ಮಳೆಯಾಗಿದೆ. ಈ ತಿಂಗಳಲ್ಲಿ ಈವರೆಗೆ ಶೇ. 47ರಷ್ಟು ನಿರೀಕ್ಷಿತ ಮಳೆ ಪೈಕಿ ಶೇ. 38.07ರಷ್ಟು ಮಳೆಯಾಗಿದ್ದು, ಅದರಲ್ಲೂ ಗೋಕಾಕ ಮತ್ತು ಹುಕ್ಕೇರಿ ತಾಲ್ಲೂಕುಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಎಲ್ಲ ತಾಲ್ಲೂಕುಗಳಲ್ಲೂ ಸಮನಾಗಿ ಮಳೆ ಹಂಚಿಕೆಯಾಗದಿರುವುದರಿಂದ ಮುಂಗಾರು ಹಂಗಾಮಿಗೆ ಭೂಮಿಯನ್ನು ಹದಗೊಳಿಸುವುದಕ್ಕೂ ರೈತರಿಗೆ ಸಾಧ್ಯವಾಗಿಲ್ಲ.

ಚಿಕ್ಕೋಡಿ ವಿಭಾಗದಲ್ಲಿ 2019-20ನೇ ಸಾಲಿನಲ್ಲಿ ಈವರೆಗೆ ವಾಡಿಕೆ ಮಳೆಗಿಂತ ಶೇಕ ಶೇ 56.4ರಷ್ಟು ಕಡಿಮೆ ಮಳೆಯಾಗಿದೆ. ಕ್ಷೇತ್ರ ಬಿತ್ತನೆ ಗುರಿ 4,14,479 ಹೆಕ್ಟೇರ್‌ಗಳಷ್ಟಿದ್ದು, ಈ ಪೈಕಿ ಕಬ್ಬು ಹೊರತುಪಡಿಸಿದರೆ ಕೇವಲ 16,796 ಹೆಕ್ಟರ್‌ ಮಾತ್ರ ಬಿತ್ತನೆಯಾಗಿದೆ. ಅದರಲ್ಲೂ ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆದಿರುವ ಸೊಯಾಬೀನ್ ಬೆಳೆ ಮೊಳಕೆಯಲ್ಲೇ ಕಮರುತ್ತಿದೆ.

‘ಮುಂಗಾರು ಪೂರ್ವದಲ್ಲಿ ಸುರಿದ ಮಳೆಯಲ್ಲಿ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಸೊಯಾಬೀನ್, ಹೆಸರು ಮೊದಲಾದ ಬೀಜಗಳನ್ನು ಬಿತ್ತನೆ ಮಾಡಿದ್ದು, ಈಗ ಅವು ಮೊಳಕೆಯೊಡೆದಿವೆ. ಆದರೆ, ಮತ್ತೆ ಮಳೆರಾಯ ಮಾಯವಾಗಿದ್ದಾನೆ. ಬೇಸಿಗೆಯನ್ನೂ ಮೀರಿಸುವಂತೆ ಬಿಸಿಲಿನ ವಾತಾವರಣವಿದೆ. ಇದರಿಂದಾಗಿ ಮೊಳಕೆಯಲ್ಲೇ ಬೆಳೆಗಳು ಕಮರಿ ಹೋಗುತ್ತಿವೆ’ ಎಂದು ಕರೋಶಿಯ ರೈತ ಸುನೀಲ ಶಿಂಗಾಯಿ ಅಳಲು ತೋಡಿಕೊಂಡರು.

‘ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ರೈತ ಸಂಪರ್ಕ ಕೇಂದ್ರಗಳು, ಹೆಚ್ಚುವರಿ ಕೇಂದ್ರಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಸೇರಿದಂತೆ 58 ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ರಸಗೊಬ್ಬರವನ್ನೂ ದಾಸ್ತಾನು ಮಾಡಲಾಗಿದೆ. ಜೂನ್ 30ರವರೆಗೆ ಸೋಯಾಬೀನ್ ಬಿತ್ತನೆ ಮಾಡಬಹುದಾಗಿದೆ. ಸದ್ಯ ಹೆಸರು ಮತ್ತು ಉದ್ದು ಬಿತ್ತನೆ ಹಂಗಾಮು ಅಂತ್ಯಗೊಂಡಿದೆ. ಹೀಗಾಗಿ ಗೋವಿನಜೋಳ ಮತ್ತು ಸೂರ್ಯಕಾಂತಿ ಬಿತ್ತನೆ ಬೀಜಗಳ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದ್ದು, ಬೀಜ ವಿತರಣೆಗೆ ಕೊರತೆಯಾಗದಂತೆ ದಾಸ್ತಾನು ಮಾಡಲಾಗಿದೆ. ಮಳೆಯಾದರೆ ಬಿತ್ತನೆ ಕಾರ್ಯ ಚುರುಕುಗೊಳ್ಳುತ್ತದೆ’ ಎಂದು ಉಪ ಕೃಷಿ ನಿರ್ದೇಶಕ ಎಚ್‌.ಡಿ. ಕೊಳೇಕರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT