ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವಿನ ಶಸ್ತ್ರಚಿಕಿತ್ಸೆ ನೆರವೇರಿಸಿದ ಕೆಎಲ್‌ಇ ವೈದ್ಯರು

Last Updated 28 ಅಕ್ಟೋಬರ್ 2020, 15:28 IST
ಅಕ್ಷರ ಗಾತ್ರ

ಬೆಳಗಾವಿ: ಖಾನಾಪುರ ತಾಲ್ಲೂಕಿನ ಕಣಕುಂಬಿಯ 15 ತಿಂಗಳ ಮಗುವಿನ ಹೃದಯದಲ್ಲಿ ರಂದ್ರ ಉಂಟಾಗಿ ಕಾಣಿಸಿಕೊಂಡಿದ್ದ ಸಮಸ್ಯೆಯನ್ನು ಇಲ್ಲಿನ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯರು ಶಸ್ತ್ರಚಿಕಿತ್ಸೆ ನೆರವೇರಿಸುವ ಮೂಲಕ ನಿವಾರಿಸಿದ್ದಾರೆ.

ಮಗು ಕೆಮ್ಮು, ಉಸಿರಾಟದಲ್ಲಿ ತೊಂದರೆ, ತೀವ್ರವಾದ ಬೆವರು ಮೊದಲಾದ ತೊಂದರೆ ಅನುಭವಿಸುತ್ತಿತ್ತು. ಖಾನಾಪುರದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಕೆಎಲ್‌ಇ ಆಸ್ಪತ್ರೆಗೆ ಕಳುಹಿಸಿದ್ದರು. ಸಮಗ್ರ ತಪಾಸಣೆಗೆ ಒಳಪಡಿಸಿದಾಗ ಹೃದಯದಲ್ಲಿ ರಂದ್ರ ಇರುವುದು ಕಂಡು ಬಂದಿತ್ತು. ವೈದ್ಯರು ತಕ್ಷಣ ಶಸ್ತ್ರಚಿಕಿತ್ಸೆ ನಡೆಸಿ, ಮಗುವಿನ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಗುವನ್ನು ಗಮನಿಸಿದ ರೋಟರಿ ಕ್ಲಬ್ ಸದಸ್ಯರು ತಪಾಸಣೆಗೆ ಒಳಪಡಿಸಿ, ಶಸ್ತ್ರಚಿಕಿತ್ಸೆಗಾಗಿ
ಕಳುಹಿಸಿಕೊಟ್ಟಿದ್ದರು ಎಂದು ಪ್ರಕಟಣೆ ತಿಳಿಸಿದೆ.

‘ಡಾ.ಪ್ರವೀಣ ತಂಬ್ರಳ್ಳಿಮಠ ಮತ್ತವರ ತಂಡವು 3 ಗಂಟೆ ಶಸ್ತ್ರಚಿಕಿತ್ಸೆ ನಡೆಸಿ, ಹೃದಯದಲ್ಲಿನ ರಂದ್ರ ಸರಿಪಡಿಸಿದ್ದಾರೆ. ಶಸ್ತ್ರಚಿಕಿತ್ಸೆ ಮಾಡದಿದ್ದಲ್ಲಿ ಹೃದಯದೊಂದಿಗೆ ಶ್ವಾಸಕೋಶಕ್ಕೂ ಹಾನಿ ಉಂಟಾಗುವ ಸಾಧ್ಯತೆ ಹೆಚ್ಚಿತ್ತು. ಕೋವಿಡ್–19 ಕಾರಣದಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಕೊಳ್ಳುವ ಮೂಲಕ ಶಸ್ತ್ರಚಿಕಿತ್ಸೆ ನಡೆಸಿ, ನಂತರ ತೀವ್ರ ನಿಗಾ ಘಟಕದಲ್ಲಿ ಆರೈಕೆ ಮಾಡಲಾಯಿತು’ ಎಂದು ಮಾಹಿತಿ ನೀಡಲಾಗಿದೆ.

‘100 ಮಕ್ಕಳಲ್ಲಿ ಒಬ್ಬ ಮಗು ಈ ರೀತಿಯ ಹೃದಯ ತೊಂದರೆಯಿಂದ ಬಳಲುವುದು ಕಂಡುಬರುತ್ತದೆ. ಸೋಂಕಿನ ಸಂದರ್ಭದಲ್ಲಿ ಈ ರೀತಿಯ ತೊಂದರೆಯುಳ್ಳ ಐದು ಮಕ್ಕಳಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಸಂಪೂರ್ಣ ವೆಚ್ಚವನ್ನು ರೋಟರಿ ಸಂಸ್ಥೆ ಭರಿಸಿದೆ’ ಎಂದು ಮಾಹಿತಿ ನೀಡಲಾಗಿದೆ.

ತಂಡವನ್ನು ರೋಟರಿ ಸಂಸ್ಥೆಯ ಡಾ.ಅಲ್ಪೇಶ ಟೋಪರಾಣಿ ಹಾಗೂ ಸದಸ್ಯರು, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮತ್ತು ಆಡಳಿತ ಮಂಡಳಿವರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT