ಸೋಮವಾರ, ಜನವರಿ 18, 2021
27 °C

ಗೋವಾ ವಾದ ಸಾಬೀತಾದರೆ ರಾಜೀನಾಮೆ ನೀಡುವೆ: ರಮೇಶ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕರ್ನಾಟಕವು ಮಹದಾಯಿ ನದಿಯ ನೀರನ್ನು ತಿರುಗಿಸಿಕೊಂಡಿದೆ ಎಂದು ಗೋವಾ ಮುಖ್ಯಮಂತ್ರಿ ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ. ಅದನ್ನು ಅವರು ಸಾಬೀತುಪಡಿಸಿದರೆ ತಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಸವಾಲು ಹಾಕಿದರು.

ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕಳಸಾ ನಾಲೆಗೆ ನಿರ್ಮಾಣವಾಗಿರುವ ಗೋಡೆಯನ್ನು ನಾವು ಮುಟ್ಟಿಲ್ಲ. ರಾಜ್ಯದಿಂದ ಕಾನೂನು ಬಾಹಿರವಾಗಿ ಯಾವುದೇ ಕೆಲಸ ಮಾಡಿಲ್ಲ. ಬೇಕಿದ್ದರೆ ಅವರು ಇಲ್ಲಿಗೆ ಬಂದು ನೋಡಲಿ’ ಎಂದು ಹೇಳಿದರು.

‘ರಾಜಕೀಯ ಗಿಮಿಕ್‌ಗಾಗಿ ಅವರು ಈ ರೀತಿಯ ಹೇಳಿಕೆ ಕೊಟ್ಟಿದ್ದಾರೆ. ಅವರ ರಾಜ್ಯದ ಹಿತ ಕಾಪಾಡಿಕೊಳ್ಳಲು ಹೀಗೆ ಮಾತನಾಡಿದ್ದಾರೆ. ಈ ವಿಷಯದಲ್ಲಿ ಅಲ್ಲಿ ರಾಜಕೀಯ ನಡೆಯುತ್ತದೆ. ಆದರೆ, ನಮ್ಮ ರಾಜ್ಯದ ಹಿತ ಕಾಯಲು ನಾವು ಬದ್ಧವಾಗಿದ್ದೇವೆ. ಇದು ಅತ್ಯಂತ ಸೂಕ್ಷ್ಮ ಹಾಗೂ ಗಂಭೀರ ವಿಷಯ ಆಗಿರುವುದರಿಂದ ಎಲ್ಲವನ್ನೂ ಮಾಧ್ಯಮದ ಮುಂದೆ ಹೇಳಲಾಗುವುದಿಲ್ಲ. ಕಾಮಗಾರಿ ಆರಂಭಕ್ಕೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಇಲಾಖೆಯಿಂದ ಅಗತ್ಯ ಅನುಮತಿ ಪಡೆದುಕೊಳ್ಳಲು ಬೇಕಾದ ಕ್ರಮಗಳನ್ನು ನಾವು ಕೈಗೊಂಡಿದ್ದೇವೆ’ ಎಂದರು.

‘ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ಕರ್ನಾಟಕ ಮತ್ತು ಗೋವಾ ಮುಖ್ಯಮಂತ್ರಿಗಳ ಮಾತುಕತೆ ಅವಶ್ಯವಿಲ್ಲ’ ಎಂದು ತಿಳಿಸಿದರು.

ಸಭೆ ಮುಂದೂಡಿಕೆ

ಕಳಸಾ–ಬಂಡೂರಿ ಯೋಜನೆ ಬಗ್ಗೆ ಚರ್ಚಿಸಲು ಸಚಿವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ಕರೆದಿದ್ದರು. ಆದರೆ, ಗ್ರಾಮ ಪಂಚಾಯಿತಿ ಚುನಾವಣೆ ನೀತಿಸಂಹಿತೆ ಜಾರಿಯಾದ ಕಾರಣದಿಂದ ಸಭೆ ಮುಂದೂಡಲಾಯಿತು. ಕೋವಿಡ್–19 ವಿಷಯದ ಬಗ್ಗೆ ಕೆಲವು ನಿಮಿಷಗಳಷ್ಟೇ ಚರ್ಚಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು