ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮದುರ್ಗದಲ್ಲಿ ವಿಶೇಷ ಶಿವರಾತ್ರಿ

ಮುಳ್ಳೂರು ಕಣಿವೆಯಲ್ಲಿ ಸಿದ್ಧತೆ
Last Updated 20 ಫೆಬ್ರುವರಿ 2020, 12:50 IST
ಅಕ್ಷರ ಗಾತ್ರ

ರಾಮದುರ್ಗ (ಬೆಳಗಾವಿ): ಇಲ್ಲಿನ ಶಿವ ಪ್ರತಿಷ್ಠಾಪನಾ ಸೇವಾ ಸಮಿತಿಯು ಮಹಾಶಿವರಾತ್ರಿಯನ್ನು ಈ ವರ್ಷವೂ ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ಮಾಡಿಕೊಂಡಿದೆ.

ಹೊರವಲಯದ ಮುಳ್ಳೂರು ಕಣಿವೆಯಲ್ಲಿರುವ ಅಶೋಕ ವನದಲ್ಲಿ ಶಿವರಾತ್ರಿಯನ್ನು ವಿಶೇಷವಾಗಿ ಆಚರಿಸಲಾಗುವುದು. ಮೂರು ವರ್ಷಗಳ ಹಿಂದೆ ನಿರ್ಮಿಸಿರುವ 75 ಅಡಿ ಎತ್ತರದ ಬೃಹತ್‌ ಶಿವಮೂರ್ತಿಗೆ ಪೂಜೆ–ಪುನಸ್ಕಾರ ನೆರವೇರಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಿ ಭಕ್ತರನ್ನು ಸೆಳೆಯಲಾಗುತ್ತಿದೆ. ಈ ಬಾರಿ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ಕಾರ್ಯಕ್ರಮ ಇರುವುದಿಲ್ಲ.

ರಾಮೇಶ್ವರ ದೇವಸ್ಥಾನದಲ್ಲಿ ಫೆ.21ರಂದು ಬೆಳಿಗ್ಗೆ 8ರಿಂದ ರುದ್ರಾಭಿಷೇಕ, ಬಿಲ್ವಾರ್ಚನೆ ಪ್ರಾರಂಭವಾಗಲಿವೆ. ಶಿವನ ಮೂರ್ತಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಜಾಗರಣೆ ವೇಳೆ ಆಕಾಶವಾಣಿ ಕಲಾವಿದ ಗುರುನಾಥ ಶಾಸ್ತ್ರಿಗಳಿಂದ ಹರಿಕಥೆ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ಇರಲಿವೆ.

ಶಿವರಾತ್ರಿಯಂದು ಜಾಗರಣೆ ಅಂಗವಾಗಿ ಉಪವಾಸ ಮಾಡುವ ಭಕ್ತರಿಗೆ ಬೇಯಿಸಿದ ಶೇಂಗಾ ಬೀಜ, ಸಾಬೂದಾನಿ, ಖರ್ಜೂರ ನೀಡಲಾಗುವುದು. 50 ಸಾವಿರ ಜನಕ್ಕೆ 2 ಕ್ವಿಂಟಲ್‌ ಸಾಬುದಾನಿ, 10 ಕ್ವಿಂಟಲ್‌ ಬೇಯಿಸಿದ ಶೇಂಗಾ ಬೀಜ, 1 ಕ್ವಿಂಟಲ್‌ ಖರ್ಜೂರ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಟ್ಟಣದಿಂದ 3 ಕಿ.ಮೀ ದೂರದಲ್ಲಿರುವ ಶಿವನ ಮೂರ್ತಿ ಸ್ಥಳಕ್ಕೆ ಜನರನ್ನು ಕರೆದೊಯ್ಯಲು ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.

ಶಿವನ ಮೂರ್ತಿ ನಿರ್ಮಾಣವಾದ ಬಳಿಕ ಮುಳ್ಳೂರು ಬೆಟ್ಟ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಮೂರ್ತಿ ಮುಂಭಾಗ 21 ಅಡಿ ಎತ್ತರದ ನಂದಿ (ಬಸವ) ಮೂರ್ತಿ ನಿರ್ಮಾಣ ಪೂರ್ಣಗೊಳ್ಳುವ ಹಂತದಲ್ಲಿದೆ. ಅದನ್ನು ಬಸವ ಜಯಂತಿ ವೇಳೆಗೆ ಸಿದ್ಧಗೊಳಿಸುವ ಗುರಿಯನ್ನು ಸಮಿತಿ ಹೊಂದಿದೆ. ಶಿವನ ದೇವಸ್ಥಾನದ ಹಿಂಬದಿಯಲ್ಲಿ ಸಾಯಿಬಾಬಾ ಮಂದಿರವೂ ಅಂತಿಮ ರೂಪ ಪಡೆದುಕೊಳ್ಳುತ್ತಿದೆ. ಅದನ್ನು ಮುಂದಿನ ವರ್ಷದ ಶಿವರಾತ್ರಿ ವೇಳೆಗೆ ಉದ್ಘಾಟಿಸುವ ಯೋಜನೆ ಸಮಿತಿಯದು.

ಈ ಪರಿಸರದಲ್ಲಿ ಧ್ಯಾನ ಮಂದಿರ ನಿರ್ಮಿಸಲಾಗಿದೆ. ಅಲ್ಲಿ ಶಿವಲಿಂಗದ ಪೂಜೆ ನಿರಂತರವಾಗಿ ನಡೆಯುತ್ತಿದೆ. ಒಳಾಂಗಣದಲ್ಲಿ ಪರಂಪರೆ ಬಿಂಬಿಸುವ ಕಲಾಕೃತಿಗಳಿಂದ ಒಳಾಂಗಣವನ್ನು ಆಕರ್ಷಕಗೊಳಿಸಲಾಗಿದೆ. ಶಿವ ತಾಂಡವ ನೃತ್ಯ, ತ್ರಿಲೋಕ ದರ್ಶನ, ಭಗೀರಥ ಪ್ರಯತ್ನ, ಕಾಮದಹನ, ಗೋಕರ್ಣದ ಆತ್ಮಲಿಂಗ ದರ್ಶನ, ಅರ್ಧ ನಾರೀಶ್ವರ ದರ್ಶನ ಮುಂತಾದ ರೂಪಕಗಳ ಕಲಾಕೃತಿಗಳು ಗಮನಸೆಳೆಯತ್ತಿವೆ.

ಹೊರಾಂಗಣದಲ್ಲಿ ಭಕ್ತರ ಅನುಕೂಲಕ್ಕಾಗಿ ಗಾರ್ಡನ್‌ ನಿರ್ಮಾಣ ಕಾರ್ಯ ನಡೆದಿದೆ. ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ನಲ್ಲಿರುವ ಮಾದರಿಯಲ್ಲಿ ನೃತ್ಯ ಕಾರಂಜಿ ನಿರ್ಮಾಣದ ಯೋಜನೆಯೂ ಇದೆ. ಭಾನುವಾರ ದೀಪಾಲಂಕಾರ ಮಾಡುವ ಮೂಲಕ ಇಲ್ಲಿಗೆ ಪ್ರವಾಸಿಗರು ಹೆಚ್ಚುವಂತೆ ಮಾಡುವ ಉದ್ದೇಶ ಸಮಿತಿಯವರದು. ಪ್ರತಿ ಸೋಮವಾರ ಅನ್ನಪ್ರಸಾದ ವಿತರಣೆ ವ್ಯವಸ್ಥೆ ಮುಂದುವರಿಸಿಕೊಂಡು ಹೋಗುವ ಯೋಚನೆಯನ್ನು ಅವರು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT