ಬೆಳಗಾವಿ: ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಸರಾಸರಿ ಶೇ 47ರಷ್ಟು ಮಳೆ ಕೊರತೆ ಕಂಡುಬಂದಿದೆ.
ಜುಲೈ 3ನೇ ವಾರದಲ್ಲಿ ಪ್ರವಾಹ ಮತ್ತು ಅತಿವೃಷ್ಟಿ ಉಂಟಾಗಿತ್ತು. ಜಿಲ್ಲಾಡಳಿತ ನೀಡಿರುವ ಪ್ರಾಥಮಿಕ ಮಾಹಿತಿ ಪ್ರಕಾರ ₹ 2,800 ಕೋಟಿ ಹಾನಿ ಸಂಭವಿಸಿದೆ. 14 ತಾಲ್ಲೂಕುಗಳ 201 ಗ್ರಾಮಗಳು ಪ್ರವಾಹಕ್ಕೆ ತುತ್ತಾದವು. ನೆರೆಯಲ್ಲಿ ಸಿಲುಕಿದ್ದ 1,50,015 ಜನರನ್ನು ಹಾಗೂ 67,329 ಜಾನುವಾರುಗಳನ್ನು ರಕ್ಷಿಸಲಾಗಿತ್ತು. 1,19,422 ಹೆಕ್ಟೇರ್ ಕೃಷಿ ಹಾಗೂ ತೋಟಗಾರಿಕಾ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಅಲ್ಲಲ್ಲಿ 324 ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾಗೂ 5,003 ಭಾಗಶಃ ಹಾನಿಗೊಳಗಾಗಿವೆ. ಬಳಿಕ ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಜಿಲ್ಲೆಯಲ್ಲಿ ಮಳೆ ಪ್ರಮಾಣ ಇಳಿಕೆಯಾದ್ದರಿಂದ, ನೆರೆ ಹಾಗೂ ಅತಿವೃಷ್ಟಿಯ ಭೀತಿಯೂ ಕಡಿಮೆಯಾಯಿತು.
2019ರಲ್ಲಿ ಆಗಸ್ಟ್‌ನಲ್ಲಿ ಸುರಿದಿದ್ದ ಭಾರಿ ಮಳೆಯು ಇಡೀ ಜಿಲ್ಲೆಯನ್ನು ಅಕ್ಷರಶಃ ನಡುಗಿಸಿತ್ತು. ಸಾವಿರಾರು ಜನರು ಸಂತ್ರಸ್ತರಾಗುವಂತೆ ಮಾಡಿತ್ತು. ಆದರೆ, ಈ ಆಗಸ್ಟ್‌ನಲ್ಲಿ ಮಳೆಯು ಕಡಿಮೆ ಪ್ರಮಾಣದಲ್ಲಿ ಬಿದ್ದಿತು. 135 ಮಿ.ಮೀ. ವಾಡಿಕೆಯಲ್ಲಿ, ವಾಸ್ತವವಾಗಿ 72 ಮಿ.ಮೀ. ಮಾತ್ರವೇ ಮಳೆಯಾಗಿದೆ.
ರಾಮದುರ್ಗ, ಸವದತ್ತಿಯಲ್ಲಿ ಪ್ಲಸ್:
ಮಳೆ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದರಿಂದ ಕೃಷಿ ಚಟುವಟಿಕೆಗಳಿಗೆ ಮತ್ತು ಕೊಯ್ಲಿಗೆ ಬಹಳಷ್ಟು ಅನುಕೂಲವಾಯಿತು ಎನ್ನುವುದು ಕೃಷಿ ಅಧಿಕಾರಿಗಳ ಅಭಿಪ್ರಾಯವಾಗಿದೆ. ರಾಮದುರ್ಗ (ಶೇ 11) ಮತ್ತು ಸವದತ್ತಿ (ಶೇ 37) ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಉಳಿದೆಲ್ಲ ತಾಲ್ಲೂಕುಗಳಲ್ಲೂ ಕೊರತೆ ದಾಖಲಾಗಿದೆ.
ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ ಮತ್ತು ರಕ್ಕಸಕೊಪ್ಪ ಜಲಾಶಯಗಳು ತುಂಬಿವೆ. ಕೆರೆ–ಕಟ್ಟೆಗಳಲ್ಲೂ ಜಲ ಸಮೃದ್ಧಿ ಕಂಡುಬಂದಿದೆ. ಇನ್ನೂ ಮಳೆಗಾಲ ಮುಗಿದಿಲ್ಲ. ಸಾಮಾನ್ಯವಾಗಿ ಗಣೇಶ ಚತುರ್ಥಿ ಮುಗಿದ ನಂತರವೂ ಮಳೆಯಾಗುವುದು ಜಿಲ್ಲೆಯ ವಾಡಿಕೆ. ಹೀಗಾಗಿ, ಈ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಕೊರತೆ ಉಂಟಾಗುವ ಸಾಧ್ಯತೆ ಕಡಿಮೆ ಇದೆ. ಜುಲೈನಲ್ಲಿ ಸುರಿದ ಮಳೆಯು ನೀರ ನೆಮ್ಮದಿಯ ನಾಳೆಗಳಿಗೆ ಅನುಕೂಲ ಮಾಡಿಕೊಟ್ಟಿದೆ.
ಮುಂದುವರಿದರೆ:
ಜಿಲ್ಲೆಯಲ್ಲಿ ಜುಲೈನಲ್ಲಿ ಸರಾಸರಿ 190.8 ಮಿ.ಮೀ. ವಾಡಿಕೆಯಲ್ಲಿ 260.9 ಮಿ.ಮೀ. ಮಳೆಯಾಗಿತ್ತು.
ಜನವರಿ 1ರಿಂದ ಆ.30ವರೆಗೆ 567 ಮಿ.ಮೀ. ವಾಡಿಕೆ ಇದ್ದು, ಅದರಲ್ಲಿ 690 ಮಿ.ಮೀ. ಅಂದರೆ ಶೇ 22ರಷ್ಟು ಹೆಚ್ಚಿನ ಮಳೆ ದಾಖಲಾಗಿದೆ. ಮುಂಗಾರು ಹಂಗಾಮಿನಲ್ಲಿ ಅಂದರೆ ಜೂನ್ 1ರಿಂದ ಆ.30ರವರೆಗೆ 473 ಮಿ.ಮೀ. ವಾಡಿಕೆ ಪೈಕಿ 532 ಮಿ.ಮೀ. ಆಗಿದೆ. ಅಂದರೆ, ಶೇ 13ರಷ್ಟು ಹೆಚ್ಚಿನ ಮಳೆ ಬಿದ್ದಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ‘ಆಗಸ್ಟ್‌ನಲ್ಲಿ ಮಳೆ ಕೊರತೆ ಆಗಿರುವುದರಿಂದಾಗಿ ಬೆಳೆಗಳಿಗೆ ಯಾವುದೇ ತೊಂದರೆ ಆಗಿಲ್ಲ. ಜುಲೈನಲ್ಲಿ ಆದ ಮಳೆಯಿಂದಾಗಿ ಆಗಸ್ಟ್‌ನಲ್ಲೂ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಯಿತು. ಬಿತ್ತನೆ ಕಾರ್ಯ ಸಂಪೂರ್ಣ ಮುಗಿದಿದೆ. ಬೆಳೆಗಳು ಹಸಿರಿನಿಂದ ನಳನಳಿಸುತ್ತಿವೆ. ಹೆಸರು ಮತ್ತು ಸೋಯಾಬೀನ್ ಕೊಯ್ಲು ನಡೆದಿದೆ ಬಹುತೇಕ ಪೂರ್ಣಗೊಂಡಿದೆ’ ಎಂದು ತಿಳಿಸಿದರು.
ಶುಷ್ಕ ವಾತಾವರಣದ ಇದೇ ಪರಿಸ್ಥಿತಿ ಇನ್ನೂ ಕೆಲವು ದಿನಗಳು ಮುಂದುವರಿದರೆ, ಬೆಳೆಗಳು ಒಣಗುವ ಭೀತಿ ಎದುರಾಗಲಿದೆ ಎನ್ನುವುದು ಮಳೆಯಾಶ್ರಿತ ಪ್ರದೇಶಗಳಲ್ಲಿನ ರೈತರದಾಗಿದೆ.
ಆಗಸ್ಟ್ ಮಳೆಯ ವಿವರ
ತಾಲ್ಲೂಕು;ವಾಡಿಕೆ;ವಾಸ್ತವ;ಕೊರತೆ (ಶೇ)
(ಮಿ.ಮೀ.ಗಳಲ್ಲಿ)
ಅಥಣಿ;57;34;40
ಬೈಲಹೊಂಗಲ;121;66;45
ಬೆಳಗಾವಿ;266;86;68
ಚಿಕ್ಕೋಡಿ;109;56;49
ಗೋಕಾಕ;53;46;14
ಹುಕ್ಕೇರಿ;77;61;21
ಖಾನಾಪುರ;409;164;60
ರಾಮದುರ್ಗ;64;72;+11
ರಾಯಬಾಗ;55;33;40
ಸವದತ್ತಿ;55;76;+37
ಚನ್ನಮ್ಮನ ಕಿತ್ತೂರು;180;75;59
ನಿಪ್ಪಾಣಿ;151;69;55
ಕಾಗವಾಡ;65;33;49
ಮೂಡಲಗಿ;56;47;17
ಒಟ್ಟು;135;72;47
ಬೆಳೆ ಒಣಗುತ್ತಿಲ್ಲ
ಜಿಲ್ಲೆಯಲ್ಲಿ ಸದ್ಯಕ್ಕೆ ಬೆಳೆಗಳು ಒಣಗುವ ಪರಿಸ್ಥಿತಿ ಇಲ್ಲ. ಅಲ್ಲಲ್ಲಿ ಆಗಾಗ ಸಣ್ಣ ಪ್ರಮಾಣದಲ್ಲಿ ಮಳೆಯಾಗುತ್ತಿದೆ. 15 ದಿನಗಳ ನಂತರ ಹಿಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಆರಂಭಗೊಳ್ಳಲಿವೆ. ಆಶಾದಾಯಕ ಹಿಂಗಾರಿನ ನಿರೀಕ್ಷೆ ಇದೆ.
–ಶಿವನಗೌಡ ಪಾಟೀಲ, ಜಂಟಿ ನಿರ್ದೇಶಕ, ಕೃಷಿ ಇಲಾಖೆ
(ಮಾಹಿತಿ: ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ)
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.