ಹುಕ್ಕೇರಿ: ‘ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಿಬ್ಬಂದಿಗೆ ಭವಿಷ್ಯದ ಅನುಕೂಲಕ್ಕಾಗಿ ನೂತನವಾಗಿ ಪಿಂಚಣಿ ರೂಪದಲ್ಲಿ ಪ್ರತಿ ತಿಂಗಳು ಪ್ರೋತ್ಸಾಹಧನ ಯೋಜನೆ ಜಾರಿಗೊಳಿಸಲಾಗಿದೆ’ ಎಂದು ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ತಿಳಿಸಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಪಿಎಫ್ ಸಂಯೋಜನೆಯಡಿ ಸಿಬ್ಬಂದಿ ಹಾಗೂ ಅವಲಂಬಿತರಿಗೆ ಸಿಗುತ್ತಿರುವ ಅತ್ಯಲ್ಪ ಮೊತ್ತದ ಪಿಂಚಣಿಯಡಿ ಜೀವನ ಸಾಗಿಸುವುದು ಕಠಿಣ ಎಂದು ಮನಗಂಡು ಬ್ಯಾಂಕ್ ಆಡಳಿತ ಮಂಡಳಿ ಈ ಯೋಜನೆ ಜಾರಿಗೊಳಿಸಲು ತೀರ್ಮಾನಿಸಿದ್ದು, ಸಿಬ್ಬಂದಿಗೆ ಮಾಸಿಕ ₹5 ಸಾವಿರ ಹಾಗೂ ಅವಲಂಬಿತರಿಗೆ ₹ ಎರಡೂವರೆ ಸಾವಿರ ಪಿಂಚಣಿ ನೀಡಲು ಯೋಜನೆ ರೂಪಿಸಲಾಗಿದೆ’ ಎಂದರು.
‘ಈ ಹಿಂದೆ 1993 ರಿಂದ 2003 ರವರೆಗೆ ಬ್ಯಾಂಕಿನ ಆರ್ಥಿಕ ಸ್ಥಿತಿ ತೊಂದರೆಯಲ್ಲಿದ್ದಾಗ ಬ್ಯಾಂಕ್ ಸಿಬ್ಬಂದಿ ಆಡಳಿತ ಮಂಡಳಿಗೆ ನೀಡಿದ ಸಹಕಾರ ಗಮನಿಸಿ, ನೌಕರರ ಬೇಡಿಕೆಯಂತೆ ಆಡಳಿತ ಮಂಡಳಿಯೂ ಈವರೆಗೆ ನಿವೃತ್ತರಾದ ಹಾಗೂ ನಿಧನರಾದ ಸಿಬ್ಬಂದಿ ಅವಲಂಬಿತರ ಕುಟುಂಬಗಳಿಗೆ ಯೋಜನೆ ಜಾರಿಗೊಳಿಸಲು ನಿರ್ಧರಿಸಿದೆ’ ಎಂದರು.
‘ಈಗಾಗಲೇ ಯೋಜನೆಗೆ 371 ಸಿಬ್ಬಂದಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ 366 ಜನ ಸಿಬ್ಬಂದಿಗೆ ₹ 5 ಸಾವಿರದಂತೆ ಕಳೆದ ಎಪ್ರಿಲ್2023 ರಿಂದ ಅಕ್ಟೋಬರ್ 2023ರವರೆಗೆ ₹ 1.28 ಕೋಟಿ ಪಾವತಿಸಲಿದ್ದು, ಜತೆಗೆ ಅವಲಂಬಿತ 136 ಕುಟುಂಬಗಳ ಪೈಕಿ 126 ಜನರಿಗೆ ತಲಾ ಎರಡೂವರೆ ಸಾವಿರದಂತೆ ₹ 22.05 ಲಕ್ಷ ಪಾವತಿಸಲಿದ್ದು, ಒಟ್ಟಾರೆ ₹ 1.50 ಕೋಟಿ ಬ್ಯಾಂಕಿನ ನಿವೃತ್ತ ಸಿಬ್ಬಂದಿ ಹಾಗೂ ಅವಲಂಬಿತ ಕುಟುಂಬಗಳ ಕೈಸೇರಲಿದೆ’ ಎಂದರು.
‘ಈಗಾಗಲೇ ಸಿಬ್ಬಂದಿಗೆ ಐಸಿಐಸಿಐ ಪ್ರೊಡೆನ್ಸಿಯಲ್ ಇನ್ಸುರೆನ್ಸ್ ಸಹಯೋಗದಲ್ಲಿ ಗ್ರುಪ್ ಟರ್ಮ ವಿಮೆ ಯೋಜನೆಯಡಿ ಪ್ರತಿಯೊಬ್ಬ ಸಿಬ್ಬಂದಿಗೂ ಆರೋಗ್ಯ ಹಾಗೂ ಜೀವ ವಿಮೆ ಮಾಡಿಸಲಾಗಿದೆ’ ಎಂದರು.
‘ರಾಷ್ಟ್ರೀಕೃತ ಬ್ಯಾಂಕ್‌ಗಳಂತೆ ನಮ್ಮ ಬ್ಯಾಂಕ್ ಕೂಡಾ ಗ್ರಾಮೀಣ ಭಾಗದ ರೈತರಿಗೆ ಆಕರ್ಷಕ ಬಡ್ಡಿದರದಲ್ಲಿ ಬೈಕ್ ಮತ್ತು ಕಾರ್ ಸಾಲ ನೀಡಲು ವಿಶೇಷ ಯೋಜನೆ ರೂಪಿಸಿದ್ದು, ರೈತರು ಈ ಯೋಜನೆ ಸದುಪಯೋಗ ಪಡೆಯಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.