ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರ್ತಿಯಾಗುವತ್ತ ರಕ್ಕಸಕೊಪ್ಪ ಜಲಾಶಯ: ನದಿಗೆ ನೀರು

ಮಳೆ ನಿಂತರೂ ತಗ್ಗದ ನದಿಗಳ ಹರಿವು
Last Updated 17 ಜುಲೈ 2022, 11:40 IST
ಅಕ್ಷರ ಗಾತ್ರ

ಬೆಳಗಾವಿ: ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಮಾರ್ಕಂಡೇಯ ನದಿ ಉಕ್ಕಿ ಹರಿಯುತ್ತಿದ್ದು, ತಾಲ್ಲೂಕಿನ ರಕ್ಕಸಕೊಪ್ಪ ಜಲಾಶಯ ಭರ್ತಿಯಾಗುತ್ತ ಸಾಗಿದೆ.

ಈಗ ಕೇವಲ ಒಂದೂವರೆ ಅಡಿ ಮಾತ್ರ ಬಾಕಿ ಉಳಿದಿದ್ದು, ಹೆಚ್ಚುವರಿ ನೀರನ್ನು ಭಾನುವಾರ ಬೆಳಿಗ್ಗೆಯಿಂದ ನದಿಗೆ ಹರಿಸಲಾಗುತ್ತಿದೆ.

ಈ ಜಲಾಶಯ 2,475 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಭಾನುವಾರ ಬೆಳಿಗ್ಗೆಯವರೆಗೆ ನೀರಿನ ಮಟ್ಟ 2,473.50 ಅಡಿಗೆ ಏರಿಕೆಯಾಗಿದೆ. ಭರ್ತಿಗೆ ಕೇವಲ ಒಂದೂವರೆ ಅಡಿ ಬಾಕಿ ಇದ್ದು, ಮುನ್ನೆಚ್ಚರಿಕೆ ದೃಷ್ಟಿಯಿಂದ ಹೆಚ್ಚುವರಿ ನೀರು ಹೊರಬಿಡಲಾಗುತ್ತಿದೆ ಎಂದು ಜಲಾಶಯದ ಅಧಿಕಾರಿಗಳು "ಪ್ರಜಾವಾಣಿ"ಗೆ ಮಾಹಿತಿ ನೀಡಿದರು.

ಈ ಜಲಾಶಯ ಪ್ರತಿವರ್ಷ ಜುಲೈ ಅಂತ್ಯಕ್ಕೆ ಭರ್ತಿಯಾಗುತ್ತಿತ್ತು. ಈ ಬಾರಿ ಖಾನಾಪುರ, ಬೆಳಗಾವಿ ತಾಲ್ಲೂಕು ಹಾಗೂ ಮಹಾರಾಷ್ಟ್ರದಲ್ಲಿ ಎಡೆಬಿಡದೆ ಮಳೆಯಾದ ಕಾರಣ ಜುಲೈ 3ನೇ ವಾರಕ್ಕೆ ಭರ್ತಿಯಾಗುವ ಹಂತ ತಲುಪಿದೆ. ನದಿ ದಡದ ರೈತರು ಎಚ್ಚರಿಕೆ ವಹಿಸುವಂತೆ ಜಲಮಂಡಳಿ ಅಧಿಕಾರಿಗಳು ಸೂಚಿಸಿದ್ದಾರೆ.

ಬೆಳಗಾವಿ ನಗರಕ್ಕೆ ರಕ್ಕಸಕೊಪ್ಪ ಹಾಗೂ ಹಿಡಕಲ್‌ ಜಲಾಶಯಗಳು ನೀರು ಪೂರೈಸುತ್ತವೆ. ರಕ್ಕಸಕೊಪ್ಪದಿಂದ ನಿತ್ಯ 55 ಎಂಎಲ್‌ಡಿ ಹಾಗೂ ಹಿಡಕಲ್‌ನಿಂದ 81 ಎಂಎಲ್‌ಡಿ (ಮಿಲಿಯನ್ ಲೀಟರ್ ಪರ್ ಡೇ) ನೀರು ಬೆಳಗಾವಿಗೆ ಸರಬರಾಜು ಆಗುತ್ತಿದೆ.

ಒಂದೆಡೆ ರಕ್ಕಸಕೊಪ್ಪ ಭರ್ತಿಯಾಗಿದ್ದರೆ, ಮತ್ತೊಂದೆಡೆ ಗರಿಷ್ಠ 51 ಟಿಎಂಸಿ ಸಾಮರ್ಥ್ಯದ ಹಿಡಕಲ್‌ನ ರಾಜಾ ಲಖಮಗೌಡ ಜಲಾಶಯದಲ್ಲಿ ಭಾನುವಾರ 27.57 ಟಿಎಂಸಿ ನೀರು ಸಂಗ್ರಹವಾಗಿದೆ. ಎರಡೂ ಜಲಾಶಯಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ನಗರವಾಸಿಗಳಲ್ಲಿ ಸಂತಸ ಮೂಡಿದೆ.

ಸೇತುವೆ ಸಂಚಾರ ಸ್ಥಗಿತ:

ಮಲಪ್ರಭಾ ನದಿ ಪಾತ್ರದ ಹರಿವು ಹೆಚ್ಚಾದ ಕಾರಣ ಗೋಕಾಕ ಹೊರವಲಯದ ಶಿಂಗಳಾಪುರ ಸೇತುವೆ ಮೇಲೆ ಶನಿವಾರ ಸಂಜೆಯಿಂದಲೇ ನೀರು ಹರಿಯುತ್ತಿದೆ. ಭಾನುವಾರ ನೀರಿನ ಸೆಳವು ಹೆಚ್ಚಾದ್ದರಿಂದ ಸೇತುವೆ ಸಂಚಾರ ಬಂದ್ ಮಾಡಲಾಗಿದೆ.

ಬಿಡುವು ನೀಡಿದ ಮಳೆ:

ಬೆಳಗಾವಿ ನಗರ, ತಾಲ್ಲೂಕು, ಖಾನಾಪುರ, ಸವದತ್ತಿ, ಗೋಕಾಕ ಸೇರಿದಂತೆ ಬಹುಪಾಲು ಎಲ್ಲ ತಾಲ್ಲೂಕುಗಳಲ್ಲೂ ಭಾನುವಾರ ಬೆಳಿಗ್ಗೆಯಿಂದ ಮಳೆ ಬಿಡುವು ಪಡೆದಿದೆ.

ಇದರಿಂದ ಹಲವು ಗ್ರಾಮಗಳ ರೈತರು ಕೃಷಿ ಕಾರ್ಯಕ್ಕೆ ಹೊಲಗಳತ್ತ ಮುಖ ಮಾಡಿದರು.

ಆದರೆ, ಶನಿವಾರ ರಾತ್ರಿ ಸುರಿದ ನೀರು ಇನ್ನೂ ಸೇತುವೆಗಳ ಮೇಲೆ ಹರಿಯುತ್ತಿರುವ ಕಾರಣ ಜಿಲ್ಲೆಯ 30 ಸಣ್ಣ ಸೇತುವೆಗಳ ಸಂಚಾರ ಸ್ಥಗಿತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT