ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿರುವವರಿಗೆ ನೆರವಾಗೋಣ

Last Updated 24 ಮೇ 2020, 10:33 IST
ಅಕ್ಷರ ಗಾತ್ರ

ಬೆಳಗಾವಿ: ರಂಜಾನ್‌ ಇದೊಂದು ಪವಿತ್ರ ಮಾಸ. ಸರ್ವ ಶ್ರೇಷ್ಠನಾದ ಅಲ್ಲಾ ದೇವರು ಪವಿತ್ರ ಗ್ರಂಥ ಖುರಾನ್ ಅನ್ನು ಅವಿರ್ಭಾವಗೊಳಿಸಿದ ತಿಂಗಳು ಇದಾಗಿದೆ. ಉಳಿದ ತಿಂಗಳಿಗಿಂತ ಈ ಸಂದರ್ಭದಲ್ಲಿ ದೇವರ ಆಶೀರ್ವಾದ ಹೆಚ್ಚಾಗಿ ಲಭಿಸುತ್ತದೆ. ಈ ಸಮಯದಲ್ಲಿ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ದೇವರ ಕೃಪೆ ಜಾಸ್ತಿ ಪ್ರಮಾಣದಲ್ಲಿ ಸಿಗುತ್ತದೆ. ಆದರೆ, ಈ ಬಾರಿ ಮಾರಕ ಕೊರೊನಾ ಹಬ್ಬದ ಸಂಭ್ರಮವನ್ನು ಕಸಿದುಕೊಂಡಿದೆ. ಹೀಗಾಗಿ, ಒಂದು ತಿಂಗಳ ಕಾಲ ಮನೆಯಲ್ಲೆ ನಿತ್ಯ ಐದು ಹೊತ್ತು ನಮಾಜ್ ಮಾಡಿದ ಮುಸ್ಲಿಮರು, ಈಗ ಹಬ್ಬದ ದಿನದಂದು ಕೂಡ ಮನೆಯಲ್ಲೇ ಪ್ರಾರ್ಥನೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಕೊರೊನಾ ನಿಯಂತ್ರಣಕ್ಕಾಗಿ ಪ್ರತಿ ಮಸೀದಿ ಹಾಗೂ ಈದ್ಗಾ ಮೈದಾನಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮಾಡಿರುವ ಈ ನಿಯಮವನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು. ಮನೆ–ಮನಗಳಲ್ಲೇ ದೇವರಿದ್ದಾನೆ. ಆತನನ್ನು ಸ್ಮರಿಸಿ ಮನೆಯಲ್ಲೇ ಧಾರ್ಮಿಕ ಕಾರ್ಯಕ್ರಮ, ಈದ್ ನಮಾಜ್‌ ಅನ್ನು ಶಿಸ್ತುಬದ್ಧವಾಗಿ ಮಾಡಬೇಕು. ಅಲ್ಲಿಯೂ ಕೂಡ ಅಂತರ ಕಾಪಾಡಿಕೊಳ್ಳಬೇಕು. ದೇಶಕ್ಕೆ ಬಂದಿರುವ ಮಾರಕ ಕೊರೊನಾ ತೊಲಗಲಿ, ಸರ್ವರ ಬಾಳು ಕೂಡ ಸಮೃದ್ಧವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಬೇಕು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ನಿಯಮ ಪಾಲಿಸುವುದು ನಮ್ಮ ಕರ್ತವ್ಯವಾಗಿದೆ. ಹೀಗಾಗಿ, ಎಲ್ಲವನ್ನೂ ಪಾಲಿಸಬೇಕು. ದೇಶದೊಂದಿಗೆ ನಾವಿದ್ದೇವೆ ಎನ್ನುವುದನ್ನು ತೋರಿಸಬೇಕು.

ಈದ್ ಉಲ್ ಫಿತ್ರ್‌ ಅಂಗವಾಗಿ ‘ಈದ್‌ ನಮಾಜ್‌’ ಮುಗಿಸಿದ ನಂತರ ಮುಸ್ಲಿಮರು ತಮ್ಮ ಗೆಳೆಯರು ಹಾಗೂ ಸಂಬಂಧಿಕರ ಮನೆಗೆ ಹೋಗಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಸಂಪ್ರದಾಯ. ಆದರೆ, ಈಗ ಕೋವಿಡ್–19 ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ದೂರವಾಣಿ ಮೂಲಕವೇ ಶುಭಾಶಯ ಕೋರಬೇಕು. ರಂಜಾನ್ ತಿಂಗಳಲ್ಲಿ ಪ್ರತಿಯೊಬ್ಬರೂ ತಮ್ಮ ಆದಾಯದಲ್ಲಿ ಶೇ 2.5ರಷ್ಟು ಹಣವನ್ನು ಬಡವರು, ನೊಂದವರು ಹಾಗೂ ಸಂಕಷ್ಟದಲ್ಲಿರುವವರಿಗೆ ‘ಜಕಾತ್’ ರೂಪದಲ್ಲಿ ದಾನ ನೀಡುವುದು ಕಡ್ಡಾಯವಾಗಿದೆ. ಆದರೆ, ಈ ಬಾರಿ ಲಾಕ್‌ಡೌನ್‌ನಿಂದ ಬಹಳಷ್ಟು ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬಹಳಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಊಟಕ್ಕೂ ಗತಿ ಇಲ್ಲದಂತಹ ಪರಿಸ್ಥಿತಿ ಬಂದಿದೆ. ಸರ್ವ ಧರ್ಮದ ಲೇಸನ್ನೇ ಬಯಸುವ ಇಸ್ಲಾಂ ಧರ್ಮದವರಾದ ನಾವು ಜಾತಿ, ಧರ್ಮ ಮರೆತು ಸಂಕಷ್ಟದಲ್ಲಿರುವವರಿಗೆ ಕೈಲಾದಷ್ಟು ನೆರವಾಗಬೇಕು. ಸ್ಥಿತಿವಂತರಿದ್ದರೆ ಆರ್ಥಿಕವಾಗಿ ಸಹಾಯ ಮಾಡಬೇಕು. ನೆರೆ ಹೊರೆಯಲ್ಲಿ ಕೊರೊನಾ ವಾರಿಯರ್‌ಗಳಾಗಿ ಕೆಲಸ ಮಾಡುತ್ತಿರುವವರಿಗೆ ಧನ್ಯವಾದ ಸಲ್ಲಿಕೆಯ ರೂಪದಲ್ಲಿ ನೆರವಾಗುವ ಮೂಲಕ ಅಭಿನಂದಿಸಬೇಕು.

ಜಾಕೀರ್ ಹುಸೇನ್ ಆರೀಫ್ ಖಾನ್, ಧರ್ಮಗುರುಗಳು, ಮಹಮ್ಮದೀಯಾ ಮಸೀದಿ, ಪೊಲೀಸ್ ಕೇಂದ್ರ ಸ್ಥಾನ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT