ಸೋಮವಾರ, ಜನವರಿ 25, 2021
28 °C

'ಸಚಿವ ಸ್ಥಾನ ಕೊಡಿಸುವುದಕ್ಕಾಗಿಯೇ ರಮೇಶ ಜಾರಕಿಹೊಳಿ ದೆಹಲಿಗೆ ಹೋಗಿರಲೂಬಹುದು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

CN Ashwath Narayan

ಬೆಳಗಾವಿ: ತಮ್ಮೊಂದಿಗೆ ಬಿಜೆಪಿ ಸೇರಿದವರಿಗೆ ಸಚಿವ ಸ್ಥಾನ ಕೊಡಿಸುವುದಕ್ಕಾಗಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ದೆಹಲಿ ಪ್ರವಾಸ ಕೈಗೊಂಡಿರಲೂಬಹುದು. ಇದರಲ್ಲಿ ತಪ್ಪೇನಿಲ್ಲ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ‌.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಮಂಗಳವಾರ ಬಂದಿಳಿದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

'ಎಲ್ಲ ಸಚಿವರೂ ಕ್ರಿಯಾಶೀಲವಾಗಿ ಓಡಾಡಬೇಕು. ಯೋಜನೆಗಳ ಬಗ್ಗೆ ಚರ್ಚಿಸಲು ದೆಹಲಿಗೂ ಹೋಗಬೇಕು. ಈ ನಿಟ್ಟಿನಲ್ಲಿ ರಮೇಶ ಜಾರಕಿಹೊಳಿ ಕೆಲಸ ಮಾಡುತ್ತಿದ್ದಾರೆ. ತಮ್ಮೊಂದಿಗೆ ಬಂದವರ ಹಿತ ಕಾಯಲು ಅವರು ಮುಂದಾಗಿದ್ದರೆ ಅದರಲ್ಲಿ ತಪ್ಪಿಲ್ಲ' ಎಂದರು.

'ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಅವರು ಹೇಳಿದ್ದಾರೆ. ಈ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ವದಂತಿಗಳಿಗೆ ಹೆಚ್ಚು ಬೆಲೆ ಕೊಡಬೇಕಿಲ್ಲ. ಪಕ್ಷದ ವಿರುದ್ಧ ಮಾತನಾಡುವವರ ವಿರುದ್ಧ ರಾಜ್ಯ ಘಟಕದ ಅಧ್ಯಕ್ಷರು ಕ್ರಮ ತೆಗೆದುಕೊಳ್ಳಲಿದ್ದಾರೆ' ಎಂದು ಸ್ಪಷ್ಟಪಡಿಸಿದರು.

'ಸಿ.ಪಿ. ಯೋಗೀಶ್ವರ್ ಅವರನ್ನು ಸಚಿವರನ್ನಾಗಿ ಮಾಡಬೇಕು ಎಂಬ ಒತ್ತಾಯ ಹಿಂದಿನಿಂದಲೂ ಇದೆ. ಮುಖ್ಯಮಂತ್ರಿ ಈ ವಿಷಯದಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ. ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎನ್ನುವುದು ಅವರ ಪರಮಾಧಿಕಾರ' ಎಂದು ಪ್ರತಿಕ್ರಿಯಿಸಿದರು.

'ಮರಾಠಾ ಅಭಿವೃದ್ಧಿ ‌ನಿಗಮ ಬಹಳ ಅಗತ್ಯವಾಗಿತ್ತು. ಅವರೂ ನಮ್ಮವರೇ. ಕನ್ನಡಿಗರೇ. ಅವರ ಅಭಿವೃದ್ಧಿಗೂ ಸರ್ಕಾರ ಕ್ರಮ ವಹಿಸಬೇಕಲ್ಲವೇ? ಈ ವಿಷಯದಲ್ಲಿ ಸಂಘಟನೆಗಳು ಪ್ರತಿಭಟನೆ ನಡೆಸುವುದು ಸಮಂಜಸವಲ್ಲ' ಎಂದರು.

'ನಮ್ಮ ಸರ್ಕಾರ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಬದ್ಧವಾಗಿದೆ. ಒಕ್ಕಲಿಗರ ಅಭಿವೃದ್ಧಿ ನಿಗಮವನ್ನೂ ಸ್ಥಾಪಿಸಲೇಬೇಕು. ಜನರ ಅಪೇಕ್ಷೆಯೂ ಇದೆ. ತಕ್ಷಣವೇ ಈ ಕೆಲಸ ಮಾಡಲೇಬೇಕು' ಎಂದು ಒತ್ತಾಯಿಸಿದರು.

'ವಿದ್ಯಾರ್ಥಿಗಳು ಹಾಗೂ ಪೋಷಕರ ಒತ್ತಾಯದಂತೆ ಪದವಿ ಕಾಲೇಜುಗಳನ್ನು ಪುನರಾರಂಭ ಮಾಡಿದ್ದೇವೆ. ಅವರಿಗೆ ಅನಾನುಕೂಲ ಮಾಡಿಕೊಡುವ ಉದ್ದೇಶವಿಲ್ಲ. ಅವರ ಭವಿಷ್ಯದ ಹಿತದೃಷ್ಟಿಯಿಂದ ನಾವು ಸುರಕ್ಷತೆಗೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕಾಲೇಜುಗಳನ್ನು ಆರಂಭಿಸಿದ್ದೇವೆ. ಪರೀಕ್ಷೆ ನಡೆಸಿದಾಗ ಕೆಲವರಿಗೆ ಕೋವಿಡ್-19 ಪಾಸಿಟಿವ್ ಬಂದಿದೆ. ಅವರು ನೆಗೆಟಿವ್ ವರದಿ ಬಂದ ನಂತರ ಕಾಲೇಜಿಗೆ ಬರಬಹುದು. ಆನ್ ಲೈನ್ ಹಾಗೂ ಆಫ್ ಲೈನ್ ಎರಡಕ್ಕೂ ಮುಕ್ತ ಅವಕಾಶ ಇದೆ. ಯಾರಿಗೂ ಒತ್ತಡವಿಲ್ಲ. ಪ್ರಸ್ತುತ ಶೇ 10ರಷ್ಟು ಹಾಜರಾತಿ ಇದೆ' ಎಂದು ಹೇಳಿದರು.

'ಪದವಿ ಕಾಲೇಜುಗಳ ಸೆಮಿಸ್ಟರ್ ಪರೀಕ್ಷೆಗಳು ಮುಂದಕ್ಕೆ ಹೋಗಲಿವೆ. ರಜೆಗಳನ್ನು ಕಡಿತಗೊಳಿಸಿ ಸರಿದೂಗಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷದವರೆಗೆ ಎಲ್ಲವೂ ಸಹಜ ಸ್ಥಿತಿಗೆ ಬರಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು