ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮದುರ್ಗ ಫೇಸ್‌ಬುಕ್‌ ಪ್ರಕರಣ: ಶೇರ್‌ ಮಾಡಿದವರ ವಿರುದ್ಧವೂ ಕೇಸ್‌ !

Last Updated 4 ಮಾರ್ಚ್ 2019, 12:33 IST
ಅಕ್ಷರ ಗಾತ್ರ

ಬೆಳಗಾವಿ: ಶಾಂತಿ– ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದವರ ಜೊತೆಗೆ, ಅವುಗಳನ್ನು ಶೇರ್‌ ಮಾಡಿದವರ ವಿರುದ್ಧವೂ ಪ್ರಕರಣ ದಾಖಲಿಸಲು ಜಿಲ್ಲಾ ಪೊಲೀಸರು ಚಿಂತನೆ ನಡೆಸಿದ್ದಾರೆ.

ಕಳೆದ ವಾರ ರಾಮದುರ್ಗದಲ್ಲಿ ನಾಗರಾಜ ಮಾಳಿ ಎಂಬುವವರು ಪಾಕಿಸ್ತಾನದ ಪರ ಘೋಷಣೆಗಳನ್ನು ಮಹಮ್ಮದ್‌ ಶಫಿ ಬೆಣ್ಣಿ ಅವರ ಫೇಸ್‌ಬುಕ್‌ ಅಕೌಂಟ್‌ ಮೂಲಕ ಪೋಸ್ಟ್‌ ಮಾಡಿದ್ದರು. ಈ ಪೋಸ್ಟ್‌ ಅನ್ನು 29 ಜನರು ಶೇರ್‌ ಮಾಡಿದ್ದರು. 430ಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದರು. ಇದರಿಂದ ಸಾವಿರಾರು ಜನರು ಉದ್ರಿಕ್ತಗೊಂಡು ಕಲ್ಲು ತೂರಾಟ ನಡೆಸಿದ್ದರು. ಅಲ್ಲದೇ, ಬೃಹತ್‌ ಪ್ರತಿಭಟನೆಯನ್ನೂ ಮಾಡಿದ್ದರು.

ಈ ಸಂದೇಶವನ್ನು ಪೋಸ್ಟ್‌ ಮಾಡಿದ್ದ ನಾಗರಾಜ ಅವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇವರ ಸಂದೇಶವನ್ನು ಶೇರ್‌ ಮಾಡುವ ಮೂಲಕ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಹಾಗೂ ಶಾಂತಿಗೆ ಭಂಗ ತಂದ ವ್ಯಕ್ತಿಗಳ ಮೇಲೂ ಕ್ರಮ ಜರುಗಿಸಲು ಪೊಲೀಸರು ಯೋಚಿಸುತ್ತಿದ್ದಾರೆ.

ದೂರು ನೀಡಿದ್ದೇನೆ:‘ನನ್ನ ಫೇಸ್‌ಬುಕ್‌ ಖಾತೆಯಲ್ಲಿ ಪಾಕಿಸ್ತಾನದ ಪರ ಘೋಷಣೆಗಳನ್ನು ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ದೂರು ನೀಡಿದ್ದೇನೆ. ಶಾಂತಿಗೆ ಭಂಗ ತಂದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಮಹಮ್ಮದ್‌ ಶಫಿ ಬೆಣ್ಣಿ ಒತ್ತಾಯಿಸಿದ್ದಾರೆ.

ಶೇರ್‌ ಮಾಡುವುದೂ ಅಪರಾಧ:‘ಪ್ರಚೋದನಾಕಾರಿ ಸಂದೇಶಗಳನ್ನು ಪೋಸ್ಟ್‌ ಮಾಡುವುದಷ್ಟೇ ಅಲ್ಲ. ಅವುಗಳನ್ನು ಇನ್ನೊಬ್ಬರಿಗೆ ಶೇರ್‌ ಮಾಡುವುದೂ ಅಪರಾಧವಾಗಿದೆ. ಇವರ ವಿರುದ್ಧ ಐಪಿಸಿ 505 (2) ಅಡಿ ಪ್ರಕರಣ ದಾಖಲಿಸಬಹುದಾಗಿದೆ. ಇದು ಜಾಮೀನು ರಹಿತ ಅಪರಾಧವಾಗಿದೆ. ರಾಮದುರ್ಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಾಕಾರಿ ಸಂದೇಶಗಳನ್ನು ಶೇರ್‌ ಮಾಡಿದವರ ಮೇಲೆಯೂ ಕ್ರಮ ಜರುಗಿಸುವ ಬಗ್ಗೆ ಯೋಚಿಸುತ್ತಿದ್ದೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರಕುಮಾರ್‌ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಚೋದನಾಕಾರಿ ಸಂದೇಶಗಳನ್ನು ಪೋಸ್ಟ್‌ ಮಾಡುವುದು, ಅವುಗಳ ಬಗ್ಗೆ ಕಮೆಂಟ್‌ ಮಾಡುವುದು ಹಾಗೂ ಬೇರೊಬ್ಬರಿಗೆ ಶೇರ್‌ ಮಾಡುವುದು ಅಪರಾಧವಾಗಿದೆ. ಇವರ ಮೇಲಷ್ಟೇ ಅಲ್ಲದೇ, ಗ್ರೂಪ್‌ ಅಡ್ಮಿನ್‌ಗಳ ಮೇಲೂ ಕ್ರಮಕೈಗೊಳ್ಳಲು ಅವಕಾಶವಿದೆ. ಕೆಲವು ದಿನಗಳ ಹಿಂದೆ ಕಟಕೋಳದ ವ್ಯಕ್ತಿಗಳಿಬ್ಬರು ದೇಶಕ್ಕೆ ಸಂಬಂಧಿಸಿದಂತೆ ಫೇಸ್‌ಬುಕ್‌ನಲ್ಲಿ ಹಾಗೂ ವಾಟ್ಸ್‌ಆ್ಯಪ್‌ನಲ್ಲಿ ಅಶ್ಲೀಲ ಸಂದೇಶಗಳನ್ನು ಪೋಸ್ಟ್‌ ಮಾಡಿದ್ದರು. ಇವರನ್ನು ಬಂಧಿಸಿ, ಕಾನೂನಿನ ಪ್ರಕಾರ ಕ್ರಮ ಕೈಗೊಂಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT