ಬುಧವಾರ, ಆಗಸ್ಟ್ 21, 2019
27 °C
ಸಾಂಬ್ರಾದಲ್ಲಿ ಭೂಕುಸಿತ; ಕೊಚ್ಚಿ ಹೋದ ರಸ್ತೆ

ನಿಲ್ಲದ ಮಳೆಯ ಅಬ್ಬರ; ಜನಜೀವನ ತತ್ತರ

Published:
Updated:
Prajavani

ಬೆಳಗಾವಿ: ನಗರದಲ್ಲಿ ಸೋಮವಾರವೂ ಮಳೆಯ ಆರ್ಭಟ ಮುಂದುವರಿದಿದ್ದು, ನಗರದ ತಗ್ಗುಪ್ರದೇಶಗಳಲ್ಲಿ ನೀರು ನಿಂತು ಸಮಸ್ಯೆ ಉಂಟಾಗಿದೆ.

ಸಮರ್ಥ ನಗರ, ಭಾಗ್ಯ ನಗರ, ಕಪಿಲೇಶ್ವರ ಕಾಲೊನಿ, ಗಾಂಧಿ ನಗರ, ಯಳ್ಳೂರ ರಸ್ತೆ ಸೇರಿ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳಿಗೆ ತೊಂದೆರೆ ಉಂಟಾಗಿದೆ. ನಿವಾಸಿಗಳು ನೀರು ಹೊರಹಾಕಲು ಹರಸಾಹಸ ಮಾಡಬೇಕಾಯಿತು. ಕೆಲವು ಪ್ರದೇಶಗಳಲ್ಲಿ ಮನೆಗಳಲ್ಲಿ ನೀರು ತುಂಬಿ ಸಾಮಗ್ರಿಗಳಿಗೆ ಹಾನಿಯಾಗಿದೆ. ಸತತ ಮಳೆಯಿಂದ ತಗ್ಗು ಪ್ರದೇಶದ ಜನರು ಪ್ರತಿದಿನ ಸಂಕಟ ಪಡುವಂತಾಗಿದೆ.

ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಾಗಿದೆ. ಕೆಲವರು ತಮ್ಮ ಕಾರ್ಯಗಳ ನಿಮಿತ್ತ ಒಲ್ಲದ ಮನಸ್ಸಿನಿಂದಲೇ ಹೊರಬರುತ್ತಿದ್ದಾರೆ. ರೇನ್‌ ಕೋಟ್‌, ಪ್ಯಾಂಟ್‌ಗಳನ್ನು ಧರಿಸಿಯೇ ರಸ್ತೆಗೆ ಇಳಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. 

ರಸ್ತೆಯಲ್ಲಿ ತಗ್ಗು–ಗುಂಡಿ: ಧಾರಾಕಾರ ಮಳೆಯಿಂದ ಖಾನಾಪುರ ರಸ್ತೆ, ಅಂಬೇಡ್ಕರ್‌ ರಸ್ತೆ, ಕಾಲೇಜ್‌ ರಸ್ತೆ ಸೇರಿ ವಿವಿಧ ರಸ್ತೆಗಳಲ್ಲಿನ ಡಾಂಬರ್‌ ಕಿತ್ತು ಬರುತ್ತಿದ್ದು, ತಗ್ಗು–ಗುಂಡಿಗಳು ಉಂಟಾಗುತ್ತಿವೆ. ರಸ್ತೆಗಳಲ್ಲಿಯೂ ಮೊಣಕಾಲುದ್ದ ನೀರು ನಿಲ್ಲುತ್ತಿರುವುದರಿಂದ ವಾಹನ ಸವಾರರು ಸಂಚರಿಸಲು ಪರದಾಡಿದರು.

ಗಾಂಧಿ ನಗರ, ಯಳ್ಳೂರ, ಧಾಮಣೆ, ಮುತ್ಯಾನಟ್ಟಿ ಸೇರಿ ವಿವಿಧೆಡೆಯ ಹೊಲ–ಗದ್ದೆಗಳು ಜಲಾವೃತವಾಗಿವೆ. ಹೊಲಗಳಲ್ಲಿ ಪ್ರತಿದಿನ  ನೀರು ತುಂಬಿಕೊಳ್ಳುತ್ತಿದೆ.  

ಸಾಂಬ್ರಾ: ಧಾರಾಕಾರ ಮಳೆಯಿಂದ ಸಾಂಬ್ರಾದ ವಿಮಾನ ನಿಲ್ದಾಣದ ದಕ್ಷಿಣ ಭಾಗದಲ್ಲಿರುವ ಆವರಣದ ಗೋಡೆಗೆ ಹೊಂದಿಕೊಂಡಿರುವ ರಸ್ತೆಯಲ್ಲಿ ಭೂಕುಸಿತ ಉಂಟಾಗಿದ್ದು, ಹಳ್ಳದ ರೀತಿಯಲ್ಲಿ ನೀರು ಹರಿಯುತ್ತಿದೆ.

4 ಕಿ.ಮೀ ರಸ್ತೆ ಇದಾಗಿದ್ದು, ಅರ್ಧ ಕಿ.ಮೀ. ರಸ್ತೆ ಕೊಚ್ಚಿಕೊಂಡು ಹೋಗಿದೆ. ರಸ್ತೆಯ ಅಲ್ಲಲ್ಲಿ ದೊಡ್ಡ ತಗ್ಗುಗಳು ಉಂಟಾಗಿವೆ. ಇದರಿಂದ ವಿಮಾನ ನಿಲ್ದಾಣ ಆವರಣ ಗೋಡೆಯೂ ಕುಸಿಯುವ ಭೀತಿಯಲ್ಲಿದೆ. ಭೂಕುಸಿತ ಉಂಟಾಗಿರುವ ಸುದ್ದಿ ತಿಳಿದು ಗ್ರಾಮದ ನೂರಾರು ಜನರು ವೀಕ್ಷಿಸಲು ಆಗಮಿಸಿದರು.

ಮುತಗಾ, ಶಿಂದೋಳ್ಳಿ, ಬಸರಿಕಟ್ಟಿ ಗ್ರಾಮಸ್ಥರು ಇದೇ ರಸ್ತೆಯ ಮಾರ್ಗವಾಗಿ ಸಂಚರಿಸುತ್ತಿದ್ದರು. ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಗ್ರಾಮಸ್ಥರು 10 ಕಿ.ಮೀ. ಸುತ್ತು ಹಾಕಿ ಪ್ರಯಾಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳಪೆ ಕಾಮಗಾರಿ ಆರೋಪ: ರಸ್ತೆಗೆ ಮೂರ್ನಾಲ್ಕು ವರ್ಷಗಳಲ್ಲಿ ₹ 90 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಲಾಗಿದೆ. 2016ರಲ್ಲಿ ₹72 ಲಕ್ಷ ವೆಚ್ಚದಲ್ಲಿ ಕೇವಲ ಖಡಿ ಹಾಗೂ ಮಣ್ಣು ಹಾಕಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಮಳೆಯಿಂದ ಖಡಿ ಕಿತ್ತು ಬಂದಿದ್ದರಿಂದ, ಕಳೆದ 4 ತಿಂಗಳ ಹಿಂದೆ ಗ್ರಾಮ ಪಂಚಾಯ್ತಿಯಿಂದ ₹18 ಲಕ್ಷ ವೆಚ್ಚದಲ್ಲಿ ಮೆಟಲಿಂಗ್‌ ಕಾಮಗಾರಿ ಕೈಗೊಳ್ಳಲಾಗಿತ್ತು. ‘ಕಳಪೆ ಕಾಮಗಾರಿಯಿಂದ ರಸ್ತೆಯೇ ಕೊಚ್ಚಿ ಹೋಗಿದೆ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Post Comments (+)